ಬೆಂಗಳೂರು(www.thenewzmirror.com): ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ನಡುವಿನ ಸ್ನೇಹ ಹಾಗೂ ಬಾಂಧವ್ಯವು ಕೇವಲ ಒಂದು ರಾಜ್ಯಸಭೆ ಸ್ಥಾನವನ್ನು ಮೀರಿದ್ದಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನನಗೆ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತೇ ಹೊರತು ಮತ್ತೊಮ್ಮೆ ರಾಜ್ಯಸಭೆ ಸದಸ್ಯನಾಗಬೇಕು ಎಂಬ ವ್ಯಾಮೋಹ ನನಗಿಲ್ಲ ಎಂದು ವಿನಯಪೂರ್ವಕವಾಗಿ ನುಡಿದರು.
ತಾವು 1954-55ರ ಅವಧಿಯಿಂದಲೇ ಸಕ್ರಿಯ ರಾಜಕಾರಣದಲ್ಲಿದ್ದು, ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದಿರುವುದಾಗಿ ದೇವೇಗೌಡರು ಸ್ಮರಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಬದುಕಿರುವುದರಿಂದ, ಇಂದು ಯಾವುದೇ ಒಂದು ಸ್ಥಾನಕ್ಕಾಗಿ ತಾವು ಹಾತೊರೆಯುವ ಅಗತ್ಯವಿಲ್ಲ ಎಂದ ಅವರು, ರಾಜ್ಯಸಭೆ ಚುನಾವಣೆಯ ಟಿಕೆಟ್ ವಿಚಾರವಾಗಿ ತಮ್ಮ ಹೆಸರನ್ನು ಬಳಸಿ ನಡೆಯುತ್ತಿರುವ ಅನಗತ್ಯ ಚರ್ಚೆಗಳಿಗೆ ಈ ಮೂಲಕ ಸಂಪೂರ್ಣ ತೆರೆ ಎಳೆದರು.
ರಾಜ್ಯಸಭೆ ಸ್ಥಾನ ತಪ್ಪಿಸಿ ಬಿಜೆಪಿ ದೇವೇಗೌಡರಿಗೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಪದೇಪದೇ ಮಾಡುತ್ತಿರುವ ಆರೋಪಗಳಿಗೆ ಖಡಕ್ ಆಗಿ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೇಲಿಟ್ಟಿರುವ ಅಚಲ ವಿಶ್ವಾಸದ ಮುಂದೆ ವಿರೋಧ ಪಕ್ಷಗಳ ಇಂತಹ ರಾಜಕೀಯ ಟೀಕೆಗಳು ಅತ್ಯಂತ ಸಣ್ಣವು ಎಂದು ತಿರುಗೇಟು ನೀಡಿದರು. ಮಾಧ್ಯಮಗಳಲ್ಲಿ ತಮ್ಮ ಹೆಸರು ಪ್ರಚಾರವಾಗಿದ್ದು ಬಿಟ್ಟರೆ, ತಾವು ಎಲ್ಲಿಯೂ ರಾಜ್ಯಸಭೆ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರೇ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ತಾವು ಮೋದಿಯವರನ್ನು ಕಟುವಾಗಿ ಟೀಕಿಸಿದ್ದು ನಿಜವಾದರೂ, ಕಳೆದ ಹಲವು ವರ್ಷಗಳಿಂದ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಂಡಿದ್ದೇನೆ. ಅವರ ಒಳ್ಳೆಯ ಕೆಲಸಗಳನ್ನು ತಾವು ಹೃದಯಪೂರ್ವಕವಾಗಿ ಶ್ಲಾಘಿಸಿದ್ದು, ಪ್ರಧಾನಿಯವರ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹಿರಿಯ ನಾಯಕರು ಒತ್ತಿ ಹೇಳಿದರು. ತಮಗೆ ರಾಜ್ಯಸಭೆಗೆ ಸ್ಪರ್ಧಿಸುವ ಆಸಕ್ತಿ ಇದ್ದಿದ್ದೇ ಆದಲ್ಲಿ, ಕಳೆದ ಮೇ 26ರಂದು ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ವೇಳೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸುತ್ತಿದ್ದೆ. ಆದರೆ ತಾವು ಅಂತಹ ಯಾವುದೇ ಮಾತುಕತೆ ನಡೆಸದೆ ಕಾರ್ಯಕ್ರಮ ಮುಗಿದ ತಕ್ಷಣ ಬೆಂಗಳೂರಿಗೆ ಮರಳಿರುವುದಾಗಿ ಮಾಹಿತಿ ನೀಡಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ತಾವು ರಾಜಕೀಯವಾಗಿ ಸುಮ್ಮನೆ ಕೂರುವುದಿಲ್ಲ ಎಂದರು. ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ತಮ್ಮ ಶಕ್ತಿ ಮೀರಿ ಶ್ರಮಿಸುವುದಾಗಿ ಹಾಗೂ ರಾಜ್ಯ-ದೇಶದ ಹಿತಾಸಕ್ತಿಯ ವಿಚಾರ ಬಂದಾಗ ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ಧ್ವನಿ ಎತ್ತುತ್ತಲೇ ಇರುವುದಾಗಿ ವಿವರಿಸಿದರು. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಪಾರ ಗೌರವವಿದ್ದು, ಅದರಿಂದ ರಾಷ್ಟ್ರದ ಕೀರ್ತಿ ಹೆಚ್ಚುತ್ತಿದೆ. ಅವರೊಂದಿಗೆ ತಾವು ಹೊಂದಿರುವ ವೈಯಕ್ತಿಕ ಬಾಂಧವ್ಯವನ್ನು ರಾಜಕೀಯ ಕಾರಣಗಳಿಗಾಗಿ ಕಳೆದುಕೊಳ್ಳಲು ಬಯಸುವುದಿಲ್ಲ. ತಾವು ಸಂಸತ್ತಿನಲ್ಲಿ ಇರಲಿ ಅಥವಾ ಇಲ್ಲದಿರಲಿ, ಮೋದಿ ಅವರೊಂದಿಗಿನ ಒಡನಾಟ ಕೊನೆಯವರೆಗೂ ಹೀಗೆಯೇ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟಪಡಿಸಿದರು







