ಸಿಎಂ ಸಿದ್ದರಾಮಯ್ಯರಿಗೆ ‘ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ನೀಡಿದ ವಿಪಕ್ಷ ನಾಯಕ ಆರ್.ಅಶೋಕ್

RELATED POSTS

ಬೆಂಗಳೂರು(www.thenewzmirror.com): ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದನ್ನು ನಾವು ನೀಡುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ಬಿಜೆಪಿ ನಗರ ಕಾರ್ಯಾಲಯ “ಬಾವುರಾವ್ ದೇಶಪಾಂಡೆ  ಭವನ” ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ದಿವಾಳಿಯಾಗಿದೆ. ಸಾಲ ಪಡೆದು ಸಂಬಳ ಕೊಡುವಂಥ ಸ್ಥಿತಿ ಬಂದಿದೆ. ನಮ್ಮ ಡಿ.ಕೆ.ಶಿವಕುಮಾರ್ ನಿನ್ನೆ ಇದನ್ನು ಸರಿಯಾಗಿ ಹೇಳಿದ್ದಾರೆ. ಗೃಹಲಕ್ಷ್ಮಿ ಗ್ಯಾರಂಟಿಗೆ ತಿಂಗಳಿಗೊಮ್ಮೆ 2 ಸಾವಿರ ಹಣ ಕೊಡಲು ನಿಮ್ಮಪ್ಪನ ಮನೆ ಗಂಟಾ ಎಂದು ಕೇಳಿದ್ದಾರೆ. ತಿಂಗಳಿಗೊಮ್ಮೆ 2 ಸಾವಿರ ಫಟಾಫಟ್ ಹಣ ಕೊಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇಲ್ಲಿ ಶಿವಕುಮಾರ್ ಕಟಾಕಟ್, ಯಾವಾಗ ಹಣ ಬರುತ್ತೋ ಆಗ ದುಡ್ಡು ಕೊಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.

ರಾಜ್ಯದ 40 ಸರಕಾರಿ ಸಂಸ್ಥೆಗಳು ದಿವಾಳಿ:

ರಾಜ್ಯದ 40 ಸರಕಾರಿ ಸಂಸ್ಥೆಗಳು ದಿವಾಳಿ ಆಗಿವೆ. ಸಾರ್ವಜನಿಕ ವಲಯದ 127 ಉದ್ಯಮಗಳಲ್ಲಿ 60 ಉದ್ಯಮಗಳು ನಷ್ಟದಲ್ಲಿವೆ. ಈ ಕಂಪೆನಿಗಳು 46,800 ಕೋಟಿ ಸಾಲ ಮಾಡಿವೆ. ಪ್ರವಾಸೋದ್ಯಮ, ರಾಜೀವ್ ಗಾಂಧಿ ವಸತಿ ನಿಗಮ, ಮೈಸೂರು ಪೇಪರ್ ಮಿಲ್ಸ್, ಕೆಎಸ್‍ಆರ್‍ಟಿಸಿ, ಎನ್‍ಡಬ್ಲ್ಯು ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಬೆಸ್ಕಾಂ ಮುಚ್ಚುವ ಸ್ಥಿತಿಯಲ್ಲಿದೆ ಎಂದು ಸಿಎಜಿ ವರದಿಯನ್ನು ಉಲ್ಲೇಖಿಸಿ ತಿಳಿಸಿದರು.

ಯಾವ ಸಾಧನೆಗೆ ಈ ಸಂಭ್ರಮಾಚರಣೆ?

ಮುಖ್ಯಮಂತ್ರಿಗಳೇ.. ಯಾವ ಸಾಧನೆಗಾಗಿ ಈ 2 ವರ್ಷದ ಸಂಭ್ರಮಾಚರಣೆ ಮಾಡಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ? ಹಾಲಿನ ದರ ಏರಿಸಿದ್ದೀರಿ. ನೀರು, ವಿದ್ಯುತ್, ಪೆಟ್ರೋಲ್, ಡೀಸೆಲ್, ಆಸ್ತಿ ತೆರಿಗೆ- ಇವೆಲ್ಲವನ್ನೂ ಏರಿಸಿದ್ದೀರಿ. ದರ ಏರಿಸಿದ ಪರಿಣಾಮವಾಗಿ ಜನರು ಕಷ್ಟದಲ್ಲಿರುವಾಗಿ, ಸಮಾವೇಶ ಮಾಡಬೇಕೆಂದು ನಿಮಗೆ ಯಾಕೆ ಅನ್ನಿಸಿದೆ? ರೈತರ ಆತ್ಮಹತ್ಯೆ, ಬಾಣಂತಿಯರ ಸಾವಿಗಾಗಿ ಸಮಾವೇಶವೇ?

ಎರಡು ವರ್ಷಗಳಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ 187 ಕೋಟಿಯನ್ನು ಫಟಾಫಟ್ ಲೂಟಿ ಮಾಡಿದ್ದೀರಿ. ಇನ್ನೊಂದೆಡೆ 89 ಕೋಟಿ ಲೂಟಿ ಆದುದಾಗಿ ಸಿದ್ದರಾಮಯ್ಯನವರೇ ಅಧಿವೇಶನದಲ್ಲೇ ಹೇಳಿದ್ದಾರೆ. ಅದಕ್ಕಾಗಿ ಈ ಸಂಭ್ರಮವೇ? ಮುಡಾ ಹಗರಣದಲ್ಲಿ ವಾಸ್ತು ಪ್ರಕಾರ ಇರುವ 14 ಮೂಲೆ ನಿವೇಶನಗಳನ್ನು ಲೂಟಿ ಹೊಡೆದುದಕ್ಕೆ ನಿಮ್ಮ ಈ ಸಂಭ್ರಮಾಚರಣೆಯೇ? ಎಂದು ಆರ್.ಅಶೋಕ್  ಕೇಳಿದರು.

ಕಳಪೆ ದ್ರಾವಣ ನೀಡಿ ದಿನನಿತ್ಯ 15- 20 ಬಾಣಂತಿಯರ ಸಾವಾಗಿದೆಯಲ್ಲವೇ? ಸಚಿವರೇ,ಸರಕಾರಿ ಆಸ್ಪತ್ರೆಗೆ ಹೆರಿಗೆಗೆ ಹೋದರೆ ವಾಪಸ್ ಬರುವುದೇ ಇಲ್ಲವೆಂಬ ಗ್ಯಾರಂಟಿಗಾಗಿ ಈ ಸಾಧನೆಯೇ? ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಬರುವುದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಿಮ್ಮ ಸಚಿವರು ಹೇಳಿದ್ದಾರೆ. ಬರಗಾಲ ಬರಲೆಂದು ರೈತರು ಕೇಳಿಕೊಳ್ಳುತ್ತಾರೆಂದು ಇನ್ನೊಬ್ಬ ಸಚಿವ ಶಿವಾನಂದ ಪಾಟೀಲರು ಹೇಳಿದ್ದಾರೆ. ಈ ಸಾಧನೆಗಾಗಿ ಸಮಾವೇಶವೇ? ಎಂದು ಪ್ರಶ್ನಿಸಿದರು.

ವಕ್ಫ್ ಮಂಡಳಿ ಹೆಸರಿನಲ್ಲಿ ಸಾಬರು ಲಕ್ಷಾಂತರ ಎಕರೆ ರೈತರ ಜಮೀನು, ದೇವಸ್ಥಾನದ ಆಸ್ತಿಯನ್ನು ಲೂಟಿ ಹೊಡೆದರಲ್ಲವೇ? ಅವರಿಗೆಲ್ಲ ಇದೇ ಜಮೀರ್ ಅಹ್ಮದ್ ಕೃಪಾಶೀರ್ವಾದ ಮಾಡಿದ್ದರಲ್ಲವೇ? ವಕ್ಫ್ ಆಸ್ತಿ ವಾಪಸ್ ಕೊಡಿಸುವುದಾಗಿ ಹೇಳಿಕೆ ಕೊಟ್ಟರಲ್ಲವೇ? ಇದಕ್ಕಾಗಿ ನಿಮ್ಮ ಸಾಧನಾ ಸಮಾವೇಶ ಮಾಡುತ್ತಿದ್ದೀರಾ ಎಂದು ಕೇಳಿದರು.

ಕೆಪಿಎಸ್ಸಿ ಪ್ರಶ್ನೆಪತ್ರಿಕೆ ತಯಾರು ಮಾಡಲು ಯೋಗ್ಯತೆ ಇಲ್ಲದ ಸರಕಾರ ಇದು. ಕನ್ನಡ ಅನುವಾದದಲ್ಲಿ 79 ತಪ್ಪು ಮಾಡಿದ್ದಾರೆ. 2 ಲಕ್ಷ ಅಭ್ಯರ್ಥಿಗಳು ಇದ್ದರು. ಅವರ ಮನೆ, ಜೀವನ ಹಾಳು ಮಾಡಿದ್ದೀರಲ್ಲವೇ? ಅವರ ಬಾಳಿಗೆ ಕೊಡಲಿ ಇಟ್ಟಿದ್ದಕ್ಕೆ ಈ ಸಾಧನಾ ಸಮಾವೇಶ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.

ಗಣೇಶ ವಿಗ್ರಹಕ್ಕೆ ಜೈಲುವಾಸ, ಪಾಕ್ ಜಿಂದಾಬಾದ್ ಹೇಳಿದ್ದಕ್ಕಾಗಿ ಸಂಭ್ರಮವೇ?ಹುಬ್ಬಳ್ಳಿಯಲ್ಲಿ ನೇಹಾರ ಲವ್ ಜಿಹಾದ್ ಕೊಲೆ ಆಯಿತು. ಇದಕ್ಕಾಗಿ ಸಂಭ್ರಮಾಚರಣೆಯೇ? ನಾಗಮಂಗಲದಲ್ಲಿ ಪೊಲೀಸ್ ವ್ಯಾನಿನಲ್ಲೇ ಗಣೇಶನ ವಿಗ್ರಹದ ಮೆರವಣಿಗೆ ನಡೆಸಿ ವಿಗ್ರಹ ವಿಸರ್ಜಿಸಿದ್ದೀರಿ. ಗಣೇಶನಿಗೂ ಜೈಲುವಾಸ ಮಾಡಿದ್ದೀರಿ. ಇದಕ್ಕೋಸ್ಕರ ಈ ಸಮಾವೇಶವೇ ಎಂದು ಆರ್.ಅಶೋಕ್ ಅವರು ಕೇಳಿದರು.

ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದಿದ್ದೀರಿ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದನ್ನು ನಸೀರ್ ಸಾಬ್ ಜಿಂದಾಬಾದ್ ಅಂದಿದ್ದು ಎನ್ನುವ ಹೇಳಿಕೆ ಕೊಟ್ಟಿರಿ ಆದರೆ ಫೊರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದದ್ದು ಸಾಬೀತಾಗಿದೆ. ನಿಮಗೆ ಮಾನ ಮರ್ಯಾದೆ ಇದೆಯೇ ಕಾಂಗ್ರೆಸ್ಸಿಗರೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಮಳೆಯಿಂದ 5 ಜನ ಮೃತಪಟ್ಟಿದ್ದಾರೆ. ಈ ಸಾವಿನ ಮೇಲೆ ಸಮಾವೇಶ ಮಾಡಿದ್ದೀರಿ. ಬೆಂಗಳೂರಿನ ಜನರು ಕರ್ನಾಟಕ ಬಜೆಟ್‍ನ ಶೇ 67 ರಷ್ಟು ತೆರಿಗೆ ಕಟ್ಟುತ್ತಾರೆ. ಅಂಥವರನ್ನು ನೀರಿನಲ್ಲಿ ಮುಳುಗಿಸಿದ್ದೀರಿ. ತೇಲುತಿರುವ ಬೆಂಗಳೂರು ಮಾಡಿದ್ದೀರಲ್ಲವೇ? ಇದಕ್ಕಾಗಿ ನಿಮ್ಮ ಸಮಾವೇಶ ಮಾಡಿದ್ದೀರಾ ಎಂದು ಕೇಳಿದರು.

ಹೆಚ್ಚು ಬಾರ್, ವೈನ್ ಸ್ಟೋರ್ ತೆರೆದುದಕ್ಕೆ ಅಭಿನಂದನೆ:

ಹಾಲಿನ ದರ 3 ಬಾರಿ 9 ರೂ. ಹೆಚ್ಚಿಸಿ ರೈತರಿಗೆ ಎಷ್ಟು ಪೈಸೆ ಕೊಟ್ಟಿದ್ದೀರಿ? ರೈತರ ಸಬ್ಸಿಡಿ ಇನ್ನೂ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಕರ್ನಾಟಕದಲ್ಲಿ ಹೆಚ್ಚು ಬಾರ್‍ಗಳು, ವೈನ್ ಸ್ಟೋರ್ ತೆರೆದಿದ್ದೀರಿ. ಅದಕ್ಕಾಗಿ ವಿಪಕ್ಷವಾದ ನಮ್ಮಿಂದ ನಿಮಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದರು. ಬಾರ್, ವೈನ್ ಸ್ಟೋರ್‍ಗೆ ಹಳ್ಳಿಯಲ್ಲಿ 2 ಕೋಟಿ, ನಗರದಲ್ಲಿ 3 ಕೋಟಿ ದರ ನಿಗದಿ ಮಾಡಿದ್ದಾರೆ ಎಂದು ಟೀಕಿಸಿದರು.

ತಂದೆ, ತಾಯಿಯ ಆಸೆಗೆ ಕೊಳ್ಳಿ ಇಟ್ಟಿರಲ್ಲವೇ?

ಚಾಮರಾಜನಗರ, ಮಂಡ್ಯ, ರಾಯಚೂರು ಸೇರಿ 9 ವಿಶ್ವವಿದ್ಯಾಲಯಗಳನ್ನು ಯಾಕೆ ಮುಚ್ಚಿದ್ದೀರಿ? ಅದಕ್ಕೆ ಕೇವಲ 250 ಕೋಟಿ ಬೇಕಾಗಿತ್ತು. ನಿಮಗೆ ಬಾರ್, ವೈನ್ ಸ್ಟೋರ್‍ಗಳಿಂದ ಬರುವ ಹಣದ ಶೇ 10ರಷ್ಟನ್ನು ಹಾಕಿದ್ದರೆ ಬಡ ವಿದ್ಯಾರ್ಥಿಗಳ ಆಶಯ ಈಡೇರಿಸಬಹುದಿತ್ತು. ಮಗ, ಮಗಳು ವಿದ್ಯಾವಂತರಾಗುವ ತಂದೆ, ತಾಯಿಯ ಆಸೆಗೆ ಕೊಳ್ಳಿ ಇಟ್ಟಿರಲ್ಲವೇ? ಎಂದು ಆರ್.ಅಶೋಕ್ ಅವರು ಕೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist