ಆಪರೇಷನ್ ಸಿಂಧೂರ:ಪಂಚಪ್ರಶ್ನೆಗಳನ್ನ ಬಿಜೆಪಿ ಮುಂದಿಟ್ಟ ಸಚಿವ ಪ್ರಿಯಾಂಕ ಖರ್ಗೆ

RELATED POSTS

ಬೆಂಗಳೂರು(www.thenewzmirror.com): ಆಪರೇಷನ್‌ ಸಿಂಧೂರದಿಂದಾಗಿ ದೇಶದ ಸೈನಿಕರ ಮೇಲೆ ಭಾರತೀಯರಲ್ಲಿ ವಿಶ್ವಾಸ ಹಾಗೂ ಗೌರವ ಹೆಚ್ಚಿದೆ. ಆದರೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯದಿಂದಾಗಿ  ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟಾಗಿದೆ. ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆಯಲ್ಲಿ ದೇಶದ ಜನತೆಗೆ ಉತ್ತರಿಸಲೇಬೇಕಾದ ಐದು ಅಂಶದ ಪ್ರಶ್ನೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ಪಕ್ಷದ ಮುಂದಿರಿಸಿದ್ದಾರೆ.  

ಕದನ ವಿರಾಮದಲ್ಲಿ ಅಮೇರಿಕಾದ ಪಾತ್ರವೇನು? ಎನ್ನುವ ಮೊದಲ ಪ್ರಶ್ನೆಯನ್ನು ಬಿಜೆಪಿ ಮುಂದಿಟ್ಟ ಪ್ರಿಯಾಂಕ್ ಖರ್ಗೆ,

ʼಭಾರತ – ಪಾಕಿಸ್ತಾನದ ನಡುವಿನ ಕದನ ವಿರಾಮವು ನನ್ನಿಂದಲೇ ಆಗಿದೆʼ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿದ್ದಾರೆ, ಅವರ ಮಾತು ನಿಜವೇ? ಪ್ರಧಾನಮಂತ್ರಿ ಮೋದಿ ಇದುವರೆಗೂ ಈ ಬಗ್ಗೆ ಸ್ಪಷ್ಟನೆ ನೀಡದಿರುವುದೇಕೆ? ನಮ್ಮ ವಿದೇಶಾಂಗ ನೀತಿಯನ್ನು ನಿರ್ವಹಿಸಲು ಹಾಗೂ ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ಧರಿಸುವ ಹಕ್ಕನ್ನು ಬೇರೆ ದೇಶಕ್ಕೆ ಗುತ್ತಿಗೆ ನೀಡಲಾಗಿದೆಯೇ? ಇದುವರೆಗೂ ಆಂತರಿಕ ವಿಚಾರವಾಗಿದ್ದ ಕಾಶ್ಮೀರದ ವಿಷಯವು ಈಗ ಅಂತರರಾಷ್ಟ್ರೀಯ ವಿಚಾರವಾಗಿ ಮಾರ್ಪಟ್ಟಿದೆಯೇ? ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿರುವ ದೇಶವಾಗಿರುವ ಪಾಕಿಸ್ತಾನವನ್ನು ಪ್ರಗತಿಶೀಲ ಭಾರತದೊಂದಿಗೆ ಹೋಲಿಸಿ ಟ್ರಂಪ್ ಮಾತಾಡುತ್ತಿದ್ದಾರೆ. ನಮ್ಮ ಪ್ರಧಾನಿಯಾಗಲಿ, ಕೇಂದ್ರ ಸರ್ಕಾರವಾಗಲಿ ಇದನ್ನು ಖಂಡಿಸಿಲ್ಲ, ಅವರ ಹೋಲಿಕೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಇದೆಯೇ? ʼಕದನ ವಿರಾಮವಿಲ್ಲದಿದ್ದರೆ ವ್ಯಾಪಾರವೂ ಇಲ್ಲ ಎಂದು ನಾನು ಹೇಳಿದೆ ಹಾಗಾಗಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಟ್ರಂಪ್ ಹೇಳಿದ್ದಾರೆ, ಈ ವ್ಯಾಪಾರದ ವಿಷಯವು ಬೆದರಿಕೆಯಾಗಿತ್ತೇ ಅಥವಾ ಆಮಿಷವಾಗಿತ್ತೇ?  ʼಮೇಕ್‌ ಇನ್‌ ಇಂಡಿಯʼ ಮಾಡಬೇಡಿ ಎಂದು ತಮ್ಮ ದೇಶದ ಕಂಪೆನಿಗಳಿಗೆ ಸೂಚಿಸುವ ಮೋದಿ ಅವರ ಪರಮಾಪ್ತ ಗೆಳೆಯ ಟ್ರಂಪ್‌ ಅವರು ಅಮೆರಿಕದ ಉತ್ಪನ್ನಗಳಿಗೆ ʼಜಿರೊ ಟ್ಯಾರೀಫ್‌ʼ ನೀತಿಯನ್ನು ಭಾರತ ಒಪ್ಪಿರುವುದಾಗಿ ಹೇಳಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ವಿದೇಶಾಂಗ ನೀತಿಯ ಸಂಪೂರ್ಣ ವೈಫಲ್ಯದ ಬಗ್ಗೆ ಮಾತನಾಡಲಿ ಎನ್ನುವ ಎರಡನೇ ಪ್ರಶ್ನೆ ಮುಂದಿಟ್ಟು,

ಪಾಕಿಸ್ತಾನಕ್ಕೆ ಸುಮಾರು 20,000 ಕೋಟಿ ರೂ. ಸಾಲ ನೀಡುವ ವಿಚಾರದಲ್ಲಿ ಐಎಂಎಫ್ ಸದಸ್ಯ ರಾಷ್ಟ್ರಗಳಲ್ಲಿ ಭಾರತ ಹೊರತುಪಡಿಸಿ ಬೇರೆಲ್ಲಾ ದೇಶಗಳೂ ಸಾಲ ನೀಡಲು ಮತ ಹಾಕಿದವು, ಇತರ ದೇಶಗಳನ್ನು ಭಾರತದ ನಿಲುವಿನ ಪರ ಓಲೈಸುವುದರಲ್ಲಿ ವಿಫಲವಾಗಿದ್ದು ಸ್ವಯಂಘೋಷಿತ ವಿಶ್ವಗುರುವಿನ  ವಿದೇಶಾಂಗ ನೀತಿಯ ವೈಫಲ್ಯವಲ್ಲವೇ?ಚೀನಾ, ಟರ್ಕಿ ಬಹಿರಂಗವಾಗಿ ಪಾಕಿಸ್ತಾನದ ಪರ ನಿಂತವು, ಪ್ರಧಾನಮಂತ್ರಿಗಳು ನೂರಾರು ದೇಶ ಸುತ್ತಿ ಬಂದರೂ, ಯಾವೊಂದು ದೇಶವೂ ಭಾರತವನ್ನು ಅಧಿಕೃತವಾಗಿ ಬೆಂಬಲಿಸಲಿಲ್ಲ, ಉಗ್ರರ ಕೃತ್ಯವನ್ನು ಖಂಡಿಸಲಿಲ್ಲ.  ಮೋದಿಯವರ ಜಾದೂ ಕಿ ಜಪ್ಪಿ, ಹಾಗೂ ದುಬಾರಿ ವಿದೇಶಿ ಪ್ರವಾಸಗಳು ವ್ಯರ್ಥವಾದವಲ್ಲವೆ?ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿಯ ಪಲಾಯನವಾದವೇಕೆ? ಎನ್ನುವ ಮೂರನೇ ಪ್ರಶ್ನೆಯೊಂದಿಗೆ ದೇಶದ ಎಲ್ಲಾ ವಿರೋಧ ಪಕ್ಷಗಳೂ ಪೆಹಲ್ಗಾಮ್ ಕೃತ್ಯಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಮತ್ತು ಸೈನ್ಯಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದರೂ ಪ್ರಧಾನಮಂತ್ರಿ ಸರ್ವ ಪಕ್ಷ ಸಭೆಗಳಿಗೆ ಹಾಜರಾಗಲಿಲ್ಲ ಏಕೆ? ಪಾಕಿಸ್ತಾನದ ಪ್ರಧಾನಿಯು ವಿಶೇಷ ಅಧಿವೇಶನ ಕರೆದು ಆಪರೇಷನ್ ಸಿಂಧೂರದ ವಿರುದ್ಧ ಪಾಕಿಸ್ತಾನಕ್ಕೆ ಜಯವಾಗಿದೆ ಎಂದು ಘೋಷಣೆ ಮಾಡಿದ್ದರು, ಆದರೆ ಭಾರತದ ಪ್ರಧಾನಿ ಆಪರೇಷನ್ ಸಿಂಧೂರದ ಯಶಸ್ಸಿನ ಕುರಿತು ಸಂಸತ್ ಅಧಿವೇಶನ ಕರೆಯಲು ಹಿಂಜರಿಯುತ್ತಿರುವುದೇಕೆ?ಕದನ ವಿರಾಮದ ಕುರಿತು ದೇಶದ ಜನರಲ್ಲಿ ಹಲವು ಪ್ರಶ್ನೆಗಳಿರುವಾಗ ಪ್ರಧಾನಿ ಪತ್ರಿಕಾಗೋಷ್ಠಿ ಏರ್ಪಡಿಸಿ ಉತ್ತರಿಸದಿರುವುದೇಕೆ?

ʼಆಪರೇಷನ್ ಸಿಂಧೂರʼ ಕುರಿತು ಪ್ರಕೇವಲ NDA ಸರ್ಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಿವರಣೆ ನೀಡುವ ಸಭೆಯನ್ನು ಪ್ರಧಾನಿ ಕರೆಯುತ್ತಿದ್ದಾರೆ, ಆದರೆ ಎನ್ ಡಿ ಎ ಹೊರತಾದ ಸರ್ಕಾರಗಳಿರುವ, ಭಾರತದ ಗಡಿಗೆ ಹೊಂದಿಕೊಂಡಿರುವ ಪಂಜಾಬ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳನ್ನು ಏಕೆ ಆಹ್ವಾನಿಸುತ್ತಿಲ್ಲ ಎಂದಿದ್ದಾರೆ. 

ಕದನ ವಿರಾಮಕ್ಕೆ ಕಾರಣಗಳೇನು? ಆಗಿರುವ ಒಪ್ಪಂದಗಳೇನು? ದೇಶಕ್ಕಾದ ನಷ್ಟದ ಲೆಕ್ಕವೇನು? ಎನ್ನುವ ನಾಲ್ಕನೇ ಪ್ರಶ್ನೆ ಮುಂದಿಟ್ಟಿದ್ದು,ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೈನ್ಯ ಮೇಲುಗೈ ಸಾಧಿಸುತ್ತಿತ್ತು, ಅತಿ ಉತ್ಸಾಹದಿಂದ ನಮ್ಮ ಸೈನ್ಯ ಮುನ್ನುಗ್ಗುತ್ತಿತ್ತು,  ನಮ್ಮ ಸೈನ್ಯವು ಪಾಕಿಸ್ತಾನದ ಉಗ್ರರನ್ನು ಮಟ್ಟ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಕದನ ವಿರಾಮ ಘೋಷಿಸಿದ್ದೇಕೆ? ಕಾರಣಗಳನ್ನು ಜನರಿಗೆ ತಿಳಿಸಬೇಕಿದೆ. ಕದನ ವಿರಾಮದ ಒಪ್ಪಂದಗಳೇನು? ʼಆಪರೇಷನ್ ಸಿಂಧೂರʼ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಆಗಿರುವ ನಷ್ಟಗಳೇನು? ವಿದೇಶಿ ಮಾಧ್ಯಮಗಳು ಭಾರತದ ಫೈಟರ್ ಜೆಟ್ ಗಳನ್ನು ಹೊಡೆದು ಉರುಳಿಸಲಾಗಿದೆ ಎಂದು ವರದಿ ಮಾಡಿವೆ, ಈ ಸಂಬಂಧ ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ, ದೇಶದ ಜನತೆಗೆ ಈ ಕುರಿತು ತಿಳಿಸುವ ಜವಾಬ್ದಾರಿ ಸರ್ಕಾರದ್ದಲ್ಲವೇ? ಕದನವಿರಾಮದ ನಂತರವೂ ಪಾಕಿಸ್ತಾನವು ಡ್ರೋನ್ ದಾಳಿ ಮುಂದುವರೆಸಿತ್ತು, ಪ್ರಧಾನಿಯ ಮನದ ಮಾತಿನ ನಂತರವೂ ದಾಳಿ ನಡೆದಿತ್ತು, ಕದನ ವಿರಾಮ ಉಲ್ಲಂಘನೆಯ ಈ ದಾಳಿಗಳಿಗೆ ಯಾವುದೇ ಕಠಿಣ ಕ್ರಮಗಳನ್ನು ಜರುಗಿಸಲಿಲ್ಲ ಏಕೆ?ಎಂದಿದ್ದಾರೆ.

ಪೆಹಲ್ಗಾಮ್ ದಾಳಿಯ ಉಗ್ರರು ಎಲ್ಲಿ ಹೋದರು?ಎನ್ನುವ ಐದನೇ ಪ್ರಶ್ನೆಯೊಂದಿಗೆ ಉಗ್ರರು ಗಡಿಯಿಂದ ಸುಮಾರು 250 ಕಿಲೋಮೀಟರ್ ಒಳಗೆ ಬಂದು  ಪೆಹಲ್ಗಾಮ್ ನಲ್ಲಿ ದಾಳಿ ಮಾಡಿದ್ದರೂ ಅವರನ್ನು ಹುಡುಕಿ ಹೊಡೆಯಲು ಸಾಧ್ಯವಾಗಲಿಲ್ಲವೇಕೆ? ಅವರು ವಾಪಸ್ ಗಡಿ ದಾಟಿ ಹೋಗಿದ್ದಾರೆಯೇ?  ಅಥವಾ ದೇಶದ ಒಳಗೆಯೇ ಇದ್ದಾರೆಯೇ?ಎಂದಿದ್ದಾರೆ. 

ಭಾರತದ ಸಾರ್ವಭೌಮತೆಗೆ ಧಕ್ಕೆ ತಂದು ಸೈನ್ಯದ ಸಾಧನೆಯನ್ನು ತಮ್ಮದೆಂದು ಕೆಡಿಟ್‌ ಪಡೆಯಲು ಹವಣಿಸುತ್ತಿರುವ ಬಿಜೆಪಿ ಜನರ ಪ್ರಶ್ನೆಗಳಿಗೆ ಉತ್ತರಿಸಲಿ, ಭಾರತದ ಜನತೆಯ ಮುಂದೆ ಇಷ್ಟಲ್ಲ ಪ್ರಶ್ನೆಗಳು ಉದ್ಭವವಾಗಿರುವಾಗ ಬಿಜೆಪಿ ಕೇಂದ್ರ ಸರ್ಕಾರದ  ತಪ್ಪು ನಿರ್ಧಾರಗಳನ್ನು, ಮೋದಿ ಅವರ ಮೌನವನ್ನು ಹಾಗೂ ವಿದೇಶಾಂಗ ನೀತಿಯಲ್ಲಿನ ವೈಫಲ್ಯಗಳನ್ನು ಮುಚ್ಚಿ ಹಾಕಲು ತಿರಂಗ ಯಾತ್ರೆ ಮಾಡುತ್ತಿದ್ದಾರೆ. ಕದನ ವಿರಾಮದ ಕುರಿತು ವಿಶೇಷ ಸಂಸತ್‌ ಅಧಿವೇಶನ ಕರೆದು ಉತ್ತರಿಸುವ ಇಚ್ಛೆಯೂ ಇಲ್ಲ, ಪತ್ರಿಕಾಗೋಷ್ಠಿ ನಡೆಸುವ ಧೈರ್ಯವೂ ಇಲ್ಲ.  ತಿರಂಗ ಯಾತ್ರೆಯಲ್ಲದರೂ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಪಕ್ಷದಿಂದ ಭಾರತದ ಜನತೆ ಉತ್ತರ ಬಯಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist