ಬೆಂಗಳೂರು(thenewzmirror.com): ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಐಫಾ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್
“ಐಫಾ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ನಿನ್ನೆ ಒಂದು ತಂಡವೇ ಇಲ್ಲಿಗೆ ಆಗಮಿಸಿ ಸಭೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸಭೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಕನ್ನಡ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಹೀಗಾಗಿ ನಿಮಗೆ ಅಭಿನಂದನೆ ಸಲ್ಲಿಸಬೇಕು. ನಿಮ್ಮ ಪರಿಶ್ರಮದಿಂದ ಎಲ್ಲಾ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ”ಎಂದು ಹೇಳಿದರು.
“ಸಿನಿಮಾ, ನಿಮ್ಮ ಕಲೆ ಮೂಲಕ ಸರ್ಕಾರದ ಆಚಾರ ವಿಚಾರ ಪ್ರಚಾರ ಮಾಡುವುದು ನಿಮ್ಮ ಧರ್ಮ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಮ್ಮ ಮನೆಗಾಗಿ, ನಮ್ಮ ಪಕ್ಷದವರಿಗಾಗಿ ಮಾತ್ರ ಜಾರಿ ಮಾಡಿದ್ದೇವೆಯೇ? ಇದಕ್ಕಾಗಿ 56 ಸಾವಿರ ಕೋಟಿ ಹಣ ಪ್ರತಿ ವರ್ಷ ವಿನಿಯೋಗಿಸುತ್ತಿದ್ದೇವೆ. ಬಡ ಕುಟುಂಬಗಳಿಗೆ ಆರ್ಥಿಕ ಶಕ್ತಿ ಸಿಗಲಿ ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.
“ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಬೇಕು ಎಂಬುದು ಸಿಎಂ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಸಲ್ಲಿಕೆಯಾಗಿದ್ದ ಯೋಜನೆ ತಿರಸ್ಕಾರಗೊಂಡಿದ್ದು, ಬಜೆಟ್ ನಂತರ ಕೂತು ಚರ್ಚೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಫಿಲ್ಮ್ ಸಿಟಿ ಮಾಡಲಾಗುವುದು. ಕಲೆ ಯಾರಪ್ಪನ ಮನೆ ಆಸ್ತಿಯಲ್ಲ. ಯಾರು ಬೇಕಾದರೂ ಎಂತಹುದೇ ಎತ್ತರಕ್ಕೆ ಬೆಳೆಯಲು ಅವಕಾಶ ಇದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಯಾಗಿ ಸಾಗಲಿ. ಸಮಯ ಸಿಕ್ಕರೆ ನಾನು ಸಿನಿಮಾ ವೀಕ್ಷಣೆ ಮಾಡುತ್ತೇನೆ” ಎಂದು ತಿಳಿಸಿದರು.