ಬ್ರ್ಯಾಂಡ್‌ ಎಂದರೆ ಬೆಂಗಳೂರನ್ನು ಮುಳುಗಿಸುವುದಾ?: ಕುಮಾರಸ್ವಾಮಿ

RELATED POSTS

ನವದೆಹಲಿ(www.thenewzmirror.com): ಯಾವ ಪುರುಷಾರ್ಥಕ್ಕೆ ಗ್ರೇಟರ್‌ ಬೆಂಗಳೂರು? ಯಾರ ಉದ್ಧಾರಕ್ಕೆ ಬ್ರ್ಯಾಂಡ್‌ ಬೆಂಗಳೂರು? ಲೂಟಿ ಹೊಡೆಯೋದಕ್ಕೆ ಹೊಸ ಹೊಸ ಹೆಸರೇ?! ಎರಡು ವರ್ಷಗಳಿಂದ ಬ್ರ್ಯಾಂಡ್‌.. ಬ್ರ್ಯಾಂಡ್‌.. ಎಂದು ಭಜನೆ ಮಾಡುತ್ತಿದ್ದೀರಲ್ಲ.. ಬ್ರ್ಯಾಂಡ್‌ ಎಂದರೆ ಬೆಂಗಳೂರನ್ನು ಮುಳುಗಿಸುವುದಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು; ಸತತ ಮಳೆಯಿಂದ ತತ್ತರಿಸುತ್ತಿರುವ ಜನರು ಡಿಸಿಎಂ ಡಿಕೆ ಶಿವಕುಮಾರ್ ಅವರ ಬ್ರ್ಯಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ. ಜನ ಸತ್ತು ಬದುಕುತ್ತಿದ್ದರೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶದ ಚಿಂತೆ! ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತು ಬೇರೆ..! ಬೆಂಗಳೂರು ಜನ ಬ್ರ್ಯಾಂಡೆಡ್ ನರಕದಲ್ಲಿದ್ದಾರೆ! ನಗರ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸರಕಾರದ ಸಾಧನೆ ಬೆಂಗಳೂರು ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು. ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ. ವಾರ್ ರೂಂನಲ್ಲಿ ಕೂತು ಜೆಡಿಎಸ್, ಬಿಜೆಪಿ ಮೇಲೆ ಪ್ರಾಕ್ಸಿವಾರ್ ಮಾಡಿದರೆ ಪ್ರಯೋಜನವೇನು) ಕೈಲಾಗದವನಿಗೆ ಬಾಯಿ ಭದ್ರ ಇರುವುದಿಲ್ಲ. ಈ ಮನುಷ್ಯ ಆ ಪರಿಸ್ಥಿತಿಯಲ್ಲಿದ್ದಾರೆ! ಎಂದು ಕುಮಾರಸ್ವಾಮಿ ಅವರು ಡಿಕೆಶಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಈ ವ್ಯಕ್ತಿ ಪಾಲಿಗೆ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ. ಬಯಸಿದಾಗ ನೋಟಿನ ಮಳೆ ಸುರಿಸುವ ಅಕ್ಷಯಪಾತ್ರೆ!! ಎರಡು ವರ್ಷಗಳಿಂದ ಸುರಿದ ನೋಟಿನ ಮಳೆ ಪ್ರಮಾಣ ಎಷ್ಟು? ಕೈ ಇಟ್ಟ ಕಡೆಯಲ್ಲಾ ದುಡ್ಡು! ಜನರ ಮೇಲೆ ತೆರಿಗೆ ಮೇಲೆ ತೆರಿಗೆ! ಎರಡು ವರ್ಷಗಳಲ್ಲಿ ಎಷ್ಟೊಂದು ಬಾರಿ ಸಾಯಿ ಬಡವಾಣೆ ಮುಳುಗಿತು? ಅಲ್ಲಿಗೆ ಡಿಸಿಎಂ ಎಷ್ಟು ಸಲ ಹೋಗಿದ್ದರು? ಈ ಹಿಂದೆ ನಗರಾಭಿವೃದ್ಧಿ ಮಂತ್ರಿ ಆಗಿದ್ದಾಗ ನಗರಕ್ಕೇನು ಮಾಡಿದ್ದರು? ಸಚಿವಗಿರಿಯನ್ನು ಸ್ವ-ನಗದು ಅಭಿವೃದ್ಧಿಗೆ ಬಳಸಿಕೊಂಡರಷ್ಟೇ ಎಂದು ಆರೋಪಿಸಿದ್ದಾರೆ.

ಮಾತೆತ್ತಿದರೆ ಬೆಂಗಳೂರಿಗೆ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡಿದರೆಂದು ಕೇಳುತ್ತಾರೆ. 2006ರ 20 ತಿಂಗಳ ಅವಧಿಯಲ್ಲಿ 58 ರಸ್ತೆ ಅಗಲೀಕರಣ, ಮೆಟ್ರೋ ಮೊದಲ ಹಂತ ಕಾಮಗಾರಿಗೆ ಚಾಲನೆ, ಹೊಸ ಏರ್‌ʼಪೋರ್ಟ್‌ ರಸ್ತೆ, ನೆಲಮಂಗಲ ರಸ್ತೆ, ಎಲೆಕ್ಟ್ರಾನಿಕ್ ರಸ್ತೆ ಅಭಿವೃದ್ಧಿ ಸೇರಿ ಎಷ್ಟೋ ಕೆಲಸ ಮಾಡಿದ್ದೇನೆ. ಕೆರೆಯನ್ನೇ ನುಂಗಿ ಜೆಪಿ ನಗರ ಡಾಲರ್ಸ್‌ ಕಾಲೋನಿ ಮಾಡಿದ್ದರಲ್ಲ, ಆ ಮನೆಗಳಿಗೆ ಕೆರೆ ನೀರು ನುಗ್ಗುತ್ತಿದ್ದನ್ನು ತಪ್ಪಿಸಿದ್ದು ಯಾರು? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ನನ್ನ ಆಡಳಿತ ಅತ್ಯಲ್ಪ. ಹಿಂದೆ ಬಿಜೆಪಿ ಜತೆ 20 ತಿಂಗಳು, ಇನ್ನೊಮ್ಮೆ ನಿಮ್ಮ ಜೊತೆ 14 ತಿಂಗಳು. ನನ್ನ ಕೆಲಸಗಳಿಗೆ ದಾಖಲೆಗಳಿವೆ , ಓದಿಕೊಳ್ಳಿ ಎಂದಿರುವ ಅವರು; ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ಜನ ನಿಮಗೆ ಕುದುರೆ ಕೊಟ್ಟಿದ್ದಾರೆ. ಕುದುರೆ ಶೋಕಿಗಲ್ಲ. ಪೆನ್ನು ಅಲಂಕಾರಕ್ಕಲ್ಲ. ಇನ್ನಾದರೂ ಮಾತು ನಿಲ್ಲಿಸಿ ಕೆಲಸ ಮಾಡಿ. ಇಲ್ಲವಾದರೆ ನಿಮ್ಮ ಬ್ರ್ಯಾಂಡಿಗೆ ಜನ ಅದೇ ನೀರು ಬಿಟ್ಟಾರು! ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist