ಮಂಡ್ಯ(www.thenewzmirror.com): ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ 60-70 ಸಾವಿರ ಕೋಟಿ ರೂ. ತೆರಿಗೆ ವಿಧಿಸಿದೆ. ಅಂದಮೇಲೆ ಜನರಿಗೆ ಇವರು ಕೊಟ್ಟಿದ್ದೇನು? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ಗ್ಯಾರಂಟಿಗಳ ಹಣ ಬಿಡುಗಡೆ ಮಾಡಿ ಜನರಿಗೆ ಆಮಿಷ ಒಡ್ಡುತ್ತಿದೆ. ಹಾಲು, ಮದ್ಯ, ಆಸ್ಪತ್ರೆ ಶುಲ್ಕ, ಬಸ್ ಟಿಕೆಟ್ ದರ, ಮಾರ್ಗಸೂಚಿ ದರ ಎಲ್ಲ ಸೇರಿದರೆ ಜನರ ಮೇಲೆ 60-70 ಸಾವಿರ ಕೋಟಿ ರೂ. ತೆರಿಗೆಯನ್ನು ಹಾಕಲಾಗಿದೆ. ಗ್ಯಾರಂಟಿಗಳ 65 ಸಾವಿರ ಕೋಟಿ ರೂ. ಹೊಂದಿಸಲು ಹೀಗೆ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ಇವರು ಜನರಿಗೆ ಏನು ಕೊಟ್ಟಿದ್ದಾರೆ? ಎಂದು ಪ್ರಶ್ನೆ ಮಾಡಿದರು.
ಅಡುಗೆ ಅನಿಲಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿ ಹೆಚ್ಚು ಸಹಾಯಧನ ನೀಡುತ್ತಿದೆ. ಅತಿ ಕನಿಷ್ಠ ಮಟ್ಟದಲ್ಲಿ ಕೇಂದ್ರ ಸರ್ಕಾರ ದರ ಏರಿಕೆ ಮಾಡಿದೆ. ಕಾಂಗ್ರೆಸ್ನವರು ಬೇಕಿದ್ದರೆ ದೆಹಲಿಯಲ್ಲಿ ಪ್ರತಿಭಟನೆ ಮಾಡಲಿ. ಇಡೀ ದೇಶದಲ್ಲಿ ಅಡುಗೆ ಅನಿಲ ಏರಿಕೆಯಾಗಿದೆಯೇ ಹೊರತು ಕರ್ನಾಟಕಕ್ಕೆ ಮಾತ್ರ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ರಾಜ್ಯ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೂ ವೇತನ ಕೊಡಲು ಹಣವಿಲ್ಲ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಂಬಳ ಕೊಡಲು ಹಣವಿಲ್ಲ ಎಂದಮೇಲೆ ಈ ಸರ್ಕಾರ ದಿವಾಳಿಯಾಗಿದೆ ಎಂದೇ ಹೇಳಬೇಕು. ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಪಾಪರ್ ಆಗಿಲ್ಲವಾದರೆ ಸಾಲ ಏಕೆ ಮಾಡಬೇಕು? ಕೇಜ್ರಿವಾಲ್ ಅವರನ್ನು ಮೀರಿಸುವಂತೆ ಅಬಕಾರಿ ಹಗರಣ ರಾಜ್ಯದಲ್ಲಿ ನಡೆಯುತ್ತಿದೆ ಎಂದು ದೂರಿದರು.
ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಭೂ ಹಗರಣವನ್ನು ಪೊಲೀಸರು ತನಿಖೆ ಮಾಡುವುದನ್ನು ನೋಡಿದರೆ ಕಾಂಗ್ರೆಸ್ ದ್ವೇಷ ಸಾಧಿಸುತ್ತಿದೆ ಎಂದು ಗೊತ್ತಾಗುತ್ತದೆ. ಕುಮಾರಸ್ವಾಮಿ ಅವರ ಕಾನೂನು ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡುತ್ತೇವೆ ಎಂದರು.
ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ಮಾಡುವುದರ ಬಗ್ಗೆ ಚರ್ಚೆಯಾಗಬೇಕಿದೆ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಹಾಗೂ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.
ಮಂಡ್ಯದ ಜನರು ಚಕ್ರವರ್ತಿಗಳು, ಛತ್ರಿಗಳಲ್ಲ:
ಬಿಜೆಪಿ ಜನಾಕ್ರೋಶ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 14 ಸೈಟು ಲೂಟಿ ಮಾಡಿ, ಬಿಜೆಪಿ ಹೋರಾಟ ಮಾಡುತ್ತಿದ್ದಂತೆ ವಾಪಾಸು ಮಾಡಿದರು. ವಾಲ್ಮೀಕಿ ನಿಗಮದ ಅಕ್ರಮದ ವಿರುದ್ಧದ ಹೋರಾಟದಿಂದ ಸಚಿವರು ರಾಜೀನಾಮೆ ನೀಡಿದರು. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮಂಡ್ಯದ ಜನರನ್ನು ಛತ್ರಿ ಎಂದು ಜರಿದಿದ್ದಾರೆ. ಅದೇ ಚುನಾವಣೆಯ ಸಮಯದಲ್ಲಿ ಮತಭಿಕ್ಷೆ ಬೇಡಿದ್ದರು. ಮಂಡ್ಯದ ಜನರು ಛತ್ರಿಗಳಲ್ಲ, ಚಕ್ರವರ್ತಿಗಳು. ಮುಂದಿನ ಚುನಾವಣೆಯಲ್ಲಿ ಮಂಡ್ಯದ ಜನರು ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕು ಎಂದರು.
ಮೇಕೆದಾಟು ಯೋಜನೆ ಜಾರಿ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಅಧಿಕಾರ ಸಿಕ್ಕರೂ ಇನ್ನೂ ದಾಟಿಲ್ಲ. ತಮಿಳುನಾಡಿನ ಸ್ಟಾಲಿನ್ ಬ್ರದರ್ ಎಂಬ ಕಾರಣಕ್ಕೆ ಇವರು ಸುಮ್ಮನಾಗಿದ್ದಾರೆ. ಮಂಡ್ಯದಲ್ಲಿ ವಿಶ್ವವಿದ್ಯಾಲಯ ನಿರ್ಮಿಸಲು ಮೋದಿ ಸರ್ಕಾರ ಅನುದಾನ ನೀಡಿದ್ದರೆ, ಆ ಹಣವನ್ನು ತಿಂದು ವಿವಿ ರದ್ದು ಮಾಡಿದ್ದಾರೆ. ಇಲ್ಲಿ ಹನುಮ ಧ್ವಜವನ್ನು ಹಾರಿಸಲು ಹೊರಟರೆ ಅದಕ್ಕೂ ಅವಕಾಶ ನೀಡಲಿಲ್ಲ. ಆದರೂ ಡಿ.ಕೆ.ಶಿವಕುಮಾರ್ ಹಿಂದೂ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಮಂಡ್ಯದ ಜನರಿಗೆ ಕಾಂಗ್ರೆಸ್ ದೊಡ್ಡ ಮೋಸ ಮಾಡಿದೆ. ಮುಸ್ಲಿಮರಿಗೆ ಮದುವೆಯಾಗಲು ಕೂಡ ಕೂಡಲೇ ಹಣ ನೀಡುತ್ತಾರೆ. ಸರ್ಕಾರಿ ಗುತ್ತಿಗೆಯಲ್ಲೂ ಮೀಸಲು ನೀಡಿದ್ದಾರೆ. ಹಿಂದೂಗಳಿಗೆ ಮಾತ್ರ ಚೊಂಬು ಕೊಟ್ಟಿದ್ದಾರೆ. ಸಮಬಾಳು, ಸಮಪಾಲು ಎಂದು ಬಿಜೆಪಿ ಹೇಳಿದರೆ, ಕಾಂಗ್ರೆಸ್ ಎಲ್ಲವನ್ನೂ ಮುಸ್ಲಿಮರಿಗೆ ಮಾತ್ರ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.