ಬೆಂಗಳೂರು,(www.thenewzmirror.com) ;
ಸಾರಿಗೆ ಇಲಾಖೆಯಲ್ಲಿ ಸಾರಿಗೆ ಸಚಿವರ ಹಿಡಿತ ಇಲ್ವಾ..? ಇಲಾಖಾ ಆದೇಶಕ್ಕೆ ಬೆಲೆನೇ ಇಲ್ವಾ.? ಆಡಳಿತಕ್ಕೆ ಚುರುಕು ಮುಟ್ಟಿಸಬೇಕಾದ ಆಯುಕ್ತರು ತಮ್ಮ ಅಧಿಕಾರ ಚಲಾವಣೆ ಮಾಡುತ್ತಿಲ್ವಾ.? ಒಬ್ಬ ಅಧಿಕಾರಿಯ ಪವರ್ ಮುಂದೆ ಕಾನೂನಿಗೂ ಬೆಲೆ ಇಲ್ವಾ? ಇಂಥದೊಂದು ಪ್ರಶ್ನೆ ಇದೀಗ ಕಾಡುತ್ತಿದೆ.
ಇಂಥ ಪ್ರಶ್ನೆ ಉದ್ಭವಿಸೋಕೂ ಒಂದು ಕಾರಣವಿದೆ. ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ಆದ ಅಧಿಕಾರಿ ನಿಯುಕ್ತಿಗೊಂಡ ಕಚೇರಿಯಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳದೆ ತಿಂಗಳುಗಟ್ಟಲೇ ಕಾಲಹರಣ ಮಾಡಿದರೂ ಅವ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿರೋದು ಇಂಥ ಪ್ರಶ್ನೆ ಮೂಡುವಂತೆ ಮಾಡಿದೆ.
ಜ್ಞಾನಭಾರತಿ ಸಾರಿಗೆ ಕಚೇರಿಯಲ್ಲಿ ಎಆರ್ ಟಿಒ ಆಗಿ ಕೆಲ್ಸ ಮಾಡ್ತಿದ್ದ ಕೃಷ್ಣಾನಂದ ಅವರನ್ನ ಜೂನ್ ತಿಂಗಳಲ್ಲಿ ಆರ್ ಟಿಓ ಆಗಿ ಶಾಂತಿನಗರದ ಸಾರಿಗೆ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಅವರಿಗೆ ಈ ಹುದ್ದೆ ಇಷ್ಟ ಇರಲಿಲ್ಲವಂತೆ. ಹೀಗಾಗಿ ವರ್ಗಾವಣೆಗೊಂಡಿದ್ದರೂ ಹಳೆ ಕಚೇರಿಯಲ್ಲಿಯೇ ಕೆಲ್ಸ ಮಾಡ್ತಾ ಇದ್ರು ಕೃಷ್ಣಾನಂದ. ಡಿಎಲ್ ಪ್ರಕರಣದಲ್ಲಿ ವರ್ಗಾವಣೆಗೊಂಡಿದ್ದ ಕೃಷ್ಣಾನಂದ ಅವರಿಗೆ ಶಾಂತಿ ನಗರದ ಸಾರಿಗೆ ಕಚೇರಿ ಇಷ್ಟವಿರಲಿಲ್ಲ. ಹೀಗಾಗಿ ಡಿಎಲ್ ಟ್ರ್ಯಾಕ್ ಇಲ್ಲದ ಕಚೇರಿಯನ್ನೇ ಹುಡುಕುತ್ತಾ ಇದ್ರಂತೆ. ಸಾರಿಗೆ ಸಚಿವರ ಬಳಿ ಹೇಗಾದ್ರೂ ಮಾಡಿ ಲಾಬಿ ಮಾಡಿ ಡಿಎಲ್ ಟ್ರ್ಯಾಕ್ ಇಲ್ಲದ ಕಚೇರಿಗೆ ವರ್ಗಾವಣೆ ಮಾಡಿಸಿಕೊಳ್ಳೋಕೆ ಓಡಾಡ್ತಿದ್ರಂತೆ. ಹೀಗಾಗಿಯೇ ಶಾಂತಿ ನಗರ ಕಚೇರಿ(ಆಟೋ) ಗೆ ವರ್ಗಾವಣೆಗೊಂಡರೂ ನಿಯುಕ್ತಿಯಾಗಿರಲಿಲ್ಲ.
![](https://thenewzmirror.com/wp-content/uploads/2023/08/IMG-20230830-WA0039-edited.jpg)
ವರ್ಗಾವಣೆ ಆದರೂ ನಿಯುಕ್ತಿ ಆಗದಿರೋದಕ್ಕೂ ಒಂದು ಕಾರಣವಿದೆ ಅಂತ ಸಾರಿಗೆ ಇಲಾಖೆಯ ಕೆಲ ನಂಬಿಕಸ್ಥ ಮೂಲಗಳು ಹೇಳುವ ಪ್ರಕಾರ, ಕೃಷ್ಣಾನಂದ ಡಿಎಲ್ ಟ್ರ್ಯಾಕ್ ಇಲ್ಲದ ಕಚೇರಿ ಹುಡುಕುತ್ತಿದ್ದಾರೆ. ಹೀಗಾಗಿಯೇ ಶಾಂತಿನಗರದ ಕಚೇರಿಯ ಅಧಿಕಾರ ಸ್ವೀಕಾರ ಮಾಡಿಲ್ಲ ಅನ್ನೋದು ತಿಳಿದುಬಂದಿದೆ.
![](https://thenewzmirror.com/wp-content/uploads/2023/01/IMG-20230117-WA0012.jpg)
ಇನ್ನು ಡಿಎಲ್ ನೀಡಿಕೆಯಲ್ಲಿ ಗೋಲ್ಮಾಲ್ (ಸದ್ಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ) ನಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ವರ್ಗಾವಣೆಗೊಂಡಿದ್ದರು ಕೃಷ್ಣಾನಂದ. ಡಿಎಲ್ ಇರುವ ಟ್ರ್ಯಾಕ್ ನಲ್ಲಿ ಅಧಿಕಾರ ಸ್ವೀಕಾರ ಮಾಡಿದರೆ ಕಷ್ಟವಾಗುತ್ತೆ ಹೀಗಾಗಿಯೇ ಡಿಎಲ್ ಟೆಸ್ಟ್ ಟ್ರ್ಯಾಕ್ ಇಲ್ಲದ ಕಚೇರಿ ಹುಡುಕುತ್ತಿದ್ದಾರಂತೆ.
![](https://thenewzmirror.com/wp-content/uploads/2023/08/Screenshot_20230830_183912_Samsung-Notes-edited.jpg)
ಸಾರಿಗೆ ಸಚಿವರಿಗೆ ತುಂಬಾ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿರುವ ಕೃಷ್ಣಾನಂದ ತಾಳಕ್ಕೆ ಸಚಿವರು ಕುಣಿಯುತ್ತಿದ್ದಾರಂತೆ. ಹೀಗಾಗಿಯೇ ಅವರ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಡಿಎಲ್ ಟೆಸ್ಟ್ ಟ್ರ್ಯಾಕ್ ಕಚೇರಿಗೆ ನಾನು ಅಧಿಕಾರ ಸ್ವೀಕಾರ ಮಾಡ್ತೀನಿ ಅಂತ ಅವರ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರಂತೆ. ನಾನು ಹೇಳಿದಂತೆ ಸಚಿವರು ಮಾಡುತ್ತಾರೆ. ನಾನು ಕೇಳಿದ ಕಡೆ ವರ್ಗಾವಣೆ ಮಾಡಿತ್ತಾರೆ ಅಂತ ಕೃಷ್ಣಾನಂದ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.
![](https://thenewzmirror.com/wp-content/uploads/2023/08/Ramalinga-Reddy.jpg)
ಸದ್ಯ ಕೃಷ್ಣಾನಂದ ಅವರ ಮನಸ್ಥಿತಿಗೆ ಹೊಂದುವಂತ ಕಚೇರಿ ಇಲ್ಲದಿದ್ರೂ ನಿವೃತ್ತರಾಗುವ ಅಥವಾ ಬಲವಂತವಾಗಿಯಾದರೂ ಹಾಲಿ ಇರುವ ಆರ್ ಟಿಓ ಅನ್ನ ವರ್ಗಾವಣೆ ಮಾಡಿ ಆ ಜಾಗಕ್ಕೆ ನಿಯುಕ್ತಿಗೊಳ್ಳುವ ಹುನ್ನಾರ ಮಾಡುತ್ತಿದ್ದಾರಂತೆ. ಇದಕ್ಕೆ ಕೆಲ ಹಿರಿಯ ಅಧಿಕಾರಿಗಳೂ ಬೇಸರ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳು ಹೇಳುವುದು ಏನು.?
ದಿ ನ್ಯೂಝ್ ಮಿರರ್ ಕೃಷ್ಣಾನಂದ ಪ್ರಕರಣದ ಕುರಿತಂತೆ ಆರ್ ಟಿಒ ಇಲಾಖೆಯ ಹಿರಿಯ ಅಧಿಕಾರಿಗಳನ್ನ ಪ್ರಶ್ನೆ ಮಾಡಿದಾಗ, ಅಯ್ಯೋ ಕೃಷ್ಣಾನಂದ ನಮ್ಮನ್ನೆಲ್ಲಾ ಮೀರಿದ ವ್ಯಕ್ತಿ, ಸಾರಿಗೆ ಸಚಿವರಿಗೆ ತುಂಬಾ ಆಪ್ತರು, ಅವರು ಹೇಳಿದ ಹಾಗೆಯೇ ಸಾರಿಗೆ ಸಚಿವರು ಕೇಳುತ್ತಾರೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ ಅಂತ ಬೇಸರದ ಮಾತುಗಳನ್ನ ಆಡುತ್ತಾರೆ.
ಕೃಷ್ಣಾನಂದ ಮೇಲಿದ್ದ ಆರೋಪವೇನು.?
ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ವೇಳೆ ಕೇವಲ ಮೂರೇ ದಿನದಲ್ಲಿ 2504 ಡಿಎಲ್ ಗಳನ್ನ ನೀಡಿದ್ದರಂತೆ. ಇದಕ್ಕಾಗಿ ಅವರು ಫಲಾನುಭವಿಗಳಿಂದ ಲಂಚವನ್ನೂ ಕೇಳಿದ್ದರಂತೆ( ಸದ್ಯ ಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆ ನಡೆಯುತ್ತಿದೆ).
ಮೂರು ದಿನದಲ್ಲಿ ವಿತರಿಸಿದ ಡಿಎಲ್ ಗಳು..!
2022 ರ ಡಿಸೆಂಬರ್ 19 ರಂದು 964 ಡಿಎಲ್
2022 ರ ಡಿಸೆಂಬರ್ 20 ರಂದು 979 ಡಿಎಲ್
2022 ರ ಡಿಸೆಂಬರ್ 21 ರಂದು561 ಡಿಎಲ್
ಟೆಸ್ಟ್ ಇಲ್ಲದೆ ನೀಡಿದ್ದಾರಂತೆ ಡಿಎಲ್..?!
ನಿಯಮಬದ್ಧವಾಗಿ ಪರೀಕ್ಷೆ ನಡೆಸದೆ ಡಿಲ್‌ಗಳನ್ನು ವಿತರಿಸಲಾಗಿದೆಯಂತೆ. ವಾಹನ ತಂತ್ರಾಂಶದಲ್ಲಿ ಡಿಎಲ್‌ಗೆ ನೀಡಿರುವ ಸ್ಲಾಟ್‌ಗಳನ್ನೂ ಕೂಡ ಬೇಕಾಬಿಟ್ಟಿಯಾಗಿ ನೀಡಿರುವುದು ಕಂಡುಬಂದಿದೆ. ಆದ್ದರಿಂದ ಡಿಎಲ್ ವಿಭಾಗದ ಮುಖ್ಯಸ್ಥ ಎಆರ್‌ಟಿಒ ಕೃಷ್ಣಾನಂದ ನಿಯಮದ ಪ್ರಕಾರ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ವಿವರಣೆ ಪಡೆದು ಮುಂದಿನ ಶಿಸ್ತು ಕ್ರಮ ತೆಗೆದುಕೊಳ್ಳಬಹುದು ಎಂದು ಜಂಟಿ ಆಯುಕ್ತರು ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಅಂದಿನ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಅಮಾನತುಗೊಳಿಸಿದ್ದರು.
ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ಡಿಎಲ್ ಗೋಲ್ಮಾಲ್ ಆರೋಪ(ಸದ್ಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ) ಕೇಳಿ ಬರುತ್ತಿದ್ದಂತೆ ಅವ್ರನ್ನ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಅದಾದ ಬಳಿಕ ಕೆಎಟಿಗೆ ಹೋಗಿ ಅದಕ್ಕೆ ತಡೆ ತಂದಿದ್ದರಿಂದ 2023 ರ ಫೆಬ್ರವರಿ 17 ರಂದು ಸಾರಿಗೆ ಇಲಾಖೆ ಆಯುಕ್ತರು ಕೃಷ್ಣಾನಂದರನ್ನ ಜ್ಞಾನಭಾರತಿ ಸಾರಿಗೆ ಕಚೇರಿಗೆ ಎಆರ್ ಟಿಓ ಆಗಿ ಮರು ವರ್ಗಾವಣೆ ಮಾಡಿದ್ದರು.
ಜೂನ್ ತಿಂಗಳಲ್ಲಿ ಕೆಲ ಎಆರ್ ಟಿಓ ಗಳಿಗೆ ಆರ್ ಟಿಓ ಆಗಿ ಬಡ್ತಿ ನೀಡಲಾಗಿತ್ತು. ಹೀಗೆ ಬಡ್ತಿ ಪಟ್ಟಿಯಲ್ಲಿ ಕೃಷ್ಣಾನಂದರ ಹೆಸರು ಮೊದಲಿತ್ತು. ಜ್ಞಾನಭಾರತಿಯಿಂದ ಶಾಂತಿನಗರದ ಕಚೇರಿಗೆ ಆರ್ ಟಿಓ ಆಗಿ ವರ್ಗಾವಣೆ ಮಾಡಲಾಗಿತ್ತು. ಅಚ್ಚರಿ ಅಂದರೆ ವರ್ಗಾವಣೆ ಆದೇಶ ಮಾಡಿ ಎರಡು ತಿಂಗಳು ಕಳೆಯುತ್ತಾ ಬಂದರೂ ಕೃಷ್ಣಾನಂದ ಅಲ್ಲಿ ವರದಿ ಮಾಡಿಕೊಂಡಿಲ್ಲ. ನ್ಯೂಝ್ ಮಿರರ್ ಸೇರಿದಂತೆ ಹಲವು ಮಾಧ್ಯಮಗಳು ಈ ಬಗ್ಗೆ ಸಾರಿಗೆ ಸಚಿವರ ಬಳಿ ಪ್ರಶ್ನೆ ಮಾಡಿದಾಗ 2023 ರ ಆಗಸ್ಟ್ 16 ರಂದು ಜ್ಞಾನಭಾರತಿ ಕಚೇರಿಯಿಂದ ರಿಲೀವ್(ಬಿಡುಗಡೆ) ಮಾಡಲಾಗಿದೆ.