ಬೆಂಗಳೂರು(www.thenewzmirror.com): ಪೆಹಲ್ಗಾಂ ಭಯೋತ್ಪಾದಕರ ದಾಳಿಯ ದುರ್ಘಟನೆ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಸೂಚಿಸಲಾಗಿದೆ, ಪೆಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿ ಕುರಿತು ದೇಶ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿ ಚರ್ಚೆ ಆಗಿದೆ ಎಂದರು. ಪೆಹಲ್ಗಾಂ ಘಟನೆಯ ನಂತರ ಪಾಕಿಸ್ತಾನ ದೇಶವು ಒಂದು ರೀತಿ ಏಕಾಂಗಿ ಆಗಿದೆ ಎಂದು ನುಡಿದರು.
ಮೋದಿ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು; ಪೆಹಲ್ಗಾಂ ದುರ್ಘಟನೆ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಎಲ್ಲರಲ್ಲಿದೆ. ಪ್ರಧಾನಿಯವರ ನಿರ್ಧಾರವನ್ನು ಬೆಂಬಲಿಸುವ ವಾಗ್ದಾನವನ್ನು ಪ್ರತಿಯೊಬ್ಬರೂ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬೆಂಕಿ ಹಚ್ಚುವ ಕೆಲಸ ಕೈಬಿಡಿ:
ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೆಡೆ ಅಲ್ಪಸಂಖ್ಯಾತರ ಓಲೈಕೆ ನಡೆದಿದೆ. ಹಿಂದೂಗಳಿಗೆ ಅಪಮಾನ, ಹಿಂದೂ ಕಾರ್ಯಕರ್ತರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ವಾತಾವರಣ ತಿಳಿ ಆಗುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.
ಹಾಡಹಗಲೇ ರಾಜ್ಯದಲ್ಲಿ ಕೊಲೆ, ಹತ್ಯೆ ಆಗುತ್ತಿವೆ. ಕರ್ನಾಟಕ ರಾಜ್ಯ ಒಂದು ರೀತಿ ರಣರಂಗವಾಗಿದೆ ಎಂದು ಟೀಕಿಸಿದರು. ಕೊಲೆಗಳು ಬಹಳ ಸಾಮಾನ್ಯವಾಗಿದೆ. ಮೈಸೂರಿನ ಘಟನೆ, ವಿವಿಧ ಕಡೆ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆಯಿಂದ ಪೊಲೀಸರು ಧೈರ್ಯ ಕಳಕೊಳ್ಳುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ದೂರಿದರು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಸಂಪೂರ್ಣವಾಗಿ ಹದಗೆಟ್ಟಿದೆ. ಸಚಿವರು ಬೆಂಕಿ ಹಚ್ಚುವ ಕೆಲಸವನ್ನು ಬಿಡಬೇಕಿದೆ ಎಂದು ಒತ್ತಾಯಿಸಿದರು.
ಜನಾಕ್ರೋಶ ಯಾತ್ರೆ ಮತ್ತೆ ಆರಂಭ:
ಜನಾಕ್ರೋಶ ಯಾತ್ರೆ ನಾಳೆ ಕೋಲಾರದಲ್ಲಿ ಪ್ರಾರಂಭವಾಗಿ, 9ರಂದು ತುಮಕೂರು ಮತ್ತು ಚಿತ್ರದುರ್ಗ, ನಂತರ ಬಳ್ಳಾರಿ, ಹೊಸಪೇಟೆಯಲ್ಲಿ ನಡೆಯಲಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. 14ರಂದು ಹುಬ್ಬಳ್ಳಿಯಲ್ಲಿ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ಜಾತಿ ಗಣತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸದುದ್ದೇಶ ಮತ್ತು ಸಿದ್ದರಾಮಯ್ಯನವರ ಸರಕಾರದ ದುರುದ್ದೇಶದ ಕುರಿತು ಜನರಿಗೆ ಜಾಗೃತಿ ಮೂಡಿಸುವಂತೆ ಇಂದಿನ ಒಬಿಸಿ ಮೋರ್ಚಾದ ರಾಜ್ಯ ಮಟ್ಟದ ಸಭೆಯಲ್ಲಿ ತಿಳಿಸಿದ್ದಾಗಿ ಹೇಳಿದರು.