ಬೆಂಗಳೂರು, (www.thenewzmirror com) ;
ಐಟಿಸಿ, ಬಿಟಿ ಸಿಟಿ, ಸಿಲಿಕಾನ್ ವ್ಯಾಲಿ ಅಂತ ಕರೆಸಿಕೊಳ್ಳೋ ಬೆಂಗಳೂರಿಗೆ ಇದೀಗ ಮತ್ತೊಮ್ಮೆ ನಿರಾಸೆಯಾಗಿದೆ. ನೂರಾರು ಐಟಿ ಕಂಪನಿಗಳ ಕೇಂದ್ರ ಸ್ಥಾನ ಹಾಗೆನೇ ಒಂದುಕಾಲು ಕೋಟಿ ಜನಸಂಖ್ಯೆ ಇರುವ ಬೃಹತ್ ನಗರ ಮೆಟ್ರೋ ಸಿಟಿ ಅಲ್ವಂತೆ. ಹೀಗಾಗಿ ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಭಾರತದ ಅತಿದೊಡ್ಡ ನಗರಗಳಲ್ಲಿ ಒಂದಾದ, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮೆಟ್ರೋ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಂಸತ್ ನಲ್ಲಿ ಮಾಹಿತಿ ನೀಡಿದೆ.
ಮಳೆಗಾಲದ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಮೆಟ್ರೋ ಸಿಟಿ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪ ನಾವು ಹೊಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ನಿಯಮಗಳು, 1962ರ ನಿಯಮ 2 ಎ ಅಡಿಯಲ್ಲಿ ಮೆಟ್ರೋ ನಗರಗಳು ಮತ್ತು ಇತರ ನಗರಗಳ ನಡುವೆ ವ್ಯತ್ಯಾಸವಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ದೇಶದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈಯನ್ನು ಮೆಟ್ರೋ ಸಿಟಿ ಎಂದು ಗುರುತಿಸಲಾಗುತ್ತಿದೆ.
ಮೆಟ್ರೋ ಸ್ಥಾನಮಾನ ಪಡೆದಿರುವ ನಗರಗಳಿಗೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ತೆರಿಗೆವಿನಾಯತಿ ಸೇರಿ ಹಲವು ಅನುಕೂಲಗಳು ಲಭಿಸುತ್ತವೆ. ಆ ನಗರದ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ.50ರಷ್ಟನ್ನು ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯ್ತಿ ಎಂದು ಕ್ಲೇಮ್ ಮಾಡಬಹುದು. ಮೆಟ್ರೋ ಮಾನ್ಯತೆ ಇಲ್ಲದ ನಗರಗಳ ನಿವಾಸಿಗಳು ತಮ್ಮ ಮೂಲವೇತನದ ಶೇ.40ರಷ್ಟನ್ನು ಮಾತ್ರ ಎಚ್‌ಆರ್‌ಎ ತೆರಿಗೆ ವಿನಾಯ್ತಿ ಎಂದು ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ.
ಬೆಂಗಳೂರಲ್ಲಿ ಮನೆಗಳ ಬಾಡಿಗೆ ದರಗಳೂ ಹೆಚ್ಚಿರುವುದರಿಂದ ಎಚ್‌ಆರ್‌ಎ ವಿನಾಯ್ತಿ ಪಡೆದುಕೊಳ್ಳಲು ನಗರಿಗೆ ಮೆಟ್ರೋ ಸ್ಥಾನ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ, ಕೇಂದ್ರ ಇದನ್ನು ನಿರಾಕರಿಸಿದೆ.