ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಸಿದ್ಧ:ಚೆಲುವರಾಯ ಸ್ವಾಮಿ ಸವಾಲಿಗೆ ಸೈ ಎಂದ ಹೆಚ್.ಡಿ.ಕುಮಾರಸ್ವಾಮಿ

RELATED POSTS

ಮಂಡ್ಯ(www.thenewzmirror.com): ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಆತ ನನ್ನನ್ನು ಸಿಎಂ ಮಾಡಿದ ಎನ್ನುವುದು ಬಹುದೊಡ್ಡ ಜೋಕ್. ಶಾಸಕರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಎಂಬುದನ್ನು ಆ ವ್ಯಕ್ತಿ ಮರೆಯಬಾರದು ಎಂದು ಕುಟುಕಿದರು.

ಚೆಲುವರಾಯಸ್ವಾಮಿ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರತಿಕ್ರಿಯೆಗೆ ಖಡಕ್ ಉತ್ತರ ಕೊಟ್ಟ ಕೇಂದ್ರ ಸಚಿವರು; ನನ್ನ ಜತೆ ಶಾಸಕರು ಇದ್ದರು ಎಂಬುದು ಆಗ ನನ್ನ ಜತೆಯಲ್ಲಿಯೇ ಇದ್ದ ಆ ವ್ಯಕ್ತಿಗೂ ಗೊತ್ತು. ಈತನ ಮುಖ ನೋಡಿಕೊಂಡು ಶಾಸಕರು ಬಂದರಾ? ನನ್ನ ನಂಬಿಕೆ, ವಿಶ್ವಾಸದಿಂದ ಬಂದರು. ಎಲ್ಲವೂ ಈತನಿಗೆ ಗೊತ್ತಿಲ್ಲವೇ? ಎಂದು ತಿರುಗೇಟು ಕೊಟ್ಟರು.

ಆ ವ್ಯಕ್ತಿ ನೂರಕ್ಕೆ ನೂರರಷ್ಟು ಜೋಕರ್. ಜೋಕರ್ ಸಂಸ್ಕೃತಿ ಶುರುವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಎನ್ನುವುದನ್ನು ಆ ವ್ಯಕ್ತಿ ಮರೆಯಬಾರದು. ಅವರು ಎಲ್ಲಿದ್ದರು? ಆಮೇಲೆ ಎಲ್ಲೆಲ್ಲಿ ಹೋದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿ ಆ ವ್ಯಕ್ತಿಗೆ ಉತ್ತರ ಕೊಡಬೇಕಿಲ್ಲ ಎಂದು ಸಚಿವರು ಹೆಸರು ಹೇಳದೆಯೇ ಟಾಂಗ್ ಕೊಟ್ಟರು.

ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿರುವ ಕೃಷಿ ಸಚಿವರ ಸವಾಲಿಗೆ ಉತ್ತರ ಕೊಟ್ಟ ಕೇಂದ್ರ ಸಚಿವರು; ನಾನು ಆಣೆ ಮಾಡಲು ತಯಾರಿದ್ದೇನೆ. ನಾನು ಸಿಎಂ ಆಗುವಾಗ ಎಂಎಲ್‌ಎಗಳು ಆ ವ್ಯಕ್ತಿಯನ್ನು ನೋಡಿ ಬಂದ್ರಾ? ಆ ವ್ಯಕ್ತಿಯನ್ನು ಮಂತ್ರಿ ಮಾಡಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳಗಿನ ಜಾವ ಮೂರು ಗಂಟೆವರೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಆ ಆಸಾಮಿ. ಈ ವ್ಯಕ್ತಿಯ ಮುಖ ನೋಡಿ 50 ಜನ ಶಾಸಕರು ಬಂದ್ರಾ? ಅವರಿಗಾಗಿ ನಾನು ಪಟ್ಟಿರುವ ಶ್ರಮವನ್ನು ಅವರು ಮರೆಯೋದು ಬೇಡ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಆ ವ್ಯಕ್ತಿಗೆ ಇರುವ ಚಟ ನನಗೆ ಇಲ್ಲ. ಮಂಡ್ಯದಲ್ಲಿ ಆತನ ಚಟಗಳ ಬಗ್ಗೆ ಕೇಳಿದರೆ ಜನ ಹಾದಿ ಬೀದಿಯಲ್ಲಿ ಹೇಳುತ್ತಾರೆ. ಚಟಗಳ ಬಗ್ಗೆ ಚರ್ಚೆ ಮಾಡೋದು ಬೇಡ. ಅದು ಕೀಳುಮಟ್ಟದ ಅಭಿರುಚಿ. ಆತನ ಅಭಿರುಚಿ ಯಾವ ರೀತಿಯದ್ದು ಎಂದು ಮಂಡ್ಯ ಜನರಿಗೆ ಗೊತ್ತಿದೆ. ಈ ಮನುಷ್ಯ ಎಷ್ಟು ಮನೆ ಹಾಳು ಮಾಡಿದ್ದಾರೆ ಎಂಬುದು ನನಗೆ ಗೊತ್ತು. ನಾನು ದುಡ್ಡು ಮಾಡಬೇಕೆಂದು ಆಸೆಪಟ್ಟಿಲ್ಲ. ನಾನು ಜನರ ಮಧ್ಯ 24 ಗಂಟೆ ಕೆಲಸ ಮಾಡಿದ್ದೇನೆ. ಜನತಾ ದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗ್ಗಿನ ಜಾವದವರೆಗೆ ಕೆಲಸ ಮಾಡಿದ್ದೇನೆ. ಜನರ ಕೆಲಸ ಮಾಡುವುದೇ ನನ್ನ ವೈಯಕ್ತಿಕ ಸಮಸ್ಯೆ. ನನಗೆ ಆತನಂತೆ ಯಾವುದೇ ಚಟ ಇಲ್ಲ. ಎಲ್ಲವನ್ನೂ ದೇವರು ನೋಡುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದರು ಕುಮಾರಸ್ವಾಮಿ ಅವರು.

ಬಹಿರಂಗ ಚರ್ಚೆಗೆ ಸವಾಲು ಕೃಷಿ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಚಿವರು; ಸ್ವ ಚರಿತ್ರೆ ಬಗ್ಗೆ ಚರ್ಚೆ ಮಾಡೊದು ಪ್ರಮುಖನಾ? ಪ್ರತಿಯೊಬ್ಬ ಮನುಷ್ಯ ಇಂತಹ ಘಾತುಕ ವ್ಯಕ್ತಿಗಳ ಜತೆ ಇದ್ದಾಗ ಹಲವಾರು ಸಮಸ್ಯೆಗಳನ್ನು ಮಾಡಿಕೊಳ್ಳುತ್ತೇವೆ. ಯಾವ ಮನುಷ್ಯನೂ ಪರಿಶುದ್ಧನಲ್ಲ. ತಪ್ಪನ್ನು ಸರಿಪಡಿಸಿಕೊಳ್ಳಲು ಭಗವಂತ ಅವಕಾಶ ಕೊಡುತ್ತಾನೆ. ನಾನು ವಿಧಾನಸಭೆಯ ಕಲಾಪದಲ್ಲಿಯೇ ಹೇಳಿದ್ದೇನೆ. ನಾನು ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದೇನೆ ಎಂದು. ನಾನೆಂದೂ ಇಲ್ಲ ಎಂದು ಹೇಳಿಲ್ಲ. ಆ ವ್ಯಕ್ತಿ ಏನೇನು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಇಂತಹ ವಿಚಾರಗಳನ್ನು ಬಿಟ್ಟು ಜನರ ಬದುಕಿನ ಬಗ್ಗೆ ಚರ್ಚೆ ಮಾಡಿ ಎಂದು ಕೇಂದ್ರ ಸಚಿವರು ಕಿವಿಮಾತು ಹೇಳಿದರು.

ಮೈತ್ರಿ ಭದ್ರವಾಗಿದೆ, ಸಮಸ್ಯೆ ಇಲ್ಲ:

ಜೆಡಿಎಸ್‌ – ಬಿಜೆಪಿ ಮೈತ್ರಿ ಭದ್ರವಾಗಿದೆ. ಯಾರಿಗೂ ಸಂಶಯ ಬೇಡ. ಜೆಡಿಎಸ್‌ – ಬಿಜೆಪಿ‌ ಮೈತ್ರಿ ಸಮನ್ವಯ ಸಮಿತಿ ರಚನೆ ಆಗಬೇಕೆಂದು ಡಿ.ವಿ.ಸದಾನಂದಗೌಡರೇ ಹೇಳಿದ್ದಾರೆ. ಹಲವಾರು ಹಿರಿಯ ನಾಯಕರೂ ಸಮನ್ವಯ ಸಮಿತಿ ಆಗಬೇಕು ಎಂದು ಸಲಹೆ ಮಾಡಿದ್ದಾರೆ. ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬಿಜೆಪಿ ಜನಾಕ್ರೋಶ ಆಂದೋಲನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಸಚಿವರು;  ಅವರ ಪಕ್ಷ ಗಟ್ಟಿಗೊಳಿಸಲು ಹೋರಾಟ ಮಾಡುತ್ತಿದ್ದಾರೆ. ನಮ್ಮನ್ನು ಅವರು ಕರೆದಿಲ್ಲ. ಇದು ನಮ್ಮ ಪಕ್ಷದ ಕಾರ್ಯಕ್ರಮ ಎಂದು ಅವರೇ ಹೇಳಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಮೈತ್ರಿಯಲ್ಲಿ ಯಾವ ಬಿರುಕು‌ ಇಲ್ಲ, ಎಲ್ಲರೂ ಭದ್ರವಾಗಿ ಇದ್ದೇವೆ. ಸಂಘಟನೆ ವಿಚಾರದಲ್ಲಿ ಆಯಾ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist