ಬೆಂಗಳೂರು, (www.thenewzmirror.com) :
ವಿಶ್ವದಲ್ಲಿ ಪ್ರತಿ ದಶಕಕ್ಕೂ ಉಷ್ಣತೆ ಹೆಚ್ಚುವ ಮೂಲಕ ಭೂಮಿ ಬಿಸಿಯುಂಡೆಯಂತಾಗುತ್ತಿದೆ ಎಂದು AMD ಪ್ರಾದೇಶಿಕ ನಿರ್ದೇಶಕ ಧೀರಜ್ ಪಾಂಡೆ ಕಳವಳ ವ್ಯಕ್ತಪಡಿಸಿದದರು. ಇತ್ತೀಚೆಗೆ ಬೆಂಗಳೂರು ವಿವಿಯಲ್ಲಿ ಎರಡು ದಿನಗಳ ಕಾಲ ‘ಹವಾಮಾನ ವೈಪರೀತ್ಯ ಮತ್ತು ಭೂ ವಿಜ್ಞಾನ’ ವಿಚಾರದ ಕುರಿತು ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 19 ನೇ ಶತಮಾನದಿಂದ ಈಚೆಗೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ವಿಶ್ವದಲ್ಲಿ ಪ್ರತಿ ದಶಕಕ್ಕೂ 1.10 ಡಿಗ್ರಿಗಳಷ್ಟು ತಾಪಮಾನ ಹೆಚ್ಚಾಗುತ್ತಿದೆ. ಕಳೆದ ದಶಕದಲ್ಲಿ ವಿಶ್ವ ಅತಿ ಹೆಚ್ಚು ಉಷ್ಣತೆ, ಜಾಗತಿಕ ತಾಪಮಾನವನ್ನು ಕಂಡಿದೆ. ಹೀಗೆ ಮುಂದುವರೆಯುವುದು ವಿಶ್ವಕುಲಕ್ಕೆ ಒಳಿತಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭೂ ವಿಜ್ಞಾನ ವಿಭಾಗ 125 ವರ್ಷಗಳು ಪೂರೈಸಿ ದೇಶದ ಇತಿಹಾಸದಲ್ಲಿ ಅಗ್ರಮಾನ್ಯವಾಗಿ ನಿಂತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ 1892 ಭೂ ವಿಜ್ಞಾನ ವಿಭಾಗ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.1964 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಭೂವಿಜ್ಞಾನ ವಿಭಾಗ ಕೂಡ ಬೆಂ.ವಿವಿ ವ್ಯಾಪ್ತಿಗೆ ಸೇರಿಕೊಂಡಿತ್ತು. ಸುಧೀರ್ಘ 125 ವರ್ಷಗಳ ಕಾಲ ಭೂವಿಜ್ಞಾನ ಕ್ಷೇತ್ರದಲ್ಲಿ ಭೂವಿಜ್ಞಾನ ವಿಭಾಗ ತನ್ನದೇ ವಿಶಿಷ್ಟ ಸಂಶೋಧನೆ, ಅನ್ವೇಷಣೆಗಳ ಮೂಲಕ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಮತ್ತು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿಯೂ ಕೂಡ ಯಶಸ್ವಿಯಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದೇಶ,ವಿದೇಶದ ಭೂ ವಿಜ್ಞಾನಿಗಳು ಭಾಗವಹಿಸಿ ಹವಾಮಾನ ವೈಪರೀತ್ಯಗಳ ಕುರಿತು ವಿಶೇಷ ಅವಲೋಕ ನಡೆಸಿದರು. ನುರಿತು ಭೂವಿಜ್ಞಾನಿಗಳಿಂದ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ಮುಖ್ಯವಾಗಿ ಜಾಗತಿಕ ತಾಪಮಾನ, ಇಂಗಾಲ ಡೈಆಕ್ಸೈಡ್ ಏರಿಕೆಗೆ ಕಾರಣ, ಹಿಮ ಕರಗುವಿಕೆ,ಸಮುದ್ರ ಮಟ್ಟ ಏರಿಕೆಯಾಗುತ್ತಿರುವ ಕುರಿತು, ಭೂಕುಸಿತ, ಭೂಅಪಾಯಗಳ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ, ನವೀಕರಣ ಇಂಧನದ ಸದ್ಬಳಕೆಯ ಜತೆಗೆ ಭೂ ಸಮತೋಲನ ವಿಷಯಗಳು ಕುರಿತು ಚರ್ಚೆ ನಡೆಸಲಾಯ್ತು.
ಹಸಿರು ಇಂಧನ ಬಳಕೆ ವಿಶ್ವ ಕೈ ಜೋಡಿಸಬೇಕು. ರಾಜಕೀಯ ಶಕ್ತಿಪ್ರದರ್ಶನಕ್ಕೆ ಬಲಿಷ್ಠ ರಾಷ್ಟ್ರಗಳು ಅಕ್ರಮವಾಗಿ ಅಣುಬಾಂಬ್ ಉತ್ಪಾದನೆಯನ್ನು ನಿಲ್ಲಿಸಬೇಕು.ಜಾಗತಿಕ ತಾಪಮಾನ ಮತ್ತು ಪ್ರಾಕೃತಿಕ ವಿಕೋಪಗಳ ಕುರಿತು ಭೂವಿಜ್ಞಾನಿಗಳ ಸಂಶೋಧನೆ ಪರಿಹಾರಗಳ ಅನುಷ್ಠಾನಕ್ಕೆ ಸರ್ಕಾರಗಳು ಕ್ರಮ ವಹಿಸಬೇಕು” ಎಂದು ಧೀರಜ್ ಪಾಂಡೆ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಭೂವಿಜ್ಞಾನ ಸಂಶೋದಕಿ ಗೆರ್ಟಾ ಕೆಲ್ಲರ್,AMD ಪ್ರಾದೇಶಿಕ ನಿರ್ದೇಶಕ ಧೀರಜ್ ಪಾಂಡೆ, ಕುಲಪತಿ ಡಾ.ಜಯಕರ ಎಸ್ ಎಂ, ಕುಲಸಚಿವ ಶೇಕ್ ಲತೀಫ್, ಕುಲಸಚಿವ ಮೌಲ್ಯಮಾಪನ ಡಾ.ಸಿ.ಶ್ರೀನಿವಾಸ್, ಪ್ರೊ.ಡಾ.ಎನ್.ಮಲರ್ಕೋಡಿ, ಡಾ.ಅಶೋಕ್ ಡಿ ಹಂಜಗಿ ಸೇರಿದಂತೆ ಭೂವಿಜ್ಞಾನಿಗಳು, ಪ್ರಾಧ್ಯಾಪಕರು, ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.