ಬೆಂಗಳೂರು ಸಾರಿಗೆ ಕ್ರಾಂತಿಗೆ ಕೇಂದ್ರದ ಸಹಕಾರ ಕೋರಿದ ಸಿಎಂ ಡಿ.ಕೆ. ಶಿವಕುಮಾರ್

ನವದೆಹಲಿ(www.thenewzmirror.com): ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ನಮ್ಮ ಮೆಟ್ರೋ ಜಾಲದ ಬಲವರ್ಧನೆಗೆ ಸಂಬಂಧಿಸಿದ ಹಲವು ಪ್ರಮುಖ ಯೋಜನೆಗಳಿಗೆ ಶೀಘ್ರ ಅನುಮತಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿದ ಅವರು ಉನ್ನತ ಮಟ್ಟದ ಮಾತುಕತೆ ನಡೆಸಿದರು.

RELATED POSTS

ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ 4 ಪ್ರಮುಖ ಪ್ರಸ್ತಾವನೆಗಳ ವಿವರಗಳು ಇಲ್ಲಿವೆ:

1. ರೂ. 9,700 ಕೋಟಿಯ ಡಬಲ್ ಡೆಕ್ಕರ್ ಯೋಜನೆ:

ಮೆಟ್ರೋ ಮೂರನೇ ಹಂತದ ಅಡಿಯಲ್ಲಿ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದ್ದು, ಇತ್ತೀಚೆಗೆ ಬಿಎಂಆರ್‌ಸಿಎಲ್ ಮಂಡಳಿ ಸಭೆಯಲ್ಲಿ ತರಲಾದ ಸಣ್ಣ ತಾಂತ್ರಿಕ ಬದಲಾವಣೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ, ಕಾಮಗಾರಿ ಆರಂಭಿಸಲು ಹಸಿರು ನಿಶಾನೆ ತೋರಬೇಕು ಎಂದು ಕೋರಿದ್ದಾರೆ.

2. ಮೆಟ್ರೋ 2ನೇ ಹಂತದ ಪರಿಷ್ಕೃತ ವೆಚ್ಚಕ್ಕೆ ಸಮ್ಮತಿ:

2014ರಲ್ಲಿ ಮೆಟ್ರೋ ಎರಡನೇ ಹಂತದ 72.095 ಕಿ.ಮೀ ಮಾರ್ಗದ ಯೋಜನೆಗೆ 26,405.14 ಕೋಟಿ ರೂ. ಅಂದಾಜಿಸಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಈ ಯೋಜನಾ ವೆಚ್ಚವು 40,425.02 ಕೋಟಿ ರೂ.ಗೆ (14,019.88 ಕೋಟಿ ರೂ. ಏರಿಕೆ) ತಲುಪಿದ್ದು, ಈ ಪರಿಷ್ಕೃತ ವೆಚ್ಚದ ಪ್ರಸ್ತಾವನೆಗೆ ಕೇಂದ್ರವು ಶೀಘ್ರದಲ್ಲೇ ಅನುಮೋದನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

3. ಸರ್ಜಾಪುರ-ಹೆಬ್ಬಾಳ ಮೆಟ್ರೋ 3ಎ ಹಂತದ ಯೋಜನೆ:

ಸರ್ಜಾಪುರದಿಂದ ಹೆಬ್ಬಾಳದವರೆಗಿನ ಒಟ್ಟು 37.804 ಕಿ.ಮೀ ಉದ್ದದ ಮೆಟ್ರೋ ಮೂರನೇ ‘ಎ’ ಹಂತದ ಯೋಜನೆಗೆ ಕೇಂದ್ರದ ಸೂಚನೆಗಳನ್ವಯ ಮಾರ್ಪಾಡು ಮಾಡಲಾಗಿದೆ. 25,999 ಕೋಟಿ ರೂ. ಅಂದಾಜು ವೆಚ್ಚದ ಈ ಪರಿಷ್ಕೃತ ಸವಿಸ್ತಾರ ಯೋಜನಾ ವರದಿಯನ್ನು (DPR) ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಇದಕ್ಕೆ ತುರ್ತು ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.

4. ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ (RRTS) ಜಾರಿ:

ಬೆಂಗಳೂರು ನಗರವನ್ನು ಸುತ್ತಮುತ್ತಲಿನ ಪ್ರಮುಖ ಜಿಲ್ಲೆಗಳೊಂದಿಗೆ ಜೋಡಿಸಲು ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಜಾರಿಗೆ ತರಲು ಕೇಂದ್ರದ ಸಹಕಾರ ಕೋರಿದ್ದಾರೆ. ಬೆಂಗಳೂರಿನಿಂದ ಮೈಸೂರು, ಕನಕಪುರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ನಡುವೆ ಈ ಕ್ಷಿಪ್ರ ರೈಲು ಸಂಚಾರ ಆರಂಭಿಸಲು ಅನುಮತಿ ನೀಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist