ಬೆಂಗಳೂರು,(www.thenewzmirror.com) ;
ನಿಯಮಗಳು ಇರೋದೇ ಬ್ರೇಕ್ ಮಾಡೋದಿಕ್ಕೆ ಅಂತ ನಮ್ ಜನ ಅಂದುಕೊಂಡು ಬಿಟ್ಟಿದ್ದಾರೆ. ಇನ್ಮುಂದೆ ಹೀಗೆ ನಿಯಮಗಳ ವಿಚಾರದಲ್ಲಿ ಉಡಾಫೆ ತೋರಿದ್ರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ.
ಹೌದು, ಇತ್ತೀಚಿನ ದಿನಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಗಳ ಮೇಲೆ ಮನಸ್ಸಿಗೆ ಬಂದಂತೆ ಸ್ಟಿಕ್ಕರ್ ಹಾಕಿಸೋದು, ಇಷ್ಟ ಬಂದ ರೀತಿ ನಂಬರ್ ಪ್ಲೇಟ್ ಡಿಸೈನ್ ಮಾಡಿಸೋದು ಮಾಮೂಲಿಯಾಗಿದೆ. ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕಾರು, ಬಸ್, ಆಟೋ, ಬೈಕ್ ಗಳ ನಂಬರ್ ಪ್ಲೇಟ್ ಗಳಲ್ಲಿ ನಿಯಮದ ಪ್ರಕಾರವೇ ನಂಬರ್ ಪ್ಲೇಟ್ ಇರಬೇಕು. ಒಂದು ವೇಳೆ ನಿಯಮದ ಪ್ರಕಾರ ನಂಬರ್ ಪ್ಲೇಟ್ ಇಲ್ಲಾಂದ್ರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್ ಎಚ್ಚರಿಕೆ ಕೊಟ್ಟಿದ್ದಾರೆ.
ಸಾರಿಗೆ ಇಲಾಖೆ ನಿಯಮದ ಪ್ರಕಾರ ನಂಬರ್ ಪ್ಲೇಟ್ ಗಳ ಮೇಲೆ ಸ್ಟಿಕ್ಕರ್ ಅಳವಡಿಕೆಗೆ ಮೊದಲಿನಿಂದಲೂ ನಿಷೇಧವಿದೆ. ಅದರಲ್ಲೂ ಕೊಲೆ ಕೇಸಲ್ಲಿ ಜೈಲಿನಲ್ಲಿರುವ ಆರೋಪಿ ದರ್ಶನ್ ಅಭಿಮಾನಿಗಳು, ಗಾಡಿಗಳ ಮೇಲೆ ಖೈದಿ ನಂಬರ್ 6106, 511 ಸ್ಟಿಕ್ಕರ್‌ಗಳನ್ನ ಹಾಕಿಸುವ ಮೂಲಕ ಹುಚ್ಚಾಟ ಮೆರೆದಿದ್ದರು. ಈ ಅಂಧಾಭಿಮಾನಿಗಳ ಕುಚೇಷ್ಟೆ ಮಿತಿ ಮೀರಿದ್ದು, ಇದಕ್ಕೆ ಬ್ರೇಕ್ ಹಾಕುವ ಸಲುವಾಗಿ ಈ ಹೊಸ ಸೂಚನೆಯನ್ನ ಹೊರಡಿಸಲಾಗಿದೆ. ಇದರ ಜತೆಗೆ ಗಾಡಿಗಳ ಮೇಲೆ, ಮನೆಯರ ಹೆಸರು, ದೇವರ ಹೆಸರು, ಸಿನಮಾ ನಟ ನಟಿಯರ ಹೆಸರು ಸ್ಟಿಕ್ಕರ್ ಮಾಡಿಸುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ ಇಂಥಾ ಹುಚ್ಚಾಟಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು RTO ಈಗ ಟಫ್ ರೂಲ್ಸ್ ಜಾರಿ ಮಾಡಲು ಮುಂದಾಗಿದೆ.
ಗಾಡಿಗಳ ಮೇಲೆ ಈ ರೀತಿಯ ಸ್ಟಿಕ್ಕರ್ ಕಂಡು ಬಂದ್ರೆ ಮೊದಲ ಬಾರಿಗೆ ಎಚ್ಚರಿಕೆ, ಆನಂತರವೂ ಸ್ಟಿಕ್ಕರ್ ತೆಗೆಯದಿದ್ದರೆ ದಂಡ ವಿಧಿಸೋಕೆ ಇಲಾಖೆ ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.