ಬೆಂಗಳೂರು(www.thenewzmirror.com): ನಿನ್ನೆ ಆರ್‍ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ದುರ್ಘಟನೆ ಆಕಸ್ಮಿಕವಲ್ಲ, ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಲ್ಲವೇ? ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ ಕಾಲ್ತುಳಿತದ ಘಟನೆಯ ಕುರಿತು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯವರಿಗೆ ಕೆಲ ಪ್ರಶ್ನೆಗಳನ್ನು ಅವರು ಕೇಳಿದ್ದು, ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸಾವಿರಾರು ಜನ ಸೇರುವ ನಿರೀಕ್ಷೆ ಇದ್ದರೂ, ಸೂಕ್ತ ಜನಸಂದಣಿ ನಿರ್ವಹಣಾ ಯೋಜನೆ (ಕ್ರೌಡ್ ಮ್ಯಾನೆಜ್‍ಮೆಂಟ್ ಪ್ಲಾನ್) ಏಕೆ ರೂಪಿಸಲಿಲ್ಲ? ಸಾವಿರಾರು ಜನ ಸೇರಿದ್ದರೂ, ತುರ್ತು ಸೇವೆಗಳಾದ (ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ವೈದ್ಯಕೀಯ ತಂಡ) ಸಂಖ್ಯೆ ಅತ್ಯಂತ ಕಡಿಮೆಯಿತ್ತು ಏಕೆ? ಎಂದು ಕೇಳಿದ್ದಾರೆ.
ಗುಪ್ತಚರ ಇಲಾಖೆಯು ಸಾವಿರಾರು ಜನರು ಸೇರುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಲಿಲ್ಲವೇ? ನೀಡಿದ್ದರೂ, ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಏಕೆ? ಕ್ರೀಡಾಂಗಣದ ಸಾಮಥ್ರ್ಯಕ್ಕೆ ಅಧಿಕ ಜನರು ಸೇರುವ ಸಾಧ್ಯತೆಯನ್ನು ಏಕೆ ಅಂದಾಜಿಸಲಾಗಲಿಲ್ಲ? ಇದು ಗಂಭೀರ ನಿರ್ಲಕ್ಷ್ಯವಲ್ಲವೇ? ಎಂದು ಅವರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಅಪಾರವಾದ ಕ್ರೀಡಾ ಪ್ರೇಮಿಗಳು ಸೇರುವ ನಿರೀಕ್ಷೆ ನಗರದ ಪ್ರತಿಯೊಬ್ಬರಿಗೂ ತಿಳಿದಿತ್ತು, ಆದರೆ ಸರ್ಕಾರ ನಡೆಸುವವರಿಗೆ ಮಾತ್ರ ಎಷ್ಟು ಜನ ಸೇರಬಹುದು ಎಂಬ ಅಂದಾಜು ಇರಲಿಲ್ಲ” ಎಂಬ ನಿಮ್ಮ ಮಾತು ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಲ್ಲವೇ? ಕಾರ್ಯಕ್ರಮಕ್ಕೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಸರಿಯಾಗಿ ನಿರ್ವಹಿಸದಿರಲು ಕಾರಣವೇನು? ಎಂದು ಕೇಳಿದ್ದಾರೆ.
ಬೆಂಗಳೂರಿನಲ್ಲಿ 2 ದೊಡ್ಡ ಕಾರ್ಯಕ್ರಮ ಬೇಕಿತ್ತೇ?
ಬೆಂಗಳೂರಿನಂತಹ ನಗರದಲ್ಲಿ ಒಂದೇ ರೀತಿಯ ಎರಡು ದೊಡ್ಡ ಕಾರ್ಯಕ್ರಮಗಳ ಅಗತ್ಯವಿತ್ತೇ? ಇದು ಜನಸಂದಣಿಗೆ ಮತ್ತಷ್ಟು ಕಾರಣವಾಗಲಿಲ್ಲವೇ? ಪೆÇಲೀಸರು ಬೇಡ ಅಂದರೂ ಪೆÇೀಲೀಸರ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ನಡೆಸಿದ ಉದ್ದೇಶವಾದರೂ ಏನು? ಎಂದು ಸಿ.ಟಿ.ರವಿ ಅವರು ಕೇಳಿದ್ದಾರೆ.
ಈ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದರು – ಸರ್ಕಾರವೇ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಳಿತ ಮಂಡಳಿಯೇ? ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಏಕೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಕೇವಲ ಒಂದು ಫ್ರಾಂಚೈಸಿ ಗೆಲುವನ್ನು ರಾಜ್ಯ ಸರ್ಕಾರವೇ ಸಂಭ್ರಮಿಸುವ ಅಗತ್ಯ ಏನಿತ್ತು? ಇದು ಸರ್ಕಾರದ ಆದ್ಯತೆಯಾಗಬೇಕಿತ್ತೇ? ಆರ್‍ಸಿಬಿ ಪ್ರಶಸ್ತಿ ಗೆದ್ದ ಹನ್ನೆರಡು ಗಂಟೆಯೊಳಗೆ ವಿಧಾನಸೌಧದ ಮುಂದೆ ಸಮಾರಂಭ ಏರ್ಪಡಿಸುವ ಆತುರವೇನಿತ್ತು? ಡಿ.ಕೆ. ಶಿವಕುಮಾರ್ ಎಲ್ಲಾ ಶ್ರೇಯಸ್ಸು ತನಗೆ ಸಿಗಲಿ ಎಂದು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾರಾ? ಈ ಗೆಲುವಿನ “ಕ್ರೆಡಿಟ್” ತೆಗೆದುಕೊಳ್ಳುವ ಹಪಾಹಪಿ ಸರ್ಕಾರಕ್ಕೆ ಏಕೆ ಬಂತು? ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಪ್ರಯತ್ನವೇ? ಎಂದು ಕೇಳಿದ್ದಾರೆ.
ಕಾಲ್ತುಳಿತ ಸಂಭವಿಸಿದಾಗ ಸಮಾರಂಭ ನಿಲ್ಲಿಸಬೇಕಿತ್ತಲ್ಲವೇ?
ಕ್ರೀಡಾಭಿಮಾನಿಗಳ ಸಾವಿಗೆ ಸರ್ಕಾರದ ಈ “ಕ್ರಿಮಿನಲ್ ನಿರ್ಲಕ್ಷ್ಯ” (ಕ್ರಿಮಿನಲ್ ನೆಗ್ಲಿಜೆನ್ಸ್) ಮತ್ತು “ಪ್ರಚಾರದ ಹಸಿವು” ಕಾರಣವಲ್ಲವೇ? ಸರ್ಕಾರ ಕೇವಲ ಭದ್ರತೆ ಒದಗಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಇಂತಹ ಬೃಹತ್ ಕಾರ್ಯಕ್ರಮಕ್ಕೆ ಸೂಕ್ತ ಪರವಾನಗಿ ನೀಡುವುದು ಮತ್ತು ನಿಯಮಾವಳಿಗಳನ್ನು ವಿಧಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಕಾಲ್ತುಳಿತ ಸಂಭವಿಸಿದಾಗಲೂ, ಸಂಭ್ರಮಾಚರಣೆಯನ್ನು ಏಕೆ ಮುಂದುವರಿಸಲು ಅವಕಾಶ ನೀಡಲಾಯಿತು? ಅದನ್ನು ತಕ್ಷಣ ನಿಲ್ಲಿಸಬಹುದಿತ್ತಲ್ಲವೇ? ಎಂದು ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.
ಸೂತಕದ ಮನೆಯಲ್ಲಿನ ಸಂಭ್ರಮ:
ರಾಜ್ಯದ ಉಪಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರುಸೇರಿದಂತೆ ಇನ್ನು ಹಲವು ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮದ ಸ್ಥಳದಲ್ಲಿದ್ದರೂ, ಪರಿಸ್ಥಿತಿಯನ್ನು ನಿಯಂತ್ರಿಸಲು ಏಕೆ ವಿಫಲರಾದರು? ಅವರ ಹಾಜರಿ ಕೇವಲ ಪ್ರಚಾರಕ್ಕಾಗಿತ್ತೇ ಎಂಬ ಪ್ರಶ್ನೆಯನ್ನು ಸಿ.ಟಿ.ರವಿ ಕೇಳಿದ್ದಾರೆ.
ಅವಘಡ ಸಂಭವಿಸಿದ ತರುವಾಯವೂ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕಿತ್ತು. ಆದರೆ ಸ್ವತಃ ಉಪಮುಖ್ಯಮಂತ್ರಿಗಳೇ ಸೂತಕದ ಮನೆಯಾಗಿದ್ದ ಸಮಯದಲ್ಲಿ ಮೈದಾನದೊಳಗಿನ ಸಂಭ್ರಮದಲ್ಲಿ ಭಾಗಿಯಾಗಿ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ದುಃಖವಾಗಲಿ ಅಥವಾ ನೋವಾಗಲಿ ಇಲ್ಲದಿರುವುದು ಸತ್ಯವಲ್ಲವೇ?. ಇದು ಸರ್ಕಾರದ, ಸರ್ಕಾರ ನಡೆಸುವವರ ಸಂವೇದನಾ ಶೂನ್ಯತೆಗೆ ಸಾಕ್ಷಿಯಲ್ಲವೇ? ಎಂದಿದ್ದಾರೆ.
ನೀವು “ಅದು ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮ” ಎಂದು ಸರ್ಕಾರದ ತಪ್ಪನ್ನು ಮುಚ್ಚಿ, ತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ಕೀಳು ಮಟ್ಟದ ವರ್ತನೆ ತೋರಿದ್ದೀರಿ,. ಜನ ಸೇರುತ್ತಾರೆ ಎಂದು ಅರಿವಿದ್ದಾಗ ಅಲ್ಲಿ ಬರುವವರಿಗೆ ರಕ್ಷಣೆ ನೀಡಬೇಕಾದ್ದು ಸರ್ಕಾರದ ಕರ್ತವ್ಯ ಎಂಬುದನ್ನು ನೀವು ಮರೆತಿದ್ದೀರಾ? ಬೇಜವಾಬ್ದಾರಿ ಸರ್ಕಾರದ ವಿರುದ್ಧ ನಮ್ಮ ಆಕ್ರೋಶ ಪ್ರಕಟಿಸುವುದು ನಮ್ಮ ಕರ್ತವ್ಯ. ಸರ್ಕಾರ ತಪ್ಪೆಸಗಿ ಅದನ್ನು ಮುಚ್ಚಿಕೊಳ್ಳಲು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಖಂಡನೀಯ. ಇವರನ್ನು ಪ್ರಶ್ನಿಸುವುದೂ ತಪ್ಪೇ ? ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.