ಬೆಂಗಳೂರು(www.thenewzmirror.com):ರಾಜ್ಯಾದ್ಯಂತ ಅಪಾರ ಪ್ರಮಾಣದ ಮಳೆಯಾಗುತ್ತಿದ್ದು ಬೆಂಗಳೂರಿನಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಪೂರ್ವಭಾವಿ ಕೆಲಸ ಮಾಡಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಹೊಸಪೇಟೆಯಲ್ಲಿ ಮೋಜು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.
ಬಿಜೆಪಿ ನಿಯೋಗವು ಇಂದು ಸಿಲ್ಕ್ ಬೋರ್ಡಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿತ್ತು. ಮಳೆ ಹಾನಿಗೆ ಕಾರಣಗಳು, ಆಗಿರುವ ಹಾನಿ ಕುರಿತು ನಿಯೋಗವು ಪರಿಶೀಲಿಸಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ,ಬೆಂಗಳೂರಿನಲ್ಲಿ ಮಳೆಹಾನಿಯಾಗಿರುವಾಗ ಹೊಸಪಢಟೆಯಲ್ಲಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ್ದನ್ನು ತಿಳಿಸಿ ಮೋಜು ಮಾಡುತ್ತಿರುವುದು ಅಕ್ಷಮ್ಯ ಅಪರಾಧ,ರಾಜ್ಯ ಸರಕಾರವು ಒಂದು ಅಯೋಗ್ಯ ಸರಕಾರ, ಈ ಸರಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಟೀಕಿಸಿದರು.
ಕೆಲವೇ ಕೆಲವು ಗಂಟೆ ಮಳೆ ಬಂದ ಸಂದರ್ಭದಲ್ಲಿ ಇಡೀ ಬೆಂಗಳೂರು ಮಹಾನಗರವು ಜಲಾವೃತವಾಗಿದೆ. ನಾಲ್ಕು ಜನರು ಪ್ರಾಣ ಕಳಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನವರು ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿಗೆ ಕೇವಲ ಗ್ರೇಟರ್ ಹೆಸರು ಸೇರಿಸಿದರೆ ಸಾಕಾಗುವುದಿಲ್ಲ ಸ್ವಾಮೀ.. ಎಂದರಲ್ಲದೆ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಸಾವಿರಾರು ಕೋಟಿ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿತ್ತು. ಆ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಇವತ್ತು ಕೆಲಸ ಕಾರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೇ ನಿಂತಿವೆ ಎಂದು ಗಮನ ಸೆಳೆದರು.
ಡಿ.ಕೆ.ಶಿವಕುಮಾರ್ ಅವರು ಟಾಲೆಸ್ಟ್ ಟವರ್, ಸುರಂಗ ರಸ್ತೆ ಕುರಿತು ಮಾತನಾಡುತ್ತಾರೆ. ಬೆಂಗಳೂರಿನ ಮಹಾಜನತೆ, ಜನಸಾಮಾನ್ಯರು ಇವುಗಳನ್ನು ಕೇಳುತ್ತಿಲ್ಲ. ಬಂದ ಮಳೆಯ ನೀರು ಸರಿಯಾಗಿ ಹೋಗುವ ವ್ಯವಸ್ಥೆ ಆಗಬೇಕು. ರಾಜಕಾಲುವೆಯನ್ನು ಸರಿಪಡಿಸಬೇಕು. ಕೆರೆಗಳ ಒತ್ತುವರಿ ಸರಿಪಡಿಸಲು ಬಯಸುತ್ತಾರೆ ಎಂದು ತಿಳಿಸಿದರು.
ಹೂಳು ತೆಗೆಯುವಂತೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ನಿನ್ನೆ ಅಧಿಕಾರಿಗಳಿಗೆ ಹೇಳುತ್ತಿದ್ದರು. ಯಾಕೆ ಮಳೆ ಬರುವುದು ಗೊತ್ತಿಲ್ಲವೇ? ಮಳೆ ಯಾವ ತಿಂಗಳಲ್ಲಿ ಬರುತ್ತದೆಂದು ಇವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಅಧಿಕಾರಿಗಳಿಗೆ ಸರಿಯಾಗಿ ತಿಳಿಸಿ ಮುಂಗಾರು ಮಳೆಗೆ ಮೊದಲು ಕೆಲಸ ಯಾಕೆ ಮಾಡಿಸಿಲ್ಲ ಎಂದು ಕೇಳಿದರು.