ನಟ್ಟು ಬೋಲ್ಟ್ ವಿವಾದ: ಹೇಳಿಕೆ ಸಮರ್ಥಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್

RELATED POSTS

ಬೆಂಗಳೂರು(thenewzmirror.com): “ನಾನು ಚಿತ್ರರಂಗದ ಒಳಿತಿಗಾಗಿ ಮಾತನಾಡಿದ್ದೇನೆ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ” ಎಂದು ನಟ್ಟು ಬೋಲ್ಟ್ ವಿವಾದ ಸೃಷ್ಟಿಸಿರುವ ತಮ್ಮ ಹೇಳಿಕೆಯನ್ನು  ಡಿಸಿಎಂ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಚಿತ್ರರಂಗದ ಬಗ್ಗೆ ನಿಮ್ಮ ಮಾತುಗಳು ಒರಟಾಗಿವೆ ಎನ್ನುವ ಬಿಜೆಪಿ, ಚಿತ್ರರಂಗದವರ ಟೀಕೆಯ ಬಗ್ಗೆ ಕೇಳಿದಾಗ, “ನನಗೆ ಬಣ್ಣ ಕಟ್ಟಿ ಮಾತನಾಡಲು ಬರುವುದಿಲ್ಲ. ನಾನು ನೇರವಾಗಿ ಹೇಳುತ್ತೇನೆ. ನೀವು (ಮಾಧ್ಯಮದವರು), ಅವರು ಬಂಡೆ ಎಂದು ಕರೆಯುತ್ತಾರೆ. ಹಾಗಾದರೆ ನಾನು ಬಂಡೆಯೇ? ನಾನು ಬಂಡೆಯಂತೇ ಕಾಣುತ್ತೇನೆಯೇ? ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಇದು ನನ್ನ ಮಾತಿನ ಶೈಲಿ. ಶೈಲಿ ಸರಿ ಇಲ್ಲದಿದ್ದರೆ ಸರಿಪಡಿಸಿಕೊಳ್ಳುತ್ತೇನೆ, ಆದರೆ ಸತ್ಯ ಹೇಳಿದ್ದೇನೆ” ಎಂದರು. 

ಹುಬ್ಬಳ್ಳಿಗೆ ಏಕೆ ಹೋದರು; ಬೆಂಗಳೂರಿಗೆ ನೀರು ತರುವ ಹೋರಾಟವಿದು:

ಮೇಕೆದಾಟು ಹೋರಾಟ ಕಾಂಗ್ರೆಸ್ ರೂಪಿಸಿದ ಹೋರಾಟ, ಇದರಲ್ಲಿ ಚಿತ್ರರಂಗದವರು ಹೇಗೆ ಭಾಗವಹಿಸಲು ಸಾಧ್ಯ ಎಂಬ ಪ್ರಶ್ನೆಗಳ ಬಗ್ಗೆ ಕೇಳಿದಾಗ, “ರಾಜ್ಯದ ನೆಲ, ಜಲ ಭಾಷೆ ರಕ್ಷಣೆಗೆ ಹೋರಾಟ ಮಾಡಬೇಕು. ಹಾಗಾದರೆ ಕಳಸಾ- ಬಂಡೂರಿ ಹೋರಾಟಕ್ಕೆ ಚಿತ್ರರಂಗದವರು ಏಕೆ ಹುಬ್ಬಳ್ಳಿಗೆ ಹೋದರು? ರಾಜಕುಮಾರ್ ಅವರು ಪಕ್ಷ ಬೇಧ ಮರೆತು ಹೋರಾಟಕ್ಕೆ ಏಕೆ ಬರುತ್ತಿದ್ದರು? ಹಾಗಾದರೆ ಈಗಿನ ಚಿತ್ರರಂಗದ ಜವಾಬ್ದಾರಿ ಏನು? ರಾಜಕುಮಾರ್ ಅವರು ಇವರಿಗೆ ಮಾದರಿ ಅಲ್ಲವೇ ಎಂದು ಪ್ರಶ್ನಿಸಿದರು.

ದುನಿಯಾ ವಿಜಯ್, ಪ್ರೇಮ್, ಸಾಧು ಕೋಕಿಲ, ಸಾ.ರಾ. ಗೋವಿಂದು ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೇ? ನನ್ನ ಮನೆಗೆ ನೀರು ತರಲು ಹೋರಾಟ ಮಾಡಲಿಲ್ಲ. ಇಡೀ ಬೆಂಗಳೂರಿಗೆ ನೀರು ತರಲು ಹೋರಾಟ ಮಾಡಿದ್ದೇವೆ. ಬೆಂಗಳೂರಲ್ಲಿ ಚಿತ್ರರಂಗದವರೂ ಇದ್ದಾರೆ. ಬರೀ ಕಾಂಗ್ರೆಸ್ ಕಾರ್ಯಕರ್ತರು ಇಲ್ಲ. ಚಿತ್ರಂಗದವರು ಬರದೇ ಇದ್ದರೂ ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ಯಾರ್ಯಾರದ್ದು ಏನೆನಿದೆ ಎಂದು ನನಗೆ ತಿಳಿದಿಲ್ಲವೇ? ಇನ್ನಾದರೂ ಬುದ್ದಿ ಕಲಿಯಿರಿ ಎಂದಷ್ಟೇ ಹೇಳುತ್ತಿದ್ದೇನೆ. ತಗೊಳ್ಳೋದು ಬಿಡೋದು ಅವರಿಗೆ ಬಿಟ್ಟದ್ದು” ಎಂದರು.

ಅಧಿಕಾರ ದರ್ಪ ಇದ್ದ ಕಾರಣಕ್ಕೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು:

ಅಧಿಕಾರದ ದರ್ಪದಿಂದ ಹೀಗೆ ಹೇಳಿದ್ದಾರೆ ಎನ್ನುವ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಹೇಳಿಕೆ ಬಗ್ಗೆ ಕೇಳಿದಾಗ, ರಾಜೇಂದ್ರ ಸಿಂಗ್ ಬಾಬು ನನ್ನ ಗೆಳೆಯ. ಅವರನ್ನು ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅಧಿಕಾರ ದರ್ಪ ಇದ್ದ ಕಾರಣಕ್ಕೇ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದು. ಪಕ್ಷಕ್ಕೆ ಹಾಗೂ ಚಿತ್ರರಂಗಕ್ಕೆ ಸಹಾಯ ಮಾಡಲಿ ಎಂದು ಅವರಿಗೆ ಸ್ಥಾನ ನೀಡಲಾಗಿತ್ತು. ಇದಾದ ನಂತರ ಅವರು ಒಂದು ದಿನವೂ ಪಕ್ಷದ ಕೆಲಸಕ್ಕೆ ಬರಲಿಲ್ಲ. ದರ್ಪ ಸುಮ್ಮನೆ ಬರುವುದಿಲ್ಲ. ಜನರು ಕೊಟ್ಟ ಅಧಿಕಾರದಿಂದ ಬರುತ್ತದೆ. ಆ ಅಧಿಕಾರದಿಂದಲೇ ರಾಜೇಂದ್ರ ಸಿಂಗ್ ಬಾಬು ಅವರಂಥವರಿಗೆ ಅಧಿಕಾರ ಕೊಟ್ಟಿದ್ದದ್ದು” ಎಂದು ಹೇಳಿದರು.

“ನನಗೆ ಯಾವುದೇ ರೀತಿಯ ವರ್ಣನೆಯ ಅಗತ್ಯವಿಲ್ಲ. ಚಿತ್ರರಂಗದವರ ಉತ್ತಮ ವೇದಿಕೆಯನ್ನು, ಬದುಕು, ಬೆಳವಣಿಗೆಯನ್ನು ಅವರೇ ಉಳಿಸಿಕೊಳ್ಳಬೇಕಲ್ಲವೇ? ಶಿವಕುಮಾರ್, ಸಿದ್ದರಾಮಯ್ಯ ಅವರ ಮನೆ ಕಾರ್ಯಕ್ರಮಕ್ಕೆ ಬರಬೇಡಿ. ನಿಮ್ಮ ಕಾರ್ಯಕ್ರಮ, ನೀವು ಕಾರ್ಯಕ್ರಮಕ್ಕೆ ಬಂದು ಉಳಿಸಿ, ಬೆಳೆಸಿಕೊಂಡು ಹೋಗಿ ಎಂದು ಹೇಳಿದ್ದೇನೆ. ಎಲ್ಲಾ ಸೇರಿ ಸಂಘಟನೆ ಆಗಬೇಕಲ್ಲವೇ?” ಎಂದು ಹೇಳಿದರು.

ಹೊಸ ಭಾಷೆ ಕಲಿಸಿಕೊಡಲಿ:

ನಟ್ಟು- ಬೋಲ್ಟ್ ಪದ ಶಿವಕುಮಾರ್ ಅವರ ಸಂಸ್ಕಾರ ತೋರಿಸುತ್ತದೆ ಎನ್ನುವ ನಾಗಾಭರಣ ಮಾತಿನ ಬಗ್ಗೆ ಕೇಳಿದಾಗ, “ನನ್ನ ಹಳ್ಳಿ ಭಾಷೆಯಲ್ಲಿ ಉತ್ತರ ನೀಡಿದ್ದೇನೆ. ಅವರ ಬಳಿ ಹೊಸ ಭಾಷೆಯಿದ್ದರೆ ಕಲಿಸಿಕೊಡಲಿ, ಅದೇ ರೀತಿ ಮಾತನಾಡುತ್ತೇನೆ” ಎಂದು ತಿವಿದರು.  ಸರಿಯಾಗಿ ಆಹ್ವಾನ ನೀಡಿಲ್ಲ ಎಂದು ನಾಗಭರಣ ಹೇಳಿದ್ದರ ಬಗ್ಗೆ ಕೇಳಿದಾಗ, “ಆಹ್ವಾನ ನೀಡದೇ ಇದ್ದರೇ ತಪ್ಪು. ಇದು ಬೇರೆ ವಿಚಾರ. ಮನೆ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಬೇಕಲ್ಲವೇ? ಟೀಕೆ ಮಾಡಲಿ, ಬಯ್ಯಲಿ, ಹೋರಾಟ ಮಾಡಲಿ, ಜೈಕಾರ ಕೂಗಲಿ. ತಲೆ ಕೆಡಿಕೊಳ್ಳುವುದಿಲ್ಲ, ಅದು ನನಗೆ ಸಂತಸದ ವಿಚಾರವೇ” ಎಂದರು.

ಚಿತ್ರರಂಗ ಸಾಯುತ್ತಿದೆ:

“ನಾನು ಸಹ ಸಿನಿಮಾ ರಂಗದಿಂದಲೇ ಬಂದವನು. ಇಂದು ಕನ್ನಡ ಚಿತ್ರರಂಗ ಸಾಯುತ್ತಿದೆ. ಹೊಸ ಸಿನಿಮಾಗಳು ಬರುತ್ತಿಲ್ಲ. ನಾನು ಇದೇ ರಂಗಕ್ಕೆ ಸೇರಿದವನು. ಈ ಹಿಂದೆ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಈಗ ನಮ್ಮ ಒಡೆತನದ 23 ಸಿನಿಮಾ ಪ್ರದರ್ಶನ ಪರದೆಗಳು ಬೆಂಗಳೂರಿನಲ್ಲಿವೆ” ಎಂದು ಹೇಳಿದರು.

“ನಮ್ಮ ಕನ್ನಡ ಚಿತ್ರರಂಗ ಇತ್ತೀಚೆಗೆ ಒಂದೆರಡು ಸಿನಿಮಾಗಳಿಂದ ಬಾಲಿವುಡ್ಗಿಂತ ಕೊಂಚ ಎತ್ತರಕ್ಕೆ ಬೆಳೆದಿದೆ. ಚಿತ್ರಗಳ ಗುಣಮಟ್ಟ ಹಾಲಿವುಡ್ ಗುಣಮಟ್ಟಕ್ಕೆ ಬೆಳೆಯುತ್ತಿದೆ. ಒಂದಷ್ಟು ಜನ ಇದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಈ ಹೆಜ್ಜೆ ಗುರುತುಗಳು ಉಳಿಯಬೇಕು, ಇನ್ನೂ ಎತ್ತರಕ್ಕೆ ಚಿತ್ರರಂಗವನ್ನು ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಉದ್ದೇಶ ಮತ್ತು ಆಶಯವಾಗಿದೆ” ಎಂದರು.

“ಮುಂದಿನ ವರ್ಷ ಬೆಂಗಳೂರಿನಲ್ಲಿ ಐಫಾ (ಐಐಎಫ್ ಎ) ಪ್ರಶಸ್ತಿ ನೀಡುವ ಕುರಿತು ಆಲೋಚನೆ ಮಾಡಿದ್ದೇನೆ. ಇದರ ಬಗ್ಗೆ ಈಗಾಗಲೇ ಎರಡು ಸುತ್ತಿನ ಮಾತುಕಥೆ ನಡೆದಿದೆ. ಪ್ರಶಸ್ತಿ ನೀಡುವ ತಂಡ ಈಗಾಗಲೇ ಬಂದು ನನ್ನ ಬಳಿ ಮಾತುಕಥೆ ನಡೆಸಿದೆ. ಇತ್ತೀಚೆಗೆ ಅಬುದಾಬಿಗೆ ಹೋದಾಗಲೂ ಚರ್ಚೆ ನಡೆಸಿದ್ದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist