ಮರೆಗುದ್ದಿ ಏತ ನೀರಾವರಿ ಯೋಜನೆ ಹಂತ, ಹಂತವಾಗಿ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

RELATED POSTS

ಬೆಂಗಳೂರು(thenewzmirror.com): “ಮರೆಗುದ್ದಿ ಏತ ನೀರಾವರಿ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು” ಎಂದು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸೋಮವಾರ ಭರವಸೆ ನೀಡಿದರು.

ಗಮನ ಸೆಳೆಯುವ ಸೂಚನೆ ಮೇಲೆ ಮಾತನಾಡಿದ ಶಾಸಕ ಜಗದೀಶ್ ಗುಡಗುಂಟಿ ಅವರು, ಜಮಖಂಡಿ, ಮುಧೋಳ ತಾಲೂಕಿನ 2035 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಮರೆಗುದ್ದಿ ಏತ ನೀರಾವರಿ ಯೋಜನೆಯ ಮೊದಲ ಹಂತ ಆರಂಭಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “31 ಚೆಕ್ ಡ್ಯಾಂ, 4 ಕೆರೆಗಳನ್ನು ತುಂಬಿಸುವ ಮರೆಗುದ್ದಿ ಏತ ನೀರಾವರಿ ಯೋಜನೆಗೆ ₹214 ಕೋಟಿ ರೂಪಾಯಿ ಅನುಮೋದನೆ ನೀಡಿದ್ದೇವೆ. ವೆಂಕಟೇಶ್ವರ ಏತ ನೀರಾವರಿ ಯೋಜನೆ ಮೂಲಕ ಸುಮಾರು 1648 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. 387 ಎಕರೆ ಅಚ್ಚುಕಟ್ಟು ಪ್ರದೇಶ ಮಾತ್ರ ಬಾಕಿ ಉಳಿದಿದೆ. ಇದಕ್ಕೆ ಅಗತ್ಯವಾದ ಅಚ್ಚುಕಟ್ಟು ಪ್ರದೇಶಗಳನ್ನು ಉಲ್ಲಾಳ, ಹುಣಸಿಕಟ್ಟಿ ಮತ್ತು ಬಿಎಂ ಗುದ್ದಿ ಗ್ರಾಮಗಳಲ್ಲಿ ಗುರುತಿಸಿ, ಹಂತ ಹಂತವಾಗಿ ಜಾರಿಗೊಳಿಸಲಾಗುವುದು” ಎಂದು ತಿಳಿಸಿದರು.

2-3ನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ:

ಬಿಜೆಪಿ ಶಾಸಕ  ಭರತ್ ಶೆಟ್ಟಿ ಅವರು, ‘ಕಿಯೋನಿಕ್ಸ್ ಜಾಗದಲ್ಲಿ ಐಟಿ ಪಾರ್ಕ್ ಮಾಡುವಾಗ, ಅಗತ್ಯ ಉತ್ತೇಜನ ಸಿಗುತ್ತಿಲ್ಲ’ ಎಂಬ ವಿಚಾರವಾಗಿ ಕೇಳಿದಾಗ, “’ಬಿಯಾಂಡ್ ಬೆಂಗಳೂರು’ ಎಂಬ ಪರಿಕಲ್ಪನೆಯಲ್ಲಿ ಕೈಗಾರಿಕೆಗಳನ್ನು ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಸ್ಥಾಪಿಸುವುದಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ಭಾಗಗಳಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲು ಕೈಗಾರಿಕೆ, ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಮ್ಮ ಸಚಿವರ ಜತೆ ಚರ್ಚೆ ಮಾಡಲಾಗಿದೆ. ನಿಮ್ಮ ವಿಚಾರವನ್ನು ವಿವರವಾಗಿ ಪತ್ರದ ಮೂಲಕ ಸಲ್ಲಿಸಿ, ನಾವು ಸಚಿವರ ಜತೆ ಚರ್ಚೆ ಮಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಇನ್ನು ಕರಾವಳಿ ಭಾಗದ ಶಾಸಕರ ಜತೆ ಪ್ರವಾಸೋದ್ಯಮದ ವಿಚಾರವಾಗಿ ಸಭೆ ಮಾಡಲು ತೀರ್ಮಾನಿಸಲಾಗಿದೆ. ಆ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ” ಎಂದು ತಿಳಿಸಿದರು.

ಕೆರೆ ಪ್ರದೇಶವನ್ನು ಕೊಳಚೆಪ್ರದೇಶ ಎಂದು ಘೋಷಣೆ ಮಾಡಲು ಬರಲ್ಲ:

ಶಾಸಕ ಕೃಷ್ಣ ಮೂರ್ತಿ ಅವರು, ಕೊಳ್ಳೆಗಾಲ ಕ್ಷೇತ್ರದ ನಗರ ಸಭೆ ವ್ಯಾಪ್ತಿಯ ಬಸ್ತಿಪುರ ಸರ್ವೇ ನಂಬರ್ 15ರಲ್ಲಿ 3.56 ಎಕರೆ ಪ್ರದೇಶದಲ್ಲಿ 1948ರಿಂದ ವಾಸವಿರುವ 75 ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡದೇ ಸಮಸ್ಯೆಯಾಗಿರುವ ಬಗ್ಗೆ ಕಂದಾಯ ಸಚಿವರ ಗಮನ ಸೆಳೆದಾಗ. ಕಂದಾಯ ಸಚಿವ ಕೃಷ್ಣಭೈರೇಗೌಡರ ಪರವಾಗಿ ಉತ್ತರ ನೀಡಿದ ಶಿವಕುಮಾರ್ ಅವರು, “ಕೊಳ್ಳೆಗಾಲ ಕ್ಷೇತ್ರದ ಬಸ್ತಿಪುರ ಸರ್ವೇ ನಂಬರ್ 15ರಲ್ಲಿ ಒತ್ತುವರಿ ಸಂಬಂಧಿಸಿದಂತೆ ಈಗಾಗಲೇ ವರದಿ ನೀಡಲಾಗಿದೆ. ಲೋಕಾಯುಕ್ತದವರು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದು, ನಮ್ಮ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿದ್ದು, ಸ್ಥಳೀಯ ಶಾಸಕರ ಜತೆ ಚರ್ಚಿಸಲಾಗುವುದು. ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂಬುದು ಅವರ ಬೇಡಿಕೆ. ಆದರೆ ಕೆರೆ ಪ್ರದೇಶವನ್ನು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ನ್ಯಾಯಾಲಯದಲ್ಲಿ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಈ ವಿಚಾರವಾಗಿ ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಕಾನೂನುಬದ್ಧವಾಗಿ ಯಾವ ರೀತಿ ಸಹಾಯ ಮಾಡಬಹುದು ಎಂದು ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು. 

ಶಾಸಕ ಟಿ.ಎಸ್ ಶ್ರೀವತ್ಸ ಅವರು, ಖಾಸಗಿ ಬಡಾವಣೆ ನಿರ್ಮಾಣಕ್ಕೆ ಸ್ಥಳೀಯ ಪ್ರಾಧಿಕಾರದ ಜತೆಗೆ ಸರ್ಕಾರದ ಅನುಮತಿ ಬೇಕು ಎಂದು ಸಚಿವರು ಪ್ರಸ್ತಾಪಿಸಿದ್ದು, ಈ ವಿಚಾರವಾಗಿ ಗಮನಸೆಳೆದಿದ್ದು, ಅವರು ಇನ್ನು ಮುಂದೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದು, ಈ ವಿಚಾರವಾಗಿ ಸ್ಪಷ್ಟನೆ ಕೇಳುತ್ತೇನೆ ಎಂದರು. ಇದಕ್ಕೆ ಉತ್ತರ ನೀಡಿದ ಶಿವಕುಮಾರ್ ಅವರು, “ನಗರ ಯೋಜನೆ ಕಾಯ್ದೆಯಲ್ಲಿ ಕೆಲವು ನಿಬಂಧನೆಗಳಿವೆ. ಮೈಸೂರಿನಲ್ಲಿ ಸ್ವಲ್ಪ ಗಡಿಬಿಡಿ ಇದೆ. ಯೋಜನೆ ಅನುಮತಿ ಹಾಗೂ ಇತರೆ ವಿಚಾರವಾಗಿ ಅವರಿಗೆ ಅಧಿಕಾರ ನೀಡಲಾಗಿದೆ. ಈ ಬಗ್ಗೆ ಸಧ್ಯದಲ್ಲೇ ಸಭೆ ಮಾಡಿ ಅಗತ್ಯ ಸೂಚನೆ ನೀಡಲಿದ್ದಾರೆ. ಈ ಬಗ್ಗೆ ಇದುವರೆಗೂ ಅಂತಿಮ ತೀರ್ಮಾನವಾಗಿಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದೆ” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist