ಬೆಂಗಳೂರು(thenewzmirror.com) : ಪ್ರತಿಪಕ್ಷಗಳ ಟೀಕೆ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸಮರ್ಥಿಸಿಕೊಂಡಿದ್ದು, ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಎಲ್ಲಾ ವರ್ಗಗಳ ಅಭಿವೃದ್ದಿಗೆ ನಮ್ಮ ಸರ್ಕಾರದ ಬದ್ದತೆಯ ಬಗೆಗಿನ ಸ್ಪಷ್ಟ ಚಿತ್ರಣವನ್ನು ರಾಜ್ಯಪಾಲರ ಭಾಷಣದಲ್ಲಿ ತೋರಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಿಧಾನಪರಿಷತ್ತಿನ ಸಭಾ ನಾಯಕ ಎನ್ ಎಸ್ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ, ರಾಜ್ಯದ ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎನ್ನುವ ವಿರೋಧ ಪಕ್ಷಗಳ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಸಾಧನೆಯನ್ನು ನಮ್ಮ ಸರಕಾರ ತೋರಿಸಿದೆ ಎನ್ನುವುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿದೆ. ಇದೇ ವೇಳೆ ರಾಜ್ಯದ ಸರ್ವತೋಮುಖ ಅಭಿವೃದ್ದಿಗೂ ನಮ್ಮ ಸರಕಾರ ಹಲವಾರು ನೂತನ ಯೋಜನೆಗಳನ್ನು ಹಮ್ಮಿಕೊಂಡಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಕಳೆದ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದ್ದ 344 ಘೋಷಣೆಗಳ ಪೈಕಿ 331 ಯೋಜನೆಗಳೀಗೆ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ಇದು ನಮ್ಮ ನುಡಿದಂತೆ ನಡೆಯುವ ಸರಕಾರದ ಯಶೋಗಾಥೆಯಾಗಿದೆ. ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಆದ್ಯತೆ ನೀಡಿದೆ. ಈಗಾಗಲೇ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ವರದಿಯನ್ನು ಆಧರಿಸಿ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ನಮ್ಮ ಉದ್ದೇಶವಾಗಿದೆ ಎನ್ನುವುದನ್ನ ರಾಜ್ಯಪಾಲರ ಭಾಷಣದಲ್ಲಿ ವಿವರಿಸಲಾಗಿದೆ ಎಂದಿದ್ದಾರೆ.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಪ್ರಸ್ತುತ 5847 ಹೆಕ್ಟೇರ್ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಿರುವ ಬಗ್ಗೆ, ರಾಜ್ಯಾದ್ಯಂತ 165 ಬ್ಯಾರೇಜ್‌ಗಳ ನಿರ್ಮಾಣ, ಲಕ್ಷ್ಮಣ ತೀರ್ಥ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಚಿಲ್ಕುಂದ ಮತ್ತು ಇತರೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 14 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂ.19 ಕೋಟಿ ಮೊತ್ತದಲ್ಲಿ ಕೈಗೊಂಡು ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಿರುವುದನ್ನು ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ. ಈ ಮೂಲಕ ಎಲ್ಲಾ ವರ್ಗಗಳ ಅಭಿವೃದ್ದಿಯ ಬಗ್ಗೆ ನಮ್ಮ ಸರಕಾರದ ಬದ್ದತೆಯ ಸ್ಪಷ್ಟ ಚಿತ್ರಣವನ್ನು ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದಾರೆ ಎಂದು ಸಚಿವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.