ಅನುದಾನ ಹಂಚಿಕೆಯಲ್ಲಿ ಅನ್ಯಾಯ: ಕೇಂದ್ರದ ಭೇಟಿಗೆ ದೆಹಲಿಗೆ ಹೊರಟ ಸಿಎಂ

RELATED POSTS

ರಾಯಚೂರು(www.thenewzmirror.com):15 ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯವನ್ನು 16ನೇ ಹಣಕಾಸು ಆಯೋಗದಲ್ಲಾದರೂ ಸರಿಪಡಿಸಿ ಎಂದು ಕೇಳಲು ಇಂದು ದೆಹಲಿಗೆ ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪರಿಶಿಷ್ಠ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ಬುಡಕಟ್ಟು ಸಾಂಸ್ಕೃತಿಕ ಉತ್ಸವ, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಹಾಗೂ 371 ಜೆ ದಶಮಾನೋತ್ಸವ ಮತ್ತು 936 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ,ರಾಯಚೂರು ಕ್ಷೇತ್ರದಲ್ಲಿ ಒಂದೇ ದಿನ 936 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯ ಉದ್ಘಾಟನೆ ಮಾಡಿದ್ದೇವೆ. ಕೊಟ್ಟ ಮಾತಿನಂತೆ ನಡೆದ ಸರ್ಕಾರ ನಮ್ಮದು ಎಂದು  ಪುನರುಚ್ಚರಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ. ಈಗ ಕಾಂಗ್ರೆಸ್ ಮಾಡುತ್ತಿರುವ ಅಭಿವೃದ್ಧಿಯನ್ನು ಬಿಜೆಪಿಯವರು ಸಹಿಸದೆ ಸುಳ್ಳಿನ ಸರಮಾಲೆ ಹಂಚುತ್ತಾ ತಿರುಗುತ್ತಿದ್ದಾರೆ. ನಾವು ಈ ಚುನಾವಣೆ ವೇಳೆ 560 ಭರವಸೆಗಳನ್ನು ನೀಡಿದ್ದೆವು. ಇದರಲ್ಲಿ 235 ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದರು. 

2013 ರಿಂದ 2018 ರವರೆಗೆ ನಾವು ಆಡಳಿತ ನಡೆಸಿ ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸಿ ಪ್ರಣಾಳಿಕೆಯಲ್ಲಿ ಇಲ್ಲದ ಹೆಚ್ಚುವರಿ 30 ಭರವಸೆಗಳನ್ನು ಈಡೇರಿಸಿ ದಾಖಲೆ ಮಾಡಿದ್ದೇವೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದೇನು ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದರು. 

ಚಿನ್ನ, ಬೆಳ್ಳಿ, ಅಕ್ಕಿ, ಬೇಳೆ, ಅಡಿಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರ ಎಲ್ಲದರ ಬೆಲೆ ಹೆಚ್ಚಿಸಿದ್ದು ಮೋದಿ ಸರ್ಕಾರ. ಆದ್ರೂ ಬಿಜೆಪಿ ನಾಚಿಕೆ ಇಲ್ಲದೆ ರಾಜ್ಯದ ಜನರ ಎದುರು ಸುಳ್ಳು ಹೇಳಿ ನಾಚಿಕೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ಇವತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾರಣವಾಗಿದ್ದು 371ಜೆ. ಇದನ್ನು ಜಾರಿಗೆ ತಂದಿದ್ದು ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಅವರ ನೇತೃತ್ವದ ಹೋರಾಟ ಮತ್ತು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ. ಈ 371 ಜೆ ಜಾರಿಗೊಳಿಸಲು ಬಿಜೆಪಿ ಸಂಪೂರ್ಣ ವಿರುದ್ಧವಿತ್ತು. ವಾಜಪೇಯಿ ಪ್ರಧಾನಿ ಆಗಿದ್ದಾಗ ಉಪಪ್ರಧಾನಿ ಅಡ್ವಾಣಿ ಅವರು 371ಜೆ ಜಾರಿ ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಬಿಜೆಪಿಯವರಿಗೆ ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಟೀಕಿಸುವ ಯಾವ ನೈತಿಕ ಹಕ್ಕೂ ಇಲ್ಲ ಎಂದರು.

ನಮ್ಮ ಸರ್ಕಾರ ಬಂದ ಮೇಲೆ ಕಲ್ಯಾಣ ಕರ್ನಾಟಕ‌ ಅಭಿವೃದ್ಧಿಗೆ 13500 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಇದನ್ನು ಖರ್ಚು ಮಾಡಿದ ಮೇಲೆ ಇನ್ನಷ್ಟು ಹೆಚ್ಚಿನ, ಅನುದಾನ‌ ಕೊಡ್ತೀನಿ ಎಂದು ಮುಖ್ಯಮಂತ್ರಿಗಳು ಘೋಷಿಸಿದರು. 

371ಜೆ ಜಾರಿ ಕಾರಣದಿಂದ ಈ ಭಾಗದ ಯುವಕ ಯುವತಿಯರು ಎಂಜಿನಿಯರ್, ವೈದ್ಯರು, ಎಸಿ, ಡಿಸಿ, ಪೊಲೀಸ್ ಅಧಿಕಾರಿಗಳಾಗುತ್ತಿದ್ದಾರೆ. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ. ರಾಯಚೂರು ಜಿಲ್ಲೆಯ ಜನರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎನ್ನುವುದು ದಾಖಲಾಗಿದೆ. ಕಲ್ಯಾಣ ಕರ್ನಾಟಕ ಸದಾ ಕಾಂಗ್ರೆಸ್ ನ ಭದ್ರ ಕೋಟೆ: ಐದಕ್ಕೆ ಐದೂ ಲೋಕಸಭಾ ಸ್ಥಾನ ಗೆಲ್ಲಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧನ್ಯವಾದ ಅರ್ಪಿಸಿದರು. 

ಬಿಜೆಪಿಯ ಮನೆ ದೇವರೇ ಸುಳ್ಳು. ಅವರು ಕೇಂದ್ರದಲ್ಲಿ ಸರ್ಕಾರವಿದ್ದರೂ ರಾಜ್ಯಕ್ಕೆ ನಿರಂತರವಾಗಿ ದ್ರೋಹ ಎಸಗುತ್ತಿದ್ದಾರೆ. ಬಿಜೆಪಿ ನಾಯಕರು ಮತ್ತು ಬಿಜೆಪಿ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮುಂದೆ ಬರುತ್ತಿಲ್ಲ. ರಾಜ್ಯಕ್ಕೆ ಕೇಂದ್ರದ ಬಿಜೆಪಿ ಮಾಡುತ್ತಿರುವ ದ್ರೋಹವನ್ನು ತಡೆಯಲು ಬಿಜೆಪಿಯ ಒಬ್ಬ ಸಂಸದರೂ ಸಿದ್ದರಿಲ್ಲ. ಇದು ಬಿಜೆಪಿಯವರ ಯೋಗ್ಯತೆ ಎಂದು ಟೀಕಿಸಿದರು. 

15 ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯವನ್ನು 16ನೇ ಹಣಕಾಸು ಆಯೋಗದಲ್ಲಾದರೂ ಸರಿಪಡಿಸಿ ಎಂದು ಕೇಳಲು ಇಂದು ದೆಹಲಿಗೆ ಹೋಗುತ್ತಿದ್ದೇನೆ. ಇದಕ್ಕಾಗಿ ಕೇಂದ್ರ ಹಣಕಾಸು ಸಚಿವರನ್ನೂ ಭೇಟಿ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist