ಗುರುರಾಯರು ತೋರಿದ ಸನ್ಮಾರ್ಗವೇ ಸಮಸ್ಯೆಗೆ ದಿವ್ಯಔಷಧ: ಎಚ್.ಡಿ ಕುಮಾರಸ್ವಾಮಿ 

RELATED POSTS

ಮಂತ್ರಾಲಯ(thenewzmirror.com): ಸಮಾಜದಲ್ಲಿ ಇವತ್ತು ಅಶಾಂತಿ ವಿಜೃಂಭಿಸುತ್ತಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು; ಎಲ್ಲರೂ ಗುರುರಾಯರ ಉಪದೇಶವನ್ನು ಆಲಿಸಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕರೆ ನೀಡಿದರು.

ಮಂತ್ರಾಲಯದಲ್ಲಿ ʼಶ್ರೀ ರಾಘವೇಂದ್ರ ವೈಭವೋತ್ಸವʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು; ಮಂತ್ರಾಲಯಕ್ಕೆ ಬರುವ ಯಾವುದೇ ಜಾತಿ, ಧರ್ಮದ ಭಕ್ತರು ಗುರು ರಾಘವೇಂದ್ರರ ಅನುಗ್ರಹದಿಂದ ಕಷ್ಟಗಳಿಂದ ಪಾರಾಗುವ ಅನೇಕ ಕಥೆಗಳನ್ನು, ಜೀವಂತ ಉದಾಹರಣೆಗಳನ್ನು ನಾನು ಕೇಳಿದ್ದೇನೆ. ಎಲ್ಲರನ್ನೂ ಸಮಾನವಾಗಿ ಕಾಣುವ ಗುರುರಾಯರ ಪರಂಪರೆ ಶ್ರೀಮಠದಲ್ಲಿ ಮುಂದುವರಿದುಕೊಂಡು ಬಂದಿದೆ. ಎಲ್ಲರನ್ನೂ ಗುರುರಾಯರು ಅನುಗ್ರಹಿಸುತ್ತಾ ಬಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಮ್ಮ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲು ಇಟ್ಟಿದೆ. ದೇಶದಲ್ಲಿ ಹಣಕಾಸು ಸಮಸ್ಯೆ ಇಲ್ಲ. ಆದರೆ, ನಮ್ಮ ಪಾರಂಪರಿಕ ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರಗಳಿಂದ ದೂರವಾಗಿರುವ ಕಾರಣಕ್ಕೆ ಸಮಸ್ಯೆಗಳು ಜಟಿಲವಾಗುತ್ತಿವೆ.  ಇದಕ್ಕೆ ಗುರುರಾಯರ ಉಪದೇಶ ಹಾಗೂ ಅವರು ತೋರಿದ ಸನ್ಮಾರ್ಗವೇ ದಿವ್ಯಔಷಧವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದರು.

ಶ್ರೀಮಠವನ್ನು ಗುರುರಾಯರ ಆಶಯದಂತೆ ಮುನ್ನಡೆಸುತ್ತಿರುವ ಪರಮಪೂಜ್ಯ ಶ್ರೀ ಸುಬುಧೇಂದ್ರ ಶ್ರೀಪಾದಂಗಳವರನ್ನು ನಾನು ಚೆನ್ನಾಗಿ ಬಲ್ಲೆ. ಅವರದ್ದು ಮಗುವಿನಂಥ ಮನಸ್ಸು. ದಯೆ, ಕರುಣೆಯಿಂದ ಅವರು ಸಮಾಜವನ್ನು ಸನ್ಮಾರ್ಗದತ್ತ ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದಿಂದ ನಾವೆಲ್ಲರೂ ಜನಸೇವೆ ಮಾಡುತ್ತಿವೆ ಎಂದು ಸಚಿವರು ನುಡಿದರು.

ಶ್ರೀಮಠವು ಸಮಾಜಮುಖಿ ಕಾರ್ಯಗಳಿಂದ ಜಾಗತಿಕವಾಗಿ ಭಕ್ತರನ್ನು ಸೆಳೆಯುತ್ತಿದೆ. ಪರಮಪೂಜ್ಯರ ನೇತೃತ್ವದಲ್ಲಿ ಮಠವು ವಿಶ್ವವ್ಯಾಪಿಯಾಗಿ ಬೆಳೆಯಲಿ ಎಂದು ಆಶಿಸಿದ ಸಚಿವರು, ಈ ಕಾರ್ಯದಲ್ಲಿ ನಾವೆಲ್ಲರೂ ಗುರರಾಯರ ಸೇವೆಯಲ್ಲಿ ಸದಾ ಇರುತ್ತೇವೆ ಎಂದರು.

ರಾಯಚೂರಿನಲ್ಲಿ ಏಮ್ಸ್‌, ಶ್ರೀಗಳ ಆಶಯಕ್ಕೆ ಸಚಿವರ ಸ್ಪಂದನೆ:

ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆ, ಸಾಕಷ್ಟು ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)‌ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ತಾವು ಸಕಾರಾತ್ಮಕವಾಗಿ ಪ್ರಯತ್ನ ಮಾಡಬೇಕು ಎಂದು ಶ್ರೀ ಸುಬುಧೇಂದ್ರ ಶ್ರೀಗಳವರು ಸಚಿವರಿಗೆ ತಿಳಿಸಿದರು.

ಅಗತ್ಯಬಿದ್ದರೆ ಈ ಭಾಗದ ವತಿಯಿಂದ ಪ್ರಧಾನಿಗಳ ಬಳಿಗೆ ಪಕ್ಷಾತೀತವಾಗಿ ನಿಯೋಗ ಬರುವುದಾಗಿ ಶ್ರೀಗಳು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು; ಈ ಬಗ್ಗೆ ನಾನು ಕಾರ್ಯ ಪ್ರವೃತ್ತನಾಗುತ್ತೇನೆ ಎಂದು ಶ್ರೀಗಳಿಗೆ ತಿಳಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಸುಬುಧೇಂದ್ರ ಶ್ರೀಪಾದಂಗಳವರು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಆಶೀರ್ವದಿಸಿದರು.

ತಮಿಳುನಾಡು ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಆರ್.‌ ಸುಬ್ರಮಣಿಯಂ, ರಾಜ್ಯದ ಸಣ್ಣ ನೀರಾವರಿ ಸಚಿವರಾದ ಎನ್.‌ಎಸ್.‌ ಬೋಸರಾಜು ಅವರು ಉಪಸ್ಥಿತರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist