ಬೆಂಗಳೂರು(www.thenewzmirror.com):ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ದೃಷ್ಟಿಕೋನ ಖಂಡಿತ ಸರಿಯಲ್ಲ, ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಪ್ರೀತಿ ಇದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ಅಲ್ಪಸಂಖ್ಯಾತರ ವಿಚಾರ ಬಂದಾಗ ಯಾವ ಮಟ್ಟಕ್ಕೂ ಇಳೀತಾರೆ ಎಂಬ ಸತ್ಯ ಜನರಿಗೆ ಗೊತ್ತಿದೆ. ಆದರೆ, ದೇಶದ ವಿಚಾರ ಬಂದಾಗ, ಕಾಶ್ಮೀರದ ಭಯೋತ್ಪಾದಕರ ದಾಳಿ, ಹತ್ಯೆಗಳ ಆ ಘಟನೆಯನ್ನು ಪ್ರತಿಯೊಬ್ಬ ಸ್ವಾಭಿಮಾನಿ ಕೂಡ ಖಂಡಿಸಿದ್ದಾರೆ. ಭಾರತ ಯಾವತ್ತೂ ಯುದ್ಧ ಸಾರಿದ ಇತಿಹಾಸ ಇಲ್ಲ; ಆದರೆ, ಇವತ್ತು ಭಾರತೀಯರ ರಕ್ಷಣೆ ಮಾಡಬೇಕಾದ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕೋ ಅದನ್ನು ಪ್ರಧಾನಿಯವರು ಎಲ್ಲ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದರು.
ಇದರ ನಡುವೆ, ಸಿದ್ದರಾಮಯ್ಯನವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ದೃಷ್ಟಿಕೋನ ಖಂಡಿತ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಯಡಿಯೂರಪ್ಪ ಅವರ ಮಾತಿನಂತೆ ಸಿದ್ದರಾಮಯ್ಯನವರು ಈ ದೇಶದ ಜನರ ಕ್ಷಮೆ ಕೂಡ ಕೇಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರಿಂದ ಈ ರೀತಿಯ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ನುಡಿದರು.
ಜಾತಿ ಗಣತಿಗೆ ಸಂಬಂಧಿಸಿ ಸಿದ್ದರಾಮಯ್ಯನವರು ಹಲವಾರು ಸುತ್ತಿನ ಸಭೆಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳು ಮೊನ್ನೆ ಕ್ಯಾಬಿನೆಟ್‍ನ ವಿಶೇóಷ ಸಭೆ ಕರೆದಿದ್ದರು. ಕ್ಯಾಬಿನೆಟ್ ತೀರ್ಮಾನ ಕುರಿತು ನಿರ್ಣಯವೂ ಸಿದ್ಧವಿತ್ತು. ಆದರೂ ಕೂಡ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ಸಿನ ಹಿರಿಯ ನೇತಾರ ವೀರಪ್ಪ ಮೊಯಿಲಿಯವರೇ ಜಾತಿ ಜನಗಣತಿ 10 ವರ್ಷದಷ್ಟು ಹಳೆಯದು; ವೈಜ್ಞಾನಿಕವಾಗಿಲ್ಲ ಎಂದು ಹೇಳಿದ ಕುರಿತು ಗಮನಕ್ಕೆ ತಂದರು. ಈಡಿಗ, ಮಡಿವಾಳ ಸೇರಿ ಅನೇಕ ಹಿಂದುಳಿದ ಸಮುದಾಯಗಳು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಅಂಕಿಅಂಶಗಳ ಕುರಿತು ಆಕ್ಷೇಪಿಸಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಯಾಕೆ ಇಷ್ಟು ಆತುರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು.