ಪಿಎಂ ಮೋದಿಯವರಿಗೆ 18 ಬೇಡಿಕೆಗಳ ಅಹವಾಲು ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

RELATED POSTS

ನವದೆಹಲಿ(www.thenewzmirror.com):ನೀರಾವರಿ ಯೋಜನೆಗಳಿಗೆ ಸಹಕಾರ, ಕೇಂದ್ರದ ಬಾಕಿ ಅನುದಾನ, ಬೆಂಗಳೂರಿಗೆ ವಿಶೇಷ ಅನುದಾನ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸೇರಿದಂತೆ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ 18 ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶಿವಕುಮಾರ್ ಅವರು ಗುರುವಾರ ಭೇಟಿ ಮಾಡಿ ಅಹವಾಲು ಸಲ್ಲಿಸಿ, ಸಮಾಲೋಚನೆ ನಡೆಸಿದರು.

ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ ಬೇಡಿಕೆಗಳು ಹೀಗಿವೆ;

1. ಮೇಕೆದಾಟು ಯೋಜನೆ: ಮೇಕೆದಾಟು ವಿಚಾರವಾಗಿ ಸುಪ್ರೀಂ ಕೋರ್ಟ್ 13.11.2025 ರಂದು ತಮಿಳುನಾಡಿನ ವಿವಿಧ ಅರ್ಜಿಗಳನ್ನು ವಜಾಗೊಳಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಈಗಾಗಲೇ ಯೋಜನೆಯ ಮೌಲ್ಯಮಾಪನ ಮಾಡುವಂತೆ ಕೇಂದ್ರ ಜಲ ಆಯೋಗ (CWC)ಕ್ಕೆ ಸೂಚಿಸಿರುವುದರಿಂದ, ಈ ಯೋಜನೆಗೆ ಶೀಘ್ರವಾಗಿ ಅನುಮತಿ ದೊರೆಯುವಂತೆ ನೋಡಿಕೊಳ್ಳಬೇಕು.

2. ಕೃಷ್ಣಾ ಮೇಲ್ದಂಡೆ ಯೋಜನೆಗೆ ಗೆಜೆಟ್ ಅಧಿಸೂಚನೆ: ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II (KWDT-II) ತೀರ್ಪು ನೀಡಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಕೇಂದ್ರ ಸರ್ಕಾರವು ಈ ತೀರ್ಪನ್ನು ಇನ್ನೂ ಗೆಜೆಟ್‌ನಲ್ಲಿ ಅಧಿಸೂಚಿಸಿಲ್ಲ. ಕರ್ನಾಟಕ ರಾಜ್ಯ ಈ ಯೋಜನೆ ಜಾರಿಗೆ ಅನುಷ್ಠಾನದಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿದ್ದು, ಯೋಜನೆ ಮುಂದುವರಿಸಲು ಕೇಂದ್ರದ ಬೆಂಬಲದ ಅಗತ್ಯವಿದೆ.

3. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು: 2023-24ರ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು. ಆದರೆ, 3 ವರ್ಷಗಳು ಕಳೆದರೂ ರಾಜ್ಯಕ್ಕೆ ಈ ಆರ್ಥಿಕ ನೆರವು ಬಿಡುಗಡೆಯಾಗಿಲ್ಲ. ಇತ್ತೀಚೆಗೆ ನಡೆದ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿಯ 160 ನೇ ಸಭೆಯಲ್ಲಿ, ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯ 21,167.93 ಕೋಟಿ ರೂ.ಗಳ ಪರಿಷ್ಕೃತ ವೆಚ್ಚದ ಅಂದಾಜಿನ ಪ್ರಸ್ತಾವನೆಯನ್ನು ಮೌಲ್ಯೀಕರಿಸಲಾಗಿದೆ. ಭಾರತ ಸರ್ಕಾರದ PMKSY-AIBP ಯೋಜನೆಯಡಿ ಈ ಯೋಜನೆಗೆ ನೆರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.

4. ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ: ಕಳಸಾ ಮತ್ತು ಬಂಡೂರಿ ಯೋಜನೆಗೆ ಅರಣ್ಯ/ವನ್ಯಜೀವಿ ಮಂಜೂರಾತಿಯನ್ನು ಇನ್ನೂ ನೀಡಿಲ್ಲ. ಈ ಯೋಜನೆಗೆ ಯಾವುದೇ ಕಾನೂನು ಅಡಚಣೆಗಳಿಲ್ಲದಿದ್ದರೂ ಅನುಮತಿ ಬಾಕಿ ಉಳಿದಿದ್ದು, ಈ ಅನುಮತಿ ನೀಡಬೇಕಾಗಿ ಮನವಿ ಮಾಡಲಾಗಿದೆ.

5. PMKSY-AIBP, FMBAP ಮತ್ತು MCAD ಯೋಜನೆಗಳಡಿ ನೀರಾವರಿ ಯೋಜನೆಗಳಿಗೆ ನೆರವು: ಕರ್ನಾಟಕ ರಾಜ್ಯವು ಭಾರತ ಸರ್ಕಾರದ AIBP-PMKSY ಮತ್ತು FMBAP ಯೋಜನೆಗಳಡಿ ವಿವಿಧ ಯೋಜನೆಗಳಿಗೆ ಕೇಂದ್ರದ ನೆರವು ಕೋರಿ ಫೆಬ್ರವರಿ 2025 ರಲ್ಲಿ ನವದೆಹಲಿಯ DoWR, RD & GR ಮತ್ತು CWC ಗೆ PFR / DPR ಗಳನ್ನು ಸಲ್ಲಿಸಿದೆ. ಸೊಂತಿ ಏತ ನೀರಾವರಿ ಯೋಜನೆ, ಯುಕೆಪಿ (UKP) ಇಂಡಿ ಶಾಖಾ ಕಾಲುವೆ (ಕಿಮೀ 64 ರಿಂದ 172 ವರೆಗೆ) ಮಲಪ್ರಭಾ ಕಾಲುವೆ  (ಹಂತ-III) ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ಕಾಲುವೆ, ತುಂಗಭದ್ರಾ ಎಡದಂಡೆ ಕಾಲುವೆ ವ್ಯವಸ್ಥೆಯ ಬಾಕಿ ಉಳಿದಿರುವ ಕಾಮಗಾರಿಗಳು ಬೆಣ್ಣೆಹಳ್ಳ ನದಿ ಪ್ರವಾಹ ನಿಯಂತ್ರಣ ಮತ್ತು ಪ್ರವಾಹ ನಿರ್ವಹಣೆ ಯೋಜನೆ ಸೇರಿದಂತೆ ಒಟ್ಟು ಅಂದಾಜು ವೆಚ್ಚ 11,122.76 ಕೋಟಿ ರೂ.ಗಳಾಗಿದ್ದು, ಈ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡಬೇಕು.

6. ನದಿಗಳ ಜೋಡಣೆ ಯೋಜನೆಯಲ್ಲಿ ನ್ಯಾಯಯುತ ಪಾಲು:ನದಿಗಳ ಜೋಡಣೆ ಕಾರ್ಯಕ್ರಮದ ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ಲಿಂಕ್ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ (TMC) ನ್ಯಾಯಸಮ್ಮತ ಹಂಚಿಕೆ ಮಾಡಬೇಕು.

7. ಗ್ರಾಮ ಪಂಚಾಯಿತಿಗಳಿಗೆ 15 ನೇ ಹಣಕಾಸು ಆಯೋಗದ ಅನುದಾನ: ಕರ್ನಾಟಕಕ್ಕೆ 2025-26ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ 2860 ಕೋಟಿ ರೂ.ಗಳ ಅನುದಾನ ಇನ್ನೂ ಬಾಕಿ ಇದೆ. ಈ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು.

8. ಬೆಂಗಳೂರಿಗೆ 26,000 ಕೋಟಿ ರೂ. ವಿಶೇಷ ಅನುದಾನ: ರಾಷ್ಟ್ರೀಯ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆಯನ್ನು ಪರಿಗಣಿಸಿ. ಇಲ್ಲಿನ ಮೂಲಸೌಕರ್ಯವನ್ನು ಬಲಪಡಿಸಲು 26,000 ಕೋಟಿ ರೂ.ಗಳ ನೆರವು ನೀಡಬೇಕು.

9. ಎಸ್‌ಟಿಆರ್‌ಆರ್ (STRR) ಯೋಜನೆ:ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಗೆ 01.01.2025 ರಂದು PPPAC ಅನುಮತಿ ನೀಡಿದ್ದರೂ, ಸಚಿವಸಂಪುಟದಲ್ಲಿ ಇನ್ನೂ ಅನುಮೋದನೆ ಸಿಕ್ಕಿಲ್ಲ. ಈ ಪ್ರಸ್ತಾವನೆಯು ಪ್ರಸ್ತುತ ಪ್ರಧಾನಮಂತ್ರಿಗಳ ಕಚೇರಿಯಲ್ಲಿದ್ದು ಕರ್ನಾಟಕ ಸರ್ಕಾರ ಅನುಮೋದನೆಯ ನಿರೀಕ್ಷೆಯಲ್ಲಿದೆ.

10.ಬೆಂಗಳೂರು ಉಪನಗರ ರೈಲಿಗೆ ಹಣ ಬಿಡುಗಡೆ, ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಪ್ರಾರಂಭ: ಬೆಂಗಳೂರು ಉಪನಗರ ರೈಲು ಯೋಜನೆಗೆ ರೋಲಿಂಗ್ ಸ್ಟಾಕ್ ಅನ್ನು PPP ಮಾದರಿಯಿಂದ ಇಕ್ವಿಟಿ ಮಾದರಿಗೆ ಬದಲಾಯಿಸುವ ಔಪಚಾರಿಕ ಅನುಮೋದನೆಯನ್ನು ತ್ವರಿತಗೊಳಿಸಲು ನಾನು ಕೇಂದ್ರ ಸಚಿವ ಸಂಪುಟವನ್ನು ಒತ್ತಾಯಿಸುತ್ತೇನೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಸಹ ತ್ವರಿತಗೊಳಿಸಬೇಕಾಗಿ ವಿನಂತಿಸುತ್ತೇನೆ.

11. ಡಬಲ್ ಡೆಕ್ಕರ್ ಫ್ಲೈಓವರ್ ಒಳಗೊಂಡ ಬಿಎಂಆರ್‌ಸಿಎಲ್ (BMRCL) ಹಂತ-3 ಯೋಜನೆಗೆ ಅನುಮೋದನೆ: 37.121 ಕಿಮೀ ಉದ್ದಕ್ಕೆ ಮೆಟ್ರೋ ಮಾರ್ಗವನ್ನು 9,700 ಕೋಟಿ ರೂ. ವೆಚ್ಚದಲ್ಲಿ ಡಬಲ್ ಡೆಕ್ಕರ್ ಮೇಲ್ಸೆತುವೆ ನಿರ್ಮಿಸಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರ ಈ ವೆಚ್ಚ ಭರಿಸಲಿದ್ದು, ಈ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಬೇಕು. 

12. ಹಂತ-2 ರ ಪರಿಷ್ಕೃತ ಪೂರ್ಣಗೊಳ್ಳುವಿಕೆ ವೆಚ್ಚ:ಹಂತ-2 ಯೋಜನೆಯನ್ನು ಭಾರತ ಸರ್ಕಾರವು 21/02/2014 ರಂದು 61 ನಿಲ್ದಾಣಗಳನ್ನು ಒಳಗೊಂಡ 72.095 ಕಿಮೀ ಮೆಟ್ರೋ ಮಾರ್ಗಕ್ಕಾಗಿ 26,405.14 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಮೋದಿಸಿತ್ತು. ಹಂತ-2 ರ ಪರಿಷ್ಕೃತ ವೆಚ್ಚವನ್ನು 40,425.02 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಭಾರತ ಸರ್ಕಾರ ಅನುಮೋದಿಸಿದ ವೆಚ್ಚಕ್ಕಿಂತ ಇದು 14,019.88 ಕೋಟಿ ರೂ. ಹೆಚ್ಚಾಗಿದೆ. ಆದಷ್ಟು ಬೇಗ ಇದಕ್ಕೆ ಅನುಮೋದಿಸಬೇಕು ಎಂದು ಮನವಿ.

13. ಬಿಎಂಆರ್‌ಸಿಎಲ್ ಹಂತ-3ಎ ಯೋಜನೆಗೆ ಅನುಮೋದನೆ: ಸರ್ಜಾಪುರದಿಂದ ಹೆಬ್ಬಾಳದವರೆಗಿನ 37.804 ಕಿ.ಮೀ ಸುರಂಗ ಮಾರ್ಗದ ವೆಚ್ಚವನ್ನು 25,999.00 ಕೋಟಿ ರೂ.ಗೆ ಪರಿಷ್ಕರಿಸಿದ ಡಿಪಿಆರ್ ಅನ್ನು 29.04.2026 ರಂದು ಮರುಸಲ್ಲಿಸಲಾಗಿದೆ. ಇದಕ್ಕೆ ಶೀಘ್ರವಾಗಿ ಅನುಮೋದನೆ ನೀಡಬೇಕಾಗಿ ವಿನಂತಿ.

14. ಆರ್‌ಆರ್‌ಟಿಎಸ್ (RRTS) ಅನುಷ್ಠಾನಕ್ಕೆ ಅನುಮೋದನೆ: ಆರ್‌ಆರ್‌ಟಿಎಸ್ ಮಾದರಿಯಲ್ಲಿ ಬೆಂಗಳೂರಿನಿಂದ ಮೈಸೂರು, ಬೆಂಗಳೂರಿನಿಂದ ಕನಕಪುರ, ಬೆಂಗಳೂರಿನಿಂದ ತುಮಕೂರು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಕೋಲಾರಕ್ಕೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಅನುಷ್ಠಾನಗೊಳಿಸಲು ಅನುಮೋದನೆ ನೀಡಬೇಕಾಗಿ ವಿನಂತಿ.

15. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿ ಮತ್ತು ಮೇಲ್ದರ್ಜೆಗೆ ಏರಿಸುವಿಕೆ: ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿ ಮತ್ತು ಅನುಷ್ಠಾನಕ್ಕೆ ಕೇಂದ್ರವು ತುರ್ತಾಗಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಲಾಗಿದೆ.

16. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (2000 ಮೆಗಾವ್ಯಾಟ್):ಈ ಯೋಜನೆಗೆ ಅಗತ್ಯವಿರುವ ಅರಣ್ಯ, ಪರಿಸರ ಮತ್ತು ವನ್ಯಜೀವಿ ಅನುಮತಿಗಳನ್ನು ತ್ವರಿತಗೊಳಿಸಬೇಕು. ಈ ಯೋಜನೆಯು ಗ್ರಿಡ್ ಸ್ಥಿರತೆಯನ್ನು ಹೆಚ್ಚಿಸಲಿದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳಿಗೆ ಬೆಂಬಲ ನೀಡಲಿದೆ.

17. ಸಂವಿಧಾನದ 371(ಜೆ) ವಿಧಿಯಡಿ ಕಲ್ಯಾಣ ಕರ್ನಾಟಕಕ್ಕೆ 25,000 ಕೋಟಿ ಆರ್ಥಿಕ ನೆರವು: ಸಂವಿಧಾನದ 371(ಜೆ) ವಿಧಿಯ ಆಶಯಕ್ಕೆ ಅನುಗುಣವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ವಾರ್ಷಿಕವಾಗಿ 25,000 ಕೋಟಿ ರೂ.ಗಳ ಪ್ರತ್ಯೇಕ ಆರ್ಥಿಕ ನೆರವನ್ನು ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ

18. ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪನೆ: 371(ಜೆ) ವಿಧಿಯಡಿ ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪನೆಗೆ ಶೀಘ್ರವಾಗಿ ಅನುಮೋದನೆ ನೀಡಬೇಕು. ಇದರಿಂದ ಈ ಭಾಗದ ಆರೋಗ್ಯ ಕ್ಷೇತ್ರ ಸುಧಾರಣೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ನೆರವಾಗಲಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist