ಮೀಸಲಾತಿ ಸೌಲಭ್ಯ ಕೊಟ್ಟಿದ್ದು ನಾವು, ಅದರ ಪ್ರತಿಫಲ ಸಿಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ: ಹೆಚ್.ಡಿ. ದೇವೇಗೌಡರ ಬೇಸರ

RELATED POSTS

ಬೆಂಗಳೂರು(thenewzmirror.com): ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ದುರ್ಬಲರಿಗೆ ಮೀಸಲಾತಿ ಸೌಲಭ್ಯ ತಂದಿದ್ದೇ ನಾವು. ಆದರೆ ಇವತ್ತು ಅದರ ಪ್ರತಿಫಲವನ್ನು ಕಾಂಗ್ರೆಸ್‌ ಅನುಭವಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ ಪಕ್ಷದ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ‌ ಗೌಡರು, ಇವರು ಬಜೆಟ್‌ ಮಂಡಿಸಿದ್ದಾರೆ. ಅದರ ಬಗ್ಗೆ ನಾನು ಒಂದು ಶಬ್ದವನ್ನೂ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಆದರೆ ಸಾಮಾಜಿಕ ನ್ಯಾಯ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ದುರ್ಬಲ ಜನರಿಗೆ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು. ಆದರೆ, ಅದು ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲವಾಗಿದೆ ಎಂದರು.

ನಿಖಿಲ್‌ ಗೆ ಟಾಸ್ಕ್‌ ಕೊಟ್ಟ ಗೌಡರು:

ನಾರಿಯರಿಗೆ ಶಕ್ತಿ ತುಂಬಿದವರು ನರೇಂದ್ರ ಮೋದಿ ಯವರು. ನಾವು ಅವರ ಜೊತೆ ಇದ್ದೇವೆ, ಯಾವ ಭಯವೂ ಇಲ್ಲ. ಪಕ್ಷದಲ್ಲಿ ಮುಂದೆ ಕನಿಷ್ಠ ಐವತ್ತು ಮಹಿಳಾ ಸಮಾವೇಶಗಳು ನಡೆಯಬೇಕು. ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇನೆ. ಅದಕ್ಕೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಬರುತ್ತಾರೆ, ನಾನು ಬರುತ್ತೇನೆ. ನಿಖಿಲ್‌ ಅವರು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಕಟ್ಟಬೇಕು. ಸಮಾವೇಶಗಳನ್ನು ನಡೆಸಬೇಕು ಎಂದು ದೇವೇಗೌಡರು ಹೇಳಿದರು.

ನಾವು ಎಷ್ಟು ಕೆಲಸ ಮಾಡಿದ್ದೇವೆ, ಈ ನಾಡಿನ ಜನರಿಗೆ ಏನೆಲ್ಲಾ ಮಾಡಿದ್ದೇವೆ ಎನ್ನುವುದನ್ನು ಹೇಳಬೇಕು. ಏನೂ ಮಾಡದೆಯೇ ಅಧಿಕಾರ ಅನುಭವಿಸುತ್ತಿರುವವರ ಬಗ್ಗೆಯೂ ನಾವು ಜನರಿಗೆ ತಿಳಿ ಹೇಳಬೇಕಿದೆ ಎಂದು ಅವರು ಒತ್ತಿ ಹೇಳಿದರು.

ಮುಂದಿನ ವರ್ಷಗಳಲ್ಲಿ ಕನಿಷ್ಠ 80 ಮಹಿಳೆಯರು ನಮ್ಮ ಪಕ್ಷದಿಂದ ಅಸೆಂಬ್ಲಿಗೆ ನಿಲ್ಲಬೇಕು. ಅದನ್ನು ನಾನು ಕಣ್ಣಾರೆ ನೋಡಬೇಕು. ಮೋದಿಯವರು ಮಹಿಳಾ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಲೊಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿದೆ ಎಂದು ಮಾಜಿ ಪ್ರಧಾನಿಗಳು ಸಂತೋಷ ವ್ಯಕ್ತಪಡಿಸಿದರು.

ಪಕ್ಷ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಜಿಲ್ಲೆಗೂ ಭೇಟಿ ಕೊಡಬೇಕು. ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಅವರ ನೇತೃತ್ವದಲ್ಲಿಯೇ ಸಂಘಟನೆ ಕಟ್ಟಬೇಕು. ನಾನು ಕೂಡ ಎಲ್ಲಾ ಕಡೆ ಬರುತ್ತೇನೆ. ನಿಖಿಲ್‌ ನೇತೃತ್ವದಲ್ಲಿ ಯುವಕರು ಸಂಘಟನೆಯನ್ನು ಕಟ್ಟಬೇಕು ಎಂದು ಮಾಜಿ ಪ್ರಧಾನಿ ಕಾರ್ಯಕರ್ತೆಯರು, ನಾಯಕಿಯರಿಗೆ ಆತ್ಮವಿಸ್ವಾಸ ತುಂಬಿದರು.

ಹೃದಯದಲ್ಲಿ ಆಚರಿಸೋಣ ಎಂದ ನಿಖಿಲ್ ಕುಮಾರಸ್ವಾಮಿ:

ವರ್ಷಕ್ಕೊಮ್ಮೆ ಅಲ್ಲ, ಪ್ರತಿನಿತ್ಯವೂ ಮಹಿಳೆಯರ ದಿನಾಚರಣೆಯನ್ನು ಹೃದಯದಲ್ಲಿ ಆಚರಣೆ ಮಾಡೋಣ.ಇಂದು ಪಕ್ಷದ ಕಚೇರಿಯಲ್ಲಿ ದೇವೇಗೌಡರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಗಿದೆ. ಪಕ್ಷ ಸಂಘಟನೆಗೆ ಮಹಿಳೆಯರು ಎಷ್ಟು ತ್ಯಾಗ ಮಾಡಿದ್ದಾರೆ ಎನ್ನುವುದನ್ನು ನಾನು ಬಲ್ಲೆ. ನಮ್ಮ ಅಜ್ಜ ದೇವೇಗೌಡರು ಸಂಘಟನೆಗಾಗಿ ಇಡೀ ರಾಜ್ಯವನ್ನು ಸುತ್ತುತ್ತಿದ್ದರೆ, ನಮ್ಮ ಅಜ್ಜಿಯವರು ಎಷ್ಟು ತ್ಯಾಗ ಮಾಡಿರಬಹುದು ಎನ್ನುವುದು ನನಗೆ ಗೊತ್ತಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನಾನು ಚಿಕ್ಕ ವಯಸ್ಸಿನಲ್ಲಿ ಮೂರು ಚುನಾವಣೆಯಲ್ಲಿ ಎಡವಿದ್ದೇನೆ. ಚುನಾವಣೆಯಲ್ಲಿ ಏಳುಬೀಳು ಸಾಮಾನ್ಯ. ಒಳ್ಳೆಯ ಉದ್ದೇಶ ಇದ್ದರೆ ಗುರಿ ಮುಟ್ಟುತ್ತೇವೆ. ಆ ಭಗವಂತನ ಆಶೀರ್ವಾದ ಹಾಗೂ ದೇವೇಗೌಡರ ಆಶೀರ್ವಾದ ನನ್ನ ಮೇಲೆ ಇದೆ. ಮುಂದಿನ ದಿನಗಳಲ್ಲಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ನಿಖಿಲ್‌ ಅವರು ಹೇಳಿದರು.  

ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಅವತರಿಸುವ ದಿನಗಳು ದೂರವಿಲ್ಲ. ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತವನ್ನು ಎಲ್ಲರೂ ಮೆಚ್ಚಬೇಕು. ಇಂದು ಭಾರತಕ್ಕೆ ಜಾಗತಿಕವಾಗಿ ದೊಡ್ಡ ಗೌರವ ಸಿಕ್ಕಿದೆ ಅಂದರೆ ಅದಕ್ಕೆ ಮೋದಿ ಅವರೇ ಕಾರಣ ಎಂದು ನಿಖಿಲ್‌ ಅವರು ಹೇಳಿದರು.

ಅಜ್ಜಿಯ ತ್ಯಾಗ, ಭಾವುಕರಾದ ನಿಖಿಲ್:

ದೇವೇಗೌಡರು ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಒಳ್ಲೇಯ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕೆ ನಮ್ಮ ತಾತನ ಹಿಂದೆ ಇದ್ದ ಶಕ್ತಿ ನಮ್ಮ ಅಜ್ಜಿ ಚನ್ನಮ್ಮನವರು. ತಾತಾ ಅವರನ್ನು ಹಳ್ಳಿಗಳಿಂದ ಜನರು ಹುಡುಕಿಕೊಂಡು ಬರುತ್ತಿದ್ದರು. ಅವರಿಗೆಲ್ಲ ಮನೆಯಲ್ಲಿ ಅತ್ಯಂತ ವಾತ್ಸಲ್ಯದಿಂದ ಊಟ, ತಿಂಡಿ  ಬಡಿಸುತ್ತಿದ್ದರು ಅಜ್ಜಿ. ಚನ್ನಮ್ಮಜ್ಜಿ ಅವರ ತ್ಯಾಗ ಎಲ್ಲರಿಗೂ ಗೊತ್ತಿದೆ. ಅವರ ತ್ಯಾಗವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರ್ಶ ಜೀವನ ಮಾಡಿದ್ದಾರೆ. ಈಗಲೂ ಮನೆಗೆ ಹೋದರೆ ದೇವೆಗೌಡರ ಜೊತೆಗೆ ಕೂತು ಊಟ ಮಾಡುತ್ತಿರುತ್ತಾರೆ. ಇದೆಲ್ಲವನ್ನು ನೋಡುವ ಭಾಗ್ಯ ನನ್ನದಾಗಿದೆ ಎಂದು ನಿಖಿಲ್ ಅವರು ಭಾವುಕರಾದರು.

‌ನನ್ನ ತಾಯಿ ಅನಿತಾ ಕುಮಾರಸ್ವಾಮಿ ಅವರು ಎರಡು ಬಾರಿ ಶಾಸಕರಾಗಿದ್ದರು. ಅವರು ರಾಜಕೀಯಕ್ಕೆ ಬರಬೇಕು ಅಂತ ಇರಲಿಲ್ಲ. ಅತ್ಯಂತ ಪ್ರಭಾವಿ ನಾಯಕರನ್ನು  ಸೋಲಿಸಿ ರಾಜಕೀಯಕ್ಕೆ ಬಂದರು. ರಾಮನಗರದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಇಂದಿನ ದಿನಗಳಲ್ಲಿ  ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿಲ್ಲ. ಇವತ್ತು ಮಹಿಳೆಯರ ದಿನಾಚರಣೆ ಎಂದು ಬಂದಿದ್ದಾರೆ. ತೆರೆಮರೆಯಲ್ಲಿ ನಿಂತು ಪಕ್ಷಕ್ಕಾಗಿ ಅವರು ದುಡಿಮೆ ಮಾಡುತ್ತಿದ್ದಾರೆ ಎಂದು ತಮ್ಮ ತಾಯಿಯವರನ್ನುನಿಖಿಲ್ ಸ್ಮರಿಸಿದರು.

ಮಹಿಳಾ ಸಬಲೀಕರಣ ಎಂದರೆ ಇಷ್ಟ ಬಂದಾಗ ಎರಡು ಸಾವಿರ ರೂಪಾಯಿ ಬ್ಯಾಂಕ್‌ ಖಾತೆಗೆ ಹಾಕುವುದಲ್ಲ. ದೇವೇಗೌಡರು ಮಹಿಳೆಯರಿಗೆ 33% ಮೀಸಲಾತಿ‌ ನೀಡಲು ದಿಟ್ಟ ಕ್ರಮ ಕೈಗೊಂಡರು. ಆಗ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. ಆದರೆ, ಲೋಕಸಭೆಯಲ್ಲಿ ಅವರದ್ದೇ ಸರಕಾರದ ಭಾಗವಾಗಿದ್ದ ಆರ್‌ ಜೆಡಿ, ಸಮಾಜವಾದಿ ಪಕ್ಷಗಳು ಬೆಂಬಲ ನೀಡದ ಕಾರಣ ಬಿದ್ದು ಹೋಯಿತು. ಇಲ್ಲವಾಗಿದ್ದಿದ್ದರೆ ಅಂದೇ ಮಹಿಳೆಯರಿಗೆ ಮೀಸಲು ಸೌಲಭ್ಯ ಜಾರಿಗೆ ಬರುತ್ತಿತ್ತು. ಅದನ್ನು ಮೋದಿ ಅವರು ಸಾಧಿಸಿ ತೋರಿಸಿದರು. ಮಹಿಳಾ ಸಬಲೀಕರಣ ಎಂದರೆ ಇದು ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಟಾಂಗ್‌ ಕೊಟ್ಟರು.

ರತ್ನಮಾಲಾ ಸವಣೂರು ಸ್ಮರಿಸಿದ ನಿಖಿಲ್:

1996ರ ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಶ್ರೀಮತಿ ರತ್ನಮಾಲಾ ಸವಣೂರು ಅವರಿಗೆ ಜನತಾದಳದಿಂದ ಟಿಕೆಟ್ ನೀಡಿದ್ದರು. ಆಗ ಕಾಂಗ್ರೆಸ್ ಮತ್ತು ಜನತಾದಳ ನಡುವೆ ಭಾರಿ ಪೈಪೋಟಿ ನಡೆದಿತ್ತು. ಫಲಿತಾಂಶ ಪ್ರಕಟವಾದಾಗ ಮೊದಲ ಫಲಿತಾಂಶ ಬಂದಿದ್ದು ಚಿಕ್ಕೋಡಿ ಕ್ಷೇತ್ರದ್ದು. ರತ್ನಮಾಲಾ ಸವಣೂರು ಅವರು 1,12,759 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರು, ಅಂದು ಕೇಂದ್ರ ಸಚಿವರಾಗಿದ್ದ ಬಿ.ಶಂಕರಾನಂದ ಅವರನ್ನು ಸೋಲಿಸಿದ್ದರು. ಆ ದಿನ ದೇವೇಗೌಡರು ಬಹಳಷ್ಟು ಸಂತೋಷಪಟ್ಟರು ಎಂದು ನನ್ನ ತಂದೆ ಕುಮಾರಸ್ವಾಮಿ ಅವರು ಅನೇಕ ಸಲ ನನಗೆ, ನನ್ನ ತಾಯಿಗೆ ಹೇಳುತ್ತಿದ್ದರು.‌ ಇಂಥ ಗೆಲುವುಗಳು ಪಕ್ಷದಲ್ಲಿ ಮರುಕಳಿಸಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಹೇಳಿದರು.

ಡಿ.ಕೆ.ಸುರೇಶ್ʼಗೆ ತಿರುಗೇಟು ಕೊಟ್ಟ ಅನಿತಾ ಕುಮಾರಸ್ವಾಮಿ:

ಮಹಿಳಾ ಅಂತಾರಾಷ್ಟ್ರೀಯ ದಿನಾಚರಣೆಯ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ; ಮಾಜಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಕಿಡಿಕಾರಿದರು.ನಾನು ರಾಮನಗರದ  ಶಾಸಕಿಯಾಗಿದ್ದ ವೇಳೆ ಹಲವು ಸಮಸ್ಯೆಗಳನ್ನು ಎದುರಿಸಿದ್ದೆ. ಹಾರೋಹಳ್ಳಿ ತಾಲ್ಲೂಕು ರಚನೆ ಮಾಡುವುದಕ್ಕೆ ಕೆಲವರು ಬಿಡಲಿಲ್ಲ. ವಿಧಾನಸೌದದಲ್ಲಿ ಫೈಲ್ ಗಳನ್ನ ಮುಚ್ಚಿಡುತ್ತಿದ್ದರು ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಎಲ್ಲಿತ್ತು ಎಂಬುದು ಅವರಿಗೆ ಗೊತ್ತಿರಲಿಲ್ಲ, ಅವರು ವೀರಾವೇಷದ ಭಾಷಣ ಮಾಡುತ್ತಿದ್ದರು. ರಾಮನಗರಕ್ಕೆ ನಮ್ಮ ಕೊಡುಗೆ ಏನು ಎಂದು ಕೇಳುತ್ತಿದ್ದರು. ಹೇಗಿದ್ದ ರಾಮನಗರ ಇವತ್ತು ಹೇಗಾಗಿದೆ? ಅಭಿವೃದ್ಧಿ ಹೊಂದಿದ ರಾಮನಗರವನ್ನು ನಾವು ನೋಡುತ್ತಿದ್ದೇವೆ. ಅದಕ್ಕೆ ದೇವೇಗೌಡರು, ಕುಮಾರಸ್ವಾಮಿ ಅವರು ಹಾಗೂ ನನ್ನ ಕೊಡುಗೆ ಇದೆ. ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ಅವರು ಡಿ.ಕೆ. ಸುರೇಶ್‌ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist