ಕೇಂದ್ರ ವಿತ್ತ ಸಚಿವೆ ಭೇಟಿಯಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್: ರಾಜ್ಯದ ಅಭಿವೃದ್ಧಿಗೆ ಭಾರಿ ಅನುದಾನಕ್ಕೆ ಮನವಿ

ನವದೆಹಲಿ(www.thenewzmirror.com): ಬೆಂಗಳೂರು ಸೇರಿದಂತೆ ಕರ್ನಾಟಕದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮೂಲಸೌಕರ್ಯ ವೃದ್ಧಿ ಮತ್ತು ಪ್ರಮುಖ ನೀರಾವರಿ ಯೋಜನೆಗಳ ವೇಗದ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ವಿಶೇಷ ಹಣಕಾಸಿನ ನೆರವು ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ವಿನಂತಿಸಿದ್ದಾರೆ.

RELATED POSTS

ದೆಹಲಿಯಲ್ಲಿರುವ ಕೇಂದ್ರ ಸಚಿವರ ಅಧಿಕೃತ ಕಚೇರಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯದ ಉನ್ನತ ನಿಯೋಗವು, ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಅಗತ್ಯವಿರುವ ಆರ್ಥಿಕ ಸಹಕಾರದ ಕುರಿತು ವಿವರವಾದ ಮನವಿ ಪತ್ರವನ್ನು ಸಲ್ಲಿಸಿತು. ಈ ಮಹತ್ವದ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೇಂದ್ರ ಸಚಿವರಿಗೆ ಸಲ್ಲಿಸಲಾದ ಮನವಿಯ ಪ್ರಮುಖ ಆಂಶಗಳು ಹೀಗಿವೆ:

ಬಂಡವಾಳ ಹೂಡಿಕೆಗೆ ₹5,000 ಕೋಟಿ ವಿಶೇಷ ನೆರವು: ನಗರ ಪ್ರದೇಶದ ಮೂಲಸೌಕರ್ಯ, ನೀರಾವರಿ ಕಾಮಗಾರಿಗಳು ಹಾಗೂ ರಸ್ತೆ ಜಾಲದ ಪ್ರಗತಿಯನ್ನು ತ್ವರಿತಗೊಳಿಸಲು ‘ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು’ (SASCI) ಯೋಜನೆಯಡಿ ಹೆಚ್ಚುವರಿಯಾಗಿ ₹5,000 ಕೋಟಿ ಅನುದಾನ ಬಿಡುಗಡೆ ಮಾಡಬೇಕು.

“ಬ್ರ್ಯಾಂಡ್ ಬೆಂಗಳೂರು” ಯೋಜನೆಗೆ ₹5,000 ಕೋಟಿ: ದೇಶದ ಪ್ರಮುಖ ಆರ್ಥಿಕ ಹಬ್ ಆಗಿರುವ ಬೆಂಗಳೂರಿನ ಮೂಲಸೌಕರ್ಯದ ಕೊರತೆಗಳನ್ನು ನೀಗಿಸಲು ರಾಜ್ಯ ಸರ್ಕಾರ “ಬ್ರ್ಯಾಂಡ್ ಬೆಂಗಳೂರು” ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (UIDF) ಅಡಿಯಲ್ಲಿ ರಾಜ್ಯದ ಹಂಚಿಕೆಯನ್ನು ₹5,000 ಕೋಟಿಗೆ ಹೆಚ್ಚಿಸಬೇಕು.

ಗ್ರಾಮೀಣ ಮೂಲಸೌಕರ್ಯಕ್ಕೆ ₹3,500 ಕೋಟಿ ಹಂಚಿಕೆ: ಕಳೆದ ಆರ್ಥಿಕ ವರ್ಷದಲ್ಲಿ ನೀಡಲಾಗಿದ್ದ ₹2,000 ಕೋಟಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು (RIDF) ರಾಜ್ಯವು ರಸ್ತೆ, ಸೇತುವೆ ಹಾಗೂ ನೀರಾವರಿ ಕೆಲಸಗಳಿಗಾಗಿ ಸಂಪೂರ್ಣವಾಗಿ ಬಳಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂಬರುವ ಸಾಲಿಗೆ ಈ ಹಂಚಿಕೆಯನ್ನು ₹3,500 ಕೋಟಿಗೆ ಏರಿಸಬೇಕು.

ರಾಜ್ಯದ ನೀರಾವರಿ ಹಿತದೃಷ್ಟಿಯಿಂದ ಕೇಂದ್ರ ಸಚಿವರಿಗೆ ಸಲ್ಲಿಸಲಾದ ಪ್ರಮುಖ ಬೇಡಿಕೆಗಳ ವಿವರಗಳು ಹೀಗಿವೆ:

ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ: ಈ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ‘ರಾಷ್ಟ್ರೀಯ ಯೋಜನೆ’ ಎಂದು ಪರಿಗಣಿಸಲು ಒಪ್ಪಿಕೊಂಡಿದೆ. ಅದರಂತೆ 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ₹5,300 ಕೋಟಿ ಮೊತ್ತದ ಕೇಂದ್ರ ಆರ್ಥಿಕ ನೆರವು ಇನ್ನುಳಿದಿದ್ದು, ಈ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.

ಕಳಸಾ-ಬಂಡೂರಿ ನಾಲಾ ಯೋಜನೆಗೆ ಅರಣ್ಯ ಮಂಜೂರಾತಿ: ಉತ್ತರ ಕರ್ನಾಟಕದ ಭಾಗಕ್ಕೆ ಅತ್ಯಂತ ಆವಶ್ಯಕವಾಗಿರುವ ಈ ಕುಡಿಯುವ ನೀರಿನ ಯೋಜನೆಯು ಸದ್ಯ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ (MoEFCC) ಅರಣ್ಯ ಇಲಾಖೆಯ ಅಂತಿಮ ಕ್ಲಿಯರೆನ್ಸ್ ಸಿಗದೆ ಬಾಕಿ ಉಳಿದಿದೆ. ಇದಕ್ಕೆ ಶೀಘ್ರ ಒಪ್ಪಿಗೆ ಕೊಡಿಸಬೇಕು.

ಮೇಕೆದಾಟು ಸಮತೋಲನ ಜಲಾಶಯ ಯೋಜನೆ: ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಶಾಸನಬದ್ಧ ಅರಣ್ಯ ಮಂಜೂರಾತಿ ಪ್ರಕ್ರಿಯೆಯು ಕೇಂದ್ರ ಪರಿಸರ ಸಚಿವಾಲಯದಲ್ಲಿ ಬಾಕಿ ಇದ್ದು, ಇದಕ್ಕೆ ವೇಗ ನೀಡಬೇಕು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ: ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II (KWDT-II) ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ತನ್ನ ಅಧಿಕೃತ ಗೆಜೆಟ್‌ನಲ್ಲಿ ತಕ್ಷಣವೇ ಪ್ರಕಟಿಸಬೇಕು. ಇದರೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿ ಅನುಮೋದನೆ ನೀಡಲು ಕೇಂದ್ರ ಸಚಿವರು ಮಧ್ಯಸ್ಥಿಕೆ ವಹಿಸಬೇಕು.

ರಾಜ್ಯದ ಈ ಪ್ರಮುಖ ಜಲ ಯೋಜನೆಗಳು ಕಾನೂನು ಮತ್ತು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿರುವುದರಿಂದ ರಾಜ್ಯದ ಜನರಿಗೆ ತೊಂದರೆಯಾಗುತ್ತಿದ್ದು, ಕೇಂದ್ರ ಸರ್ಕಾರವು ವಿಶೇಷ ಆಸಕ್ತಿ ವಹಿಸಿ ಇವುಗಳನ್ನು ಬಗೆಹರಿಸಿಕೊಡಬೇಕು ಎಂದು ನಿಯೋಗವು ಒತ್ತಾಯಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist