ಶಿವಮೊಗ್ಗ(www.thenewzmirror.com): ಮಲೆನಾಡಿನಿಂದ ಕರಾವಳಿ ಭಾಗಕ್ಕೆ ಸಂಪರ್ಕಿಸುವ ಸಾಗರ ತಾಲ್ಲೂಕಿನ ಹಸಿರುಮಕ್ಕಿಯ ಶರಾವತಿ ಮುಳುಗಡೆ ಹಿನ್ನೀರ ಕಡವಿನಲ್ಲಿ ನಿರ್ಮಾಣ ಹಂತದಲ್ಲಿರುವ “ಹಸಿರುಮಕ್ಕಿ ಸೇತುವೆ” ಕಾಮಗಾರಿ ಪ್ರದೇಶಕ್ಕೆ ಸಚಿವ ಮಧುಬಂಗಾರಪ್ಪ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಶರಾವತಿ ಹಿನ್ನೀರ ಜನರ ದ್ವೀಪದ ಬದುಕಿನ ಸಂಕಷ್ಟಕ್ಕೆ ತಿಲಾಂಜಲಿ ಹೇಳಿ ಹೊಸ ಶಕೆಯ ಆರಂಭದ ಭರವಸೆ ಮೂಡಿಸಿರುವ ಐತಿಹಾಸಿಕ “ಸಿಗಂದೂರು ಸೇತುವೆ” ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದ್ದು, ದೇಶದ ಎರಡನೇ ಅತೀ ದೊಡ್ಡ ಸೇತುವೆ ಕಾಮಗಾರಿಯ ಗುಣಮಟ್ಟ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಮಧುಬಂಗಾರಪ್ಪ, ಸಿಗಂಧೂರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಲು ಈ ಸೇತುವೆ ಕಾಮಗಾರಿ ಪರಿಶೀಲಿಸಿದ್ದು,ಆದಷ್ಟು ಬೇಗ ಮುಗಿಸಲು ಸೂಚಿಸಿದ್ದೇನೆ, ಇದರ ಕ್ರೆಡಿಟ್ ಗಡ್ಕರಿ,ಮೋದಿ ಅವರೇ ತೆಗೆದುಕೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ, ಆದರೆ ಕಾಮಗಾರಿ ಮುಗಿಯುತ್ತಿದ್ದಂತೆ ಉದ್ಘಾಟನೆಗೆ ಮೋದಿ,ಗಡ್ಕರಿ ಅವರನ್ನು ಕರೆಸಲು ಕಾಯಬಾರದು, ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿ ಅವರ ಸಮಯಾವಕಾಶ ಸಿಕ್ಕಾಗ ಕಾರ್ಯಕ್ರಮ ಮಾಡಲಿ ಎಂದು ಸಲಹೆ ನೀಡಿದರು.ಒಂದು ವೇಳೆ ಸೇತುವೆ ಕಾಮಗಾರಿ ಮುಗಿದ ತಕ್ಷಣ ಸಂಚಾರಕ್ಕೆ ಬಿಡದೆ ಹೋದಲ್ಲಿ ನಾವೇ ಜನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ಎಚ್ಚರಿಕೆ ನೀಡಿದರು.
ಸೇತುವೆ ನಿರ್ಮಾಣದ ಹಿಂದೆ ಅನೇಕ ಜನರ ಹೋರಾಟ ಇದೆ. ಆದರೆ ಹೋರಾಟ ಮಾಡಿದವರನೆಲ್ಲಾ ಹಿಂದೆ ತಳ್ಳಿ ಅಣ್ಣತಮ್ಮ ತಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದ ಮಧುಬಂಗಾರಪ್ಪ, ನೀವೆ ಮನೆ ಕಟ್ಟಿಕೊಳ್ಳಿ. ಅಣ್ಣತಮ್ಮ ಬಂದು ನಿಂತು ಫೋಟೋ ಹೊಡೆಸಿಕೊಂಡು ನಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ತುಮರಿ ಸೇತುವೆಗೆ ಹಣ ತಂದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ, ಆದರೆ ಅದು ರಾಜ್ಯದ ಜನರು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ನೀಡಿದ ಹಣ ಎನ್ನುವುದನ್ನು ಅವರು ಮರೆಯಬಾರದು. ಸೇತುವೆಗೆ ಹಣ ತಂದಿದ್ದು ನೀವಾದರೂ ಜಾಗ ರಾಜ್ಯ ಸರ್ಕಾರದ್ದು ಎಂದರು.
ಹಸಿರುಮಕ್ಕಿ ಸೇತುವೆ ಸಂಚಾರಕ್ಕೆ ಮುಕ್ತವಾದರೆ ಸಾಗರ ತಾಲೂಕಿನಿಂದ ಉಡುಪಿ, ಮಂಗಳೂರು, ಕುಂದಾಪುರ, ಭಟ್ಕಳ ಹಾಗೂ ಕೊಲ್ಲೂರು ಕ್ಷೇತ್ರಗಳಿಗೆ ಕಡಿಮೆ ಅವಧಿಯಲ್ಲಿಯೇ ತಲುಪಲು ಸಹಕಾರಿಯಾಗಲಿದೆ ಎಂದರು.
“ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ”ದರ್ಶನ:
ಶರಾವತಿ ಹಿನ್ನೀರಿನ ಅಧಿದೇವತೆ ಶ್ರೀ “ಸಿಗಂದೂರಿನ ಚೌಡೇಶ್ವರಿ”ಯ ಸನ್ನಿದಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಸಚಿವ ಮಧುಬಂಗಾರಪ್ಪ, ವಿಶೇಷ ಪೂಜೆ ಸಲ್ಲಿಸಿ ನಮಗೂ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ಆಶೀರ್ವಾದ ಪಡೆದೆರು.ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಎಸ್. ರಾಮಪ್ಪನವರು, ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಹಲವಾರು ಗಣ್ಯರು ಜೊತೆಗಿದ್ದರು.






