ಕಾವೇರಿ ಆರತಿ ವೀಕ್ಷಣೆಗೆ ದಸರಾ ಮಾದರಿ ಉಚಿತ ಮತ್ತು ಟಿಕೆಟ್ ವ್ಯವಸ್ಥೆ: ಡಿಸಿಎಂ ಡಿ.ಕೆ. ಶಿವಕುಮಾರ್

RELATED POSTS

ಮಂಡ್ಯ(www.thenewzmirror.com):ದಸರಾದಲ್ಲಿ ಕೆಲವರು ಟಿಕೆಟ್ ಪಡೆದು ವೀಕ್ಷಣೆ ಮಾಡುತ್ತಾರೆ, ಮತ್ತೆ ಕೆಲವರು ಉಚಿತವಾಗಿ ವೀಕ್ಷಣೆ ಮಾಡುತ್ತಾರೆ. ಅದೇ ರೀತಿ ಕಾವೇರಿ ಆರತಿ ಕಾರ್ಯಕ್ರಮಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದು. ಸಾರ್ವಜನಿಕರು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆ ಕೆಆರ್ ಎಸ್ ನಲ್ಲಿ “ಕಾವೇರಿ ಆರತಿ” ನಡೆಸುವ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

“ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆ ಸೇರಿಸಿ ಕಾರ್ಯಕ್ರಮ ರೂಪಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಮಿತಿಗೆ ಸಲಹೆ ನೀಡಿದ್ದೇನೆ. ಈ ಸಮಿತಿ ಮುಂದಿನ 8-10 ದಿನಗಳಲ್ಲಿ ಕಾರ್ಯಕ್ರಮದ ನೀಲನಕ್ಷೆ ಸಿದ್ಧಪಡಿಸಲಿದೆ” ಎಂದು ತಿಳಿಸಿದರು.

“ಕೊಡಗಿನಿಂದ ಹಿಡಿದು, ದಕ್ಷಿಣ ಕನ್ನಡ, ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಚಾಮರಾಜನಗರ ಭಾಗದ ಜನರು ಈ ತಾಯಿಗೆ ನಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಾವೇರಿ ನೀರು ಬಳಸುವ ತಮಿಳುನಾಡಿನ ಜನರೂ ಕೂಡ ಬಂದು ಕಾವೇರಿ ತಾಯಿಗೆ ಪೂಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಈ ಕಾವೇರಿ ಆರತಿ ಕಾರ್ಯಕ್ರಮ ವಿನ್ಯಾಸ, ಸ್ವರೂಪ ಸೇರಿದಂತೆ ಇತರೆ ರೂಪುರೇಷೆಗಳ ಅಧಿಕಾರಿಗಳು ಹಾಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.

“ಚೆಸ್ಕಾಂ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಇಬ್ಬರು ಜಿಲ್ಲಾಧಿಕಾರಿಗಳು, 2 ಸ್ಥಳೀಯ ಶಾಸಕರು ಹಾಗೂ ಪರಿಷತ್ ಸದಸ್ಯರು, ಸಿಇಓಗಳು, ಬಿಡ್ಬ್ಲ್ಯೂಎಸ್ಎಸ್ ಬಿ ಮುಖ್ಯಸ್ಥರು ಸೇರಿ ಸಮಿತಿ ರಚಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಲಿದ್ದಾರೆ. ಚೆಸ್ಕಾಂ ಸಂಸ್ಥೆ ದೀಪಾಲಂಕಾರ ವ್ಯವಸ್ಥೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.

“ಈ ಕಾವೇರಿ ಆರತಿಗೆ ಸರ್ಕಾರ 92 ಕೋಟಿ ನೀಡಲು ತೀರ್ಮಾನಿಸಿದ್ದು, ಇದರ ಜತೆಗೆ ಬೇರೆ ಇಲಾಖೆಗಳು ಅಗತ್ಯ ಸಹಕಾರ ನೀಡಲಿವೆ. ಕನಿಷ್ಠ ಸುಮಾರು 10 ಸಾವಿರ ಜನರು ಕೂತು ಈ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ಎಷ್ಟು ದಿನ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಸಮಿತಿ ತೀರ್ಮಾನ ಮಾಡಲಿದೆ. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಇಲ್ಲಿನ ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ. ಧಾರ್ಮಿಕ ದತ್ತಿ ಇಲಾಖೆಯವರು ಕಾರ್ಯಕ್ರಮದಲ್ಲಿ ಯಾವ ರೀತಿ ಪೂಜೆ, ವೇದಗೋಷ್ಠಿ ಮಾಡಬೇಕು ಎಂದು ವರದಿ ನೀಡಿದ್ದು, ಎಲ್ಲವನ್ನು ಕ್ರೂಢೀಕರಿಸಿ ಅಂತಿಮ ರೂಪುರೇಷೆ ನೀಡಲಾಗುವುದು. ಈ ವಿಚಾರವಾಗಿ ಯಾವುದಾದರೂ ಸಂಘಟನೆಗಳು ನಮ್ಮ ಜತೆ ಚರ್ಚೆ ಮಾಡಲು ಇಚ್ಛಿಸಿದರೆ ಕರೆದು ಮಾತನಾಡುತ್ತೇವೆ. ಬೇರೆಯವರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ” ಎಂದು ಹೇಳಿದರು.

ಬೃಂದಾವನ ಉನ್ನತೀಕರಣಕ್ಕಾಗಿ ಯೋಜನಾ ಪ್ರಾಧಿಕಾರ:

“ಇನ್ನು ಬೃಂದಾವನ ಉದ್ಯಾನವನ ಉನ್ನತೀಕರಣಕ್ಕಾಗಿ ನಾನು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅಲ್ಲಿ ಯೋಜನಾ ಪ್ರಾಧಿಕಾರ ಮಾಡಲು ತೀರ್ಮಾನಿಸಿದ್ದು, ನಾಲ್ಕು ಪಂಚಾಯ್ತಿ ಸೇರಿಸಲಾಗುತ್ತಿದೆ. ಪಂಚಾಯ್ತಿಗಳ ಅಸ್ಥಿತ್ವಕ್ಕೆ ತೊಂದರೆ ಆಗುವುದಿಲ್ಲ. ಅವುಗಳು ತಮ್ಮ ಕಾರ್ಯ ಮುಂದುವರಿಸಲಿವೆ. ಅವರ ಅಧಿಕಾರ ಮೊಟಕುಗೊಳಿಸುವುದಿಲ್ಲ. ರಸ್ತೆ, ಪಾರ್ಕ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ಪ್ರಕಾರ ಜಾಗ ನೀಡುವ ಕೆಲಸವನ್ನು ಯೋಜನಾ ಪ್ರಾಧಿಕಾರ ಮಾಡಲಿದೆ. ಇದು ಅಭಿವೃದ್ಧಿ ಪ್ರಾಧಿಕಾರವಲ್ಲ, ಯೋಜನಾ ಪ್ರಾಧಿಕಾರ ಮಾತ್ರ. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಯೋಜನಾ ಪ್ರಾಧಿಕಾರದಂತೆ ಇದು ಇರಲಿದೆ. ಇಲ್ಲಿಂದ ಬಂದ ಹಣವನ್ನು ಇಲ್ಲಿನ ಅಭಿವೃದ್ಧಿಗೆ ವಿನಿಯೋಗಿಸಲು ಈ ಪ್ರಾಧಿಕಾರ ಯೋಜನೆ ರೂಪಿಸಲಿದೆ” ಎಂದು ತಿಳಿಸಿದರು.

“ಬೃಂದಾವನ ಉದ್ಯಾನವನ ಉನ್ನತೀಕರಣಕ್ಕೆ 7 ಸಂಸ್ಥೆಗಳು ಮುಂದಾಗಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಧ್ಯದಲ್ಲೇ ಇದರ ರೂಪುರೇಷೆ ಸಿದ್ಧಪಡಿಸಲಾಗುವುದು. ಈ ಭಾಗದಲ್ಲಿ ಏನೇ ಉದ್ಯೋಗ ಸೃಷ್ಟಿಯಾದರೂ ಈ ಭಾಗದ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ಮೊದಲು ಆದ್ಯತೆ ನೀಡಲು ಷರತ್ತು ಹಾಕಲಾಗಿದೆ. ಸ್ಥಳೀಯ ಯುವಕರಿಗೆ ಈ ಸಂಸ್ಥೆಗಳು ತರಬೇತಿ ನೀಡಿ ಉದ್ಯೋಗ ನೀಡಬೇಕು ಎಂದು ಸೂಚಿಸಲಾಗಿದೆ” ಎಂದರು. 

ಫ್ರೀ,ಫೀ ಎರಡೂ ವ್ಯವಸ್ಥೆ:

ಕಾವೇರಿ ಆರತಿಯನ್ನು ಯಾವಾಗ ಮಾಡಬಹುದು ಎಂದು ಕೇಳಿದಾಗ, “ನಾನು ದಸರಾ ಜತೆಯಲ್ಲೇ ಮಾಡಲು ತರಾತುರಿಯಲ್ಲಿದ್ದೇನೆ. ಈ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಈ ಸಮಿತಿ ರೂಪುರೇಷೆಗಳನ್ನು ಎಷ್ಟು ಬೇಗ ನೀಡುತ್ತಾರೋ ನೋಡೋಣ” ಎಂದರು.

ಎಲ್ಲಿ ಮಾಡಲಾಗುವುದು ಎಂದು ಕೇಳಿದಾಗ, “ನಾನು ಜಾಗ ಪರಿಶೀಲನೆ ಮಾಡಿದ್ದೇನೆ. ಈ ವಿಚಾರವಾಗಿ ತಾಂತ್ರಿಕ ಸಮಿತಿ ಅಭಿಪ್ರಾಯ ಪಡೆಯಲಾಗಿದೆ. ನೀರು ಸಂಗ್ರಹವಿರಬೇಕು, ಅಣೆಕಟ್ಟಿನಿಂದ ಸ್ವಲ್ಪ ದೂರದಲ್ಲಿ ಇರಬೇಕು. ಪಾರ್ಕಿಂಗ್ ವ್ಯವಸ್ಥೆ, ಕಲಾವಿದರು, ಪೂಜೆ ಮಾಡುವವರಿಗೆ ಜಾಗ ಕಲ್ಪಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ಜಾಗ ನಿರ್ಮಿಸಲಾಗುವುದು. ಬೋಟಿಂಗ್ ವ್ಯವಸ್ಥೆ ಜಾಗವೇ ಬೇರೆ, ಈ ಕಾರ್ಯಕ್ರಮದ ಜಾಗವೇ ಪ್ರತ್ಯೇಕವಾಗಿರಲಿದೆ. ಸಮಿತಿಯು ಈ ವಿಚಾರವಾಗಿ ತೀರ್ಮಾನ ಮಾಡಲಿದೆ” ಎಂದರು.

ಟಿಕೆಟ್ ವ್ಯವಸ್ಥೆ ಇರುತ್ತದೆಯೇ ಎಂದು ಕೇಳಿದಾಗ, “ಇಲ್ಲಿ ಟಿಕೆಟ್ ಕೂಡ ಇರುತ್ತದೆ, ಉಚಿತ ಪ್ರವೇಶ ವ್ಯವಸ್ಥೆಯೂ ಇರುತ್ತದೆ. ಬಡವ ಆರತಿ ನೋಡಲು ಬಂದರೆ ಆತನಿಗೆ ಬೇಡ ಎನ್ನಲು ಸಾಧ್ಯವೇ? ದಸರಾದಲ್ಲಿ ಕೆಲವರು ಟಿಕೆಟ್ ಪಡೆದು ವೀಕ್ಷಣೆ ಮಾಡುತ್ತಾರೆ, ಮತ್ತೆ ಕೆಲವರು ಉಚಿತವಾಗಿ ವೀಕ್ಷಣೆ ಮಾಡುತ್ತಾರೆ. ಅದೇ ರೀತಿ ಇಲ್ಲೂ ವ್ಯವಸ್ಥೆ ಕಲ್ಪಿಸಲಾಗುವುದು. ಸಾರ್ವಜನಿಕರು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು” ಎಂದು ಮಾಹಿತಿ ನೀಡಿದರು.

ಬೃಂದಾವನ ಉದ್ಯಾನ ಅಭಿವೃದ್ಧಿಯಿಂದ ಅಣೆಕಟ್ಟಿಗೆ ತೊಂದರೆಯಾಗಲಿದೆ ಎಂದು ಕೆಲವು ಸಂಘಟನೆಗಳು ವಿರೋಧ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಂಘಟನೆಗಳನ್ನು ಕರೆದು ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಅನುಮಾನಗಳು ಮೂಡುವುದು ಸಹಜ. ಇದರಲ್ಲಿ ಅವರ ತಪ್ಪೇನು ಇಲ್ಲ. ಅಣೆಕಟ್ಟು ಉಳಿಸಬೇಕಾಗಿರುವುದು ನಮ್ಮ ಕರ್ತವ್ಯ. ಅವರು ಹೇಳುವ ಮುನ್ನವೇ ರಾಜ್ಯದ ಎಲ್ಲಾ ಅಣೆಕಟ್ಟುಗಳ ಗೇಟ್ ಬದಲಾವಣೆಗೆ ನಾನು ತೀರ್ಮಾನ ಮಾಡಿದ್ದೇನೆ. ಈ ವಿಚಾರವಾಗಿ ಯಾರಾದರೂ ನಮಗೆ ಹೇಳಿದ್ದರಾ? ಟಿಬಿ ಡ್ಯಾಂ ಅಣೆಕಟ್ಟಿನ ಗೇಟ್ ಸಮಸ್ಯೆ ಎದುರಾದ ನಂತರ ಕೆಆರ್ ಎಸ್ ಅಣೆಕಟ್ಟಿನ ಗೇಟ್ ಬದಲಿಸಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

“ತಪ್ಪು ಕಂಡುಹಿಡಿಯುವುದು, ಬೇರೆಯವರ ಮೇಲೆ ಆರೋಪ ಮಾಡುವುದು, ಚಾಡಿ ಹೇಳುವುದು ಬಹಳ ಸುಲಭ. ಇವು ಕಿವಿಗೆ ಬಹಳ ಇಂಪಾಗಿ ಕೇಳುತ್ತದೆ. ನಾವು ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ಮಾಡಬೇಕು” ಎಂದು ತಿಳಿಸಿದರು.

ಕಾವೇರಿ ನದಿ ಒತ್ತುವರಿ ಹಾಗೂ ಮಲೀನ ವಿಚಾರವಾಗಿ ಸಮಿತಿ ರಚಿಸುವ ಬಗ್ಗೆ ಕೇಳಿದಾಗ, “ನಾನು ಹೀಗಾಗಲೇ ಎಲ್ಲಾ ಅಣೆಕಟ್ಟುಗಳನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದೆ. ಅಣೆಕಟ್ಟು ತುಂಬಿದಾಗ ಎಲ್ಲಿಯವರೆಗೆ, ಎಷ್ಟು ಮಟ್ಟದವರೆಗೆ ನೀರು ನಿಲ್ಲಲಿದೆ ಎಂದು ಗುರುತು ಮಾಡಲಾಗಿದೆ. ಮೊನ್ನೆ ನಡೆದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಕೆರೆಗಳ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ಅಣೆಕಟ್ಟಿನ ಆಸ್ತಿ ಮಾಪನ ಮಾಡಲು ಸರ್ವೇ ಇಲಾಖೆಗೂ ಹೇಳಲಾಗಿದೆ” ಎಂದು ತಿಳಿಸಿದರು.

ನದಿಯಿಂದ ಕುಡಿಯುವ ನೀರಿನ ಯೋಜನೆಗೆ ನೀರು ತೆಗೆದುಕೊಂಡು ಹೋಗಲಿ, ಅಣೆಕಟ್ಟಿನಿಂದ ಬೇಡ ಎಂಬ ಜೆಡಿಎಸ್ ನಾಯಕ ತಮ್ಮಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅಣೆಕಟ್ಟಿನಿಂದ ಯಾರು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ? ತಮ್ಮಣ್ಣ ಅವರಿಗೆ ರಾಜಕೀಯ ಮಾಡಬೇಕು, ಮಾಡುತ್ತಿದ್ದಾರೆ. ಅಣೆಕಟ್ಟಿನಿಂದ ನೀರು ತೆಗೆದುಕೊಂಡು ಹೋಗಲು ನಾವು ದಡ್ಡರಲ್ಲ” ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist