ರೈತಪರ ಬಜೆಟ್ ಗೆ ಆಗ್ರಹ:ಮಂಡ್ಯ ಜಿಲ್ಲೆಯ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿದ ವಿಜಯೇಂದ್ರ

RELATED POSTS

ಮಂಡ್ಯ(thenewsmirror.com): ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ರೈತಪರ ನಿರ್ಧಾರ ಮಾಡಿಲ್ಲ,ಈಗಲಾದರೂ

ರಾಜ್ಯದ ಮುಂದಿನ ಬಜೆಟ್ ರೈತಪರ ಬಜೆಟ್ ಆಗಿರಲಿ ಎಂದು ಮುಖ್ಯಮಂತ್ರಿಗಳನ್ನು ವಿನಂತಿಸುವುದಾಗಿ ಮತ್ತು ಆಗ್ರಹಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೊತ್ತತ್ತಿ ಗ್ರಾಮದ ರೈತ ಸುಖೇಂದ್ರ ಶಿವಬಸಪ್ಪ ಅವರ ಜಮೀನಿನಲ್ಲಿ ಇಂದು ಭತ್ತ  ನಾಟಿ ಕಾರ್ಯಕ್ರಮದ ಬಳಿಕ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸದ್ಬುದ್ಧಿಯನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲಿ ಎಂದು ಪ್ರಾರ್ಥಿಸಿ ಪಕ್ಷದ ಜಿಲ್ಲೆಯ ಮುಖಂಡರು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಭತ್ತ ನಾಟಿ ಮಾಡಿದ್ದಾಗಿ ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಹಲವಾರು ಬಾರಿ ರೈತರ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನೂ ಜಾರಿಗೊಳಿಸಿದ್ದಾರೆ. ಅದನ್ಯಾಕೆ ಸಿದ್ದರಾಮಯ್ಯರ ಸರಕಾರ ನಿಲ್ಲಿಸಿದೆ? ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರು ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಲು 25 ಸಾವಿರ ರೂ. ಕಟ್ಟಿದರೆ ಸಾಕಾಗುತ್ತಿತ್ತು. ಸಿದ್ದರಾಮಯ್ಯರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇವತ್ತು 2ರಿಂದ 3 ಲಕ್ಷ ಖರ್ಚಾಗುತ್ತಿದೆ ಎಂದು ವಿವರಿಸಿದರು.

ಬಡವರ ವಿರೋಧಿ, ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರಕಾರ

ಒಂದು ಕಡೆ ಗ್ಯಾರಂಟಿ ಮೂಲಕ ಕೊಡುವುದಾಗಿ ಹೇಳುತ್ತಾರೆ. ಮತ್ತೊಂದು ಕಡೆ ಕಿತ್ತುಕೊಳ್ಳುವ ಕೆಲಸ ನಡೆಸುತ್ತಿದ್ದಾರೆ. ಇದು ಬಡವರ ವಿರೋಧಿ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿದರು. ಇದು ಅಭಿವೃದ್ಧಿ ಶೂನ್ಯ ಸರಕಾರ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.

ಇದು ರೈತವಿರೋಧಿ ಸರಕಾರ. ಈ ಅಧಿವೇಶನದಲ್ಲಿ ಬಿಜೆಪಿ, ಈ ಭ್ರಷ್ಟ ಕಾಂಗ್ರೆಸ್ ಸರಕಾರದ ಕಿವಿ ಹಿಂಡುವ ಕೆಲಸ ಮಾಡಲಿದೆ. ಕಾಂಗ್ರೆಸ್ ಸರಕಾರದ ನಿಜ ಬಣ್ಣವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಲಿದ್ದೇವೆ ಎಂದು ಹೇಳಿದರು.

ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡುವ ರೀತಿಯಲ್ಲಿ, ತಮಿಳುನಾಡಿನ ಸ್ಟಾಲಿನ್‍ಗೆ, ಯುಪಿಎ ಮಿತ್ರಕೂಟಕ್ಕೆ ಖುಷಿಪಡಿಸಲು ಯಥೇಚ್ಛವಾಗಿ ನೀರು ಬಿಡುವ ಕೆಲಸವನ್ನು ಇದೇ ಕಾಂಗ್ರೆಸ್ ಸರಕಾರ ಮಾಡಿತ್ತು ಎಂದು ಅವರು ಆಕ್ಷೇಪಿಸಿದರು.

ರಾಜ್ಯವು ಈಗಾಗಲೇ ಪ್ರಖರ ಬಿಸಿಲನ್ನು ನೋಡುತ್ತಿದೆ. ಉಷ್ಣಾಂಶದ ತೀವ್ರ ಹೆಚ್ಚಳವನ್ನೂ ನಿರೀಕ್ಷಿಸಲಾಗಿದೆ. ಸಿದ್ದರಾಮಯ್ಯನವರು ರೈತರ ಪರ ಬಜೆಟ್ ಮಂಡಿಸಲಿ; ಸರಕಾರ ಜಾನುವಾರುಗಳಿಗೆ ಮೇವನ್ನು ಕ್ರೋಡೀಕರಿಸಿ ಇಡಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಕಡೆ ಗಮನಿಸಬೇಕು ಎಂದು ಒತ್ತಾಯಿಸಿದರು.

ಕಿಸಾನ್ ಸಮ್ಮಾನ್ ಹೆಚ್ಚುವರಿ ಮೊತ್ತ, ವಿದ್ಯಾನಿಧಿ ಸ್ಥಗಿತಗೊಳಿಸಿದ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರಿಗೆ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ 4 ಸಾವಿರ ರೂ. ಹೆಚ್ಚುವರಿಯಾಗಿ ರೈತರಿಗೆ ನೀಡಿದರು. ಕಾಂಗ್ರೆಸ್ ಸರಕಾರ ಬಂದ ಬಳಿಕ ಅದನ್ನು ನಿಲ್ಲಿಸಿದ್ದಾರೆ. ಹಿಂದೆ ಬಿಜೆಪಿ ಸರಕಾರವು ರೈತ ವಿದ್ಯಾನಿಧಿ ಕೊಟ್ಟಿದ್ದು, ಅದನ್ನೂ ನಿಲ್ಲಿಸಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.

ಮಂಡ್ಯ ಜಿಲ್ಲೆ ಎಂದರೆ ಅದು ಸಕ್ಕರೆಯ ನಾಡು. ಅಕ್ಕರೆಯ ನಾಡು; ಮಂಡ್ಯ ಜಿಲ್ಲೆಯ ಜಲ, ಸಿರಿ ಮತ್ತು ಧಾನ್ಯಸಂಪತ್ತು ಬಗ್ಗೆ ಮೈಸೂರು ಮಹಾರಾಜರ ಕನಸು ಕಂಡಿದ್ದರು. ಮಂಡ್ಯ ಜಿಲ್ಲೆ ಯಾವತ್ತೂ ಹಚ್ಚ ಹಸುರಾಗಿರಬೇಕು. ಈ ಭಾಗದ ರೈತರಿಂದ ಮೈಸೂರು ಸೀಮೆಯ ಎಲ್ಲ ಜನರಿಗೆ ಎರಡು ತುತ್ತು ಅನ್ನ ಕೊಡುವ ಕೆಲಸ ಆಗಬೇಕು ಎಂದು ಕನಸು ಕಂಡಿದ್ದರು ಎಂದು ವಿವರಿಸಿದರು.

ಮಂಡ್ಯ ಜಿಲ್ಲೆ ಎಂದರೆ ಒಬ್ಬ ರೈತ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ನಾಡು. ಬೂಕನಕೆರೆಯ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯಭೂಮಿ ಎಂದು ತಿಳಿಸಿದರು. ನಾನು ಕೂಡ ಮಂಡ್ಯ ಜಿಲ್ಲೆಯ ಮೊಮ್ಮಗ ಎಂದರು. ಯಡಿಯೂರಪ್ಪ ಅವರಿಗೆ ರೈತಪರ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ಮಣ್ಣು ಪ್ರೇರಣೆ ಕೊಟ್ಟಿದೆ ಎಂದು ವಿಶ್ಲೇಷಿಸಿದರು.

ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಂಡು, ರೈತರಿಗೆ ಒಂದು ಪ್ರತ್ಯೇಕ ಬಜೆಟ್ ಮಂಡಿಸಿದ್ದರು. ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕೊಟ್ಟಂಥ ಏಕೈಕ ಮುಖ್ಯಮಂತ್ರಿ, ಧೀಮಂತ ನಾಯಕ, ರೈತನಾಯಕ ಯಡಿಯೂರಪ್ಪನವರು ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist