ಬೆಂಗಳೂರು, (www.thenewzmirror.com) :
ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ ಆಗುತ್ತಾರೆ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ನೀಡುವುದಕ್ಕೆ ಅಡ್ಡಿ ಹಾಕುತ್ತಿದ್ದಾರೆ, ಅವರು ಲಿಂಗಾಯತರಲ್ಲ ಹಾಗೂ ರಾಜಕಾರಣದಲ್ಲಿ ನನ್ನ ತುಳಿಯುತ್ತಲೇ ಬಂದಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿರೋಧ ಪಕ್ಷದ ನಾಯಕ ಯಾರಾಗಬೇಕು, ರಾಜ್ಯಾಧ್ಯಕ್ಷರಾಗಬೇಕು ಎಂದು ಕೇಳಿದಾಗ ಎಲ್ಲರೂ ಯತ್ನಾಳ್ ಪರ ಮಾತನಾಡಿದ್ದರು ಆದರೆ ಕೆಲವರು ತಮ್ಮ ಭವಿಷ್ಯಕ್ಕಾಗಿ ನನ್ನ ತುಳಿದರು ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ ಎಂದು ಹೇಳಿದರು.
ನಾನು ಸ್ವತಂತ್ರವಾದ ಹಕ್ಕಿ ಇದ್ದಂತೆ. ನಾನು ಪಕ್ಷದಲ್ಲಿ ಯಾವ ಸ್ಥಾನವನ್ನು ಕೇಳಿಲ್ಲ. ದೆಹಲಿಯಲ್ಲಿ ರಾಜ್ಯದ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. 2024 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಭಾರತ ಭಾರತವಾಗಿ ಉಳಿಯಬೇಕಿದೆ. ದೇಶ ಒಡೆಯುವ ಹೇಳಿಕೆ ನೀಡಿದ್ದ ಸಂಸದ ಡಿ ಕೆ ಸುರೇಶ್ ಅವರಿಗೆ ಕಾಂಗ್ರೆಸ್ ಒಂದು ಶೋಕಾಸ್ ನೋಟಿಸ್ ನೀಡಬೇಕಿತ್ತು. ಆದರೆ ಅವರು ಡಿ ಕೆ ಸುರೇಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಂತೆ ಆಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.