ಬಿಜೆಪಿ ಶಾಸಕಾಂಗ ಸಭೆ:ಅಧಿವೇಶನದಲ್ಲಿ ಭ್ರಷ್ಟ ಕಾಂಗ್ರೆಸ್ ಸರಕಾರ ಕಟ್ಟಿ ಹಾಕುವ ನಿರ್ಧಾರ ಕೈಗೊಂಡ ಕೇಸರಿ ಪಡೆ

RELATED POSTS

ಬೆಂಗಳೂರು(thenewsmirror.com): ಅಧಿವೇಶನದಲ್ಲಿ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಇಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರು ಅಧಿವೇಶನವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಅಭಿವೃದ್ಧಿಶೂನ್ಯ- ಅಸಮರ್ಥ ಕಾಂಗ್ರೆಸ್ ಸರಕಾರ ಇದೆ. ಇದು ದಲಿತ, ಹಿಂದುಳಿದ ವರ್ಗಗಳ ವಿರೋಧಿ ಕಾಂಗ್ರೆಸ್ ಸರಕಾರ. ಕರ್ನಾಟಕದಲ್ಲಿ ಇರುವುದು ಬೆಲೆ ಏರಿಕೆಯ ಕಾಂಗ್ರೆಸ್ ಸರಕಾರ ಎಂದು ಟೀಕಿಸಿದರು.

ಜನವಿರೋಧಿ, ಬಡವರ ವಿರೋಧಿ, ದಲಿತ- ಹಿಂದುಳಿದ ವಿರೋಧಿಗಳೆನಿಸಿದ ದುಷ್ಟ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು. ಕಾಂಗ್ರೆಸ್ ಸರಕಾರವು ಹಿಂದಿನ ಬಿಜೆಪಿ ಸರಕಾರ ಆರಂಭಿಸಿದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಿ ಹಾಕುವ ಕೆಲಸ ಮಾಡಿದೆ. ಹಣದ ಕೊರತೆ, ಅಭಾವದಿಂದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಆಕ್ಷೇಪಿಸಿದರು.

ಭಾಗ್ಯಲಕ್ಷ್ಮೀ ಯೋಜನೆಯನ್ನು ನಿಲ್ಲಿಸಿದ್ದಾರೆ. ಮಂಡ್ಯದಲ್ಲಿ ತೋಟಗಾರಿಕಾ ವಿವಿ ಆರಂಭಿಸುವುದಾಗಿ ಚಲುವರಾಯಸ್ವಾಮಿ ಹೇಳುತ್ತಾರೆ. ಬಾಗಲಕೋಟೆಯಲ್ಲಿ ತೋಟಗಾರಿಕಾ ವಿವಿ ಇದೆ. ಇದರ ಮೂಲಕ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಟೀಕಿಸಿದರು. ಅಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿ ಇಲ್ಲಿಗೆ ತರುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷ ನಿರಂತರ ಅನ್ಯಾಯ ಮಾಡುತ್ತಿದೆ. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನದ ನೆಪದಲ್ಲಿ ಕೆಎಸ್‍ಆರ್‍ಟಿಸಿಗೆ 7 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಪಿಡಬ್ಲ್ಯುಡಿ ಮತ್ತಿತರ ಇಲಾಖೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯ ಆಗುತ್ತಿಲ್ಲ; ಒಟ್ಟಾರೆಯಾಗಿ ಇಂಥ ಅಭಿವೃದ್ಧಿಶೂನ್ಯ ಸರಕಾರದ ಕಿವಿ ಹಿಂಡುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ತಿಳಿಸಿದರು.

ಈ ಸರಕಾರವನ್ನು ಬೆತ್ತಲೆಗೊಳಿಸುವ ಕೆಲಸವನ್ನು ಬಿಜೆಪಿ ಅಧಿವೇಶನದಲ್ಲಿ ಪರಿಣಾಮಕಾರಿಯಾಗಿ ಮಾಡಲಿದೆ ಎಂದು ಹೇಳಿದರು. ನುಡಿದಂತೆ ನಡೆದ ಸರಕಾರ ಇದಲ್ಲ; ಇದು ಎಡವಿ ಮುಗ್ಗರಿಸಿದ ಸರಕಾರ ಎಂದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಅಧಿವೇಶನದಲ್ಲಿ ಹಾಜರಾತಿ ಹೆಚ್ಚು ಮಾಡಿ, ಸರಕಾರದ ವೈಫಲ್ಯಗಳನ್ನು ತಿಳಿಸಿ, ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.ವಿಧಾನಸಭೆಯ ಹೊರಗಡೆ ಎಸ್‍ಸಿ ಎಸ್‍ಟಿ ಹಣ ದುರುಪಯೋಗ, ಬಗರ್ ಹುಕುಂ ಸಾಗುವಳಿ ಅರ್ಜಿಗಳ ರದ್ದತಿ, ವಿಶ್ವವಿದ್ಯಾಲಯಗಳ ರದ್ದು ಮಾಡುವ ಕ್ರಮದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ವಿವರಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಇದೊಂದು ವಿಫಲ ಸರಕಾರ ಎಂದು ಟೀಕಿಸಿದರು. ಯಾವುದೇ ವಿಧದಲ್ಲೂ ಕೂಡ ಇವರ ಸಾಧನೆ ಶೂನ್ಯ ಎಂದು ದೂರಿದರು. ಸರಕಾರವನ್ನು ಮೇಲ್ಮನೆಯಲ್ಲಿ ಕಟ್ಟಿ ಹಾಕುವ ಕುರಿತು ಸಲಹೆಗಳನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ಇವರಿಗೆ ವಿದ್ಯೆ, ದಲಿತರ ಸಮಸ್ಯೆಗಳು ಆದ್ಯತಾ ವಿಷಯವಲ್ಲ; ಈಗಾಗಲೇ ದಲಿತರ- ಬಡವರ ಸಮಾಧಿ ಕಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಕೂಡ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ಪ್ರಕಟಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist