ಬೆಂಗಳೂರು, (www.thenewzmirror.com) ;
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿ ಆರು ತಿಂಗಳ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಆಗುತ್ತಿದ್ದಂತೆ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಮತ್ತೆ ಜನಾಶೀರ್ವಾದ ಸಿಗುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ ಅಂತ ಶಪಥ ಮಾಡಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಅರವಿಂದ್ ಕೇಜ್ರಿವಾಲ್ 6 ತಿಂಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಘೋಷಣೆ ಮಾಡಿದ್ದಾರೆ.
ಇದೀಗ ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ. ಆದರೆ ಜನತಾ ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ ಎಂದು ನಂಬಿದ್ದು, ಕೇಜ್ರೀವಾಲ್ ಪ್ರಾಮಾಣಿಕವಾಗಿದ್ದರೆ ಜನರು ಮತ್ತೆ ನಡೆಯಲಿರುವ ಚುನಾವಣೆಯಲ್ಲಿ ಆಪ್ ಗೆ ಮತಹಾಕಿ ಗೆಲ್ಲಿಸಲಿ. ಅಲ್ಲೀವರೆಗೂ ಮಾನು ಸಿಎಂ ಕುರ್ಚಿಯಲ್ಲಿ ಕೂರೋದಿಲ್ಲ ಅಂತ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡರ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಅರವಿಂದ್ ಕೇಜ್ರಿವಾಲ್ ಈ ವಿಚಾರ ಹೇಳಿದ್ದು ಹಲವು ರಾಜಕೀಯ ಲೆಕ್ಕಾಚಾರವನ್ನ ಹುಟ್ಟುಹಾಕುತ್ತಿದೆ.
ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿಯೇ ದೆಹಲಿ ಚುನಾವಣೆಯೂ ನಡೆಯಲಿ ಎಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ.