ಬೆಂಗಳೂರು(thenewzmirror.com): ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆಯುತ್ತಿದ್ದು, ದಿನೇದಿನೇ ಅದು ದೊಡ್ಡದಾಗುತ್ತಿದೆ. ಸಿದ್ದರಾಮಯ್ಯರ ಪರ, ಡಿಕೆ ಶಿವಕುಮಾರ್ ಪರ- ವಿರುದ್ಧ ಶಾಸಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿಶ್ಚಿತವಾಗಿ ಬರುವ ದಿನಗಳಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಕಾಂಗ್ರೆಸ್ ಶಾಸಕರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಕುರಿತ ಹೇಳಿಕೆ ನೀಡಿದ್ದಾರೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಗುರುಗಳು ಹೇಳಿದ್ದನ್ನು ನೆನಪು ಮಾಡಿಕೊಂಡಿದ್ದರು. ಅಧಿಕಾರ ಸಿಗದೆ ಇದ್ದಲ್ಲಿ ಅದನ್ನು ಒದ್ದು ಕಿತ್ತುಕೊಳ್ಳಬೇಕೆಂದು ಡಿ.ಕೆ.ಶಿವಕುಮಾರ್ ಅವರಿಗೆ ಅವರ ಗುರುಗಳು ಹೇಳಿದ್ದರಂತೆ ಎಂದು ಗಮನ ಸೆಳೆದರು.
ಮತ್ತೊಂದೆಡೆ ಮೊನ್ನೆ ಡಿ.ಕೆ.ಶಿವಕುಮಾರ್ ಅವರು ನಟ್ ಮತ್ತು ಬೋಲ್ಟ್ ಟೈಟ್ ಮಾಡುವ ಅಹಂನಿಂದ ಕೂಡಿದ ಹೇಳಿಕೆ ಕೊಟ್ಟಿದ್ದಾರೆ. ಶಿವಕುಮಾರ್ ಅವರ ಈ ಹೇಳಿಕೆ ಚಿತ್ರರಂಗದ ಬಗ್ಗೆ ಹೇಳಿದ್ದಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಥವಾ ಸರಕಾರದಲ್ಲಿ ಯಾರು ಶಿವಕುಮಾರರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡುತ್ತಿಲ್ಲವೋ ಅವರಿಗೆ ಒಂದು ರೀತಿಯ ಎಚ್ಚರಿಕೆಯ ಮಾತನ್ನು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂಬುದು ಚರ್ಚೆಯಲ್ಲಿದೆ ಎಂದು ವಿವರಿಸಿದರು.
ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ ಸರಕಾರ:
ಈ ಸರಕಾರದ ನಟ್ ಮತ್ತು ಬೋಲ್ಟ್ ಎರಡೂ ಸಡಿಲ ಆಗಿದೆ ಎಂಬುದು ಸ್ಪಷ್ಟ ಅಭಿವೃದ್ಧಿ ವಿಷಯದಲ್ಲಿ ಈ ಸರಕಾರದ ನಟ್ ಮತ್ತು ಬೋಲ್ಟ್ ಲೂಸ್ ಆಗಿದೆ. ಇದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜಯೇಂದ್ರ ನುಡಿದರು.
ಒಂದು ಕಡೆ ಹೈನುಗಾರಿಕೆಗೆ ಪ್ರೋತ್ಸಾಹಧನದ ಪ್ರಸ್ತಾಪ ಮಾಡಿದ್ದಾರೆ. ಸಾವಿರಾರು ಕೋಟಿ ಹಳೆಯ ಪ್ರೋತ್ಸಾಹಧನ ಹಾಗೇ ಬಾಕಿ ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು 90 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಎಷ್ಟು ಮೀಸಲಿಟ್ಟಿದ್ದಾರೆ? ಎಷ್ಟು ಖರ್ಚಾಗಿದೆ ಎಂದು ಪ್ರಶ್ನಿಸಿದರು. ರಾಜ್ಯಪಾಲರ ಭಾಷಣ ಕೇಳಿಸಿಕೊಂಡರೆ ರಾಜ್ಯಪಾಲರ ಸಮಯವನ್ನು ಕೂಡ ಈ ಸರಕಾರ ವ್ಯರ್ಥ ಮಾಡಿದೆ. ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಸರಕಾರದ ಹಣಕಾಸಿನ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂಬ ಹಸಿಸುಳ್ಳನ್ನು ಈ ಕಾಂಗ್ರೆಸ್ ಸರಕಾರವು ಗೌರವಾನ್ವಿತ ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ ಎಂದು ಟೀಕಿಸಿದರು.
ಅತ್ಯಂತ ಕಳಪೆ ಸಾಧನೆ ಮಾಡಿದ ಸರಕಾರ- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ ಸರಕಾರ ಇದೆಂದು ದೂರಿದರು. ಆದರೆ, ಗವರ್ನರ್ ಕೈಯಲ್ಲಿ ತಾವೇನೋ ಚಾಂಪಿಯನ್ ಎಂಬಂತೆ ಹೇಳಿಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ನುಡಿದರು.
ಸುಳ್ಳುಗಳ ಪಟ್ಟಿ ಮಾಡಿ ಹೇಳಿಸಿದ ಸರಕಾರ- ಛಲವಾದಿ ನಾರಾಯಣಸ್ವಾಮಿ
ಒಂದು ರೀತಿಯ ಪಾಪರ್ ಚೀಟಿ ಎತ್ತಿಕೊಂಡ ಈ ಸರಕಾರವು ಕೇವಲ ಸುಳ್ಳುಗಳನ್ನು ಪಟ್ಟಿ ಮಾಡಿ ಗೌರವಾನ್ವಿತ ರಾಜ್ಯಪಾಲರ ಕಡೆಯಿಂದ ಹೇಳಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.