ಬೆಂಗಳೂರು, (www.thenewzmirror.com) ;
ವಿಶಾಲವಾಗಿ ಬೆಳೆದಿರುವ ಬೆಂಗಳೂರು ನಗರದಲ್ಲಿ ಒಟ್ಟಾರೆ ರಸ್ತೆಗಳ ಪೈಕಿ 1194 ರಸ್ತೆಗಳನ್ನ ನೋ ಪಾರ್ಕಿಂಗ್ ರಸ್ತೆಗಳೆಂದು ಗುರುತಿಸಲಾಗಿದೆ. ಇಂಥ ಸ್ಥಳಗಳಲ್ಲಿ ಯಾವುದೇ ವಾಹನಗಳನ್ನ ನಿಲುಗಡೆ ಮಾಡಿದರೂ ಅಂಥ ವಾಹನ ಮಾಲೀಕರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ ಅಂತ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಂಥ ಮಹಾನ್ ನಗರಗಳಲ್ಲಿ ಪಾರ್ಕಿಂಗ್ ನದ್ದೇ ಸಮಸ್ಯೆ. ಯಾವೆಲ್ಲ ರಸ್ತೆಗಳು ಫ್ರೀ ಆಗಿರ್ತವೇ ಅಂಥ ಎಲ್ಲ ಕಡೆಗಳಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಿಯಾಗಿಬಿಟ್ಟಿದೆ. ಪಾರ್ಕಿಂಗ್ ಸಮಸ್ಯೆ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನ ಇದೇ ವೇಳೆ ವಿಧಾನಸಭೆಯಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕೇಳಿದ್ದ ಪಾರ್ಕಿಂಗ್ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರು ನಗರದಲ್ಲಿ ನೋ ಪಾರ್ಕಿಂಗ್ ಇರುವ 1194 ರಸ್ತೆಗಳಲ್ಲಿ ಕೋಟಿಗಟ್ಟಲೇ ದಂಡವನ್ನ ವಸೂಲಿ ಮಾಡಲಾಗಿದೆ. 2022ರಲ್ಲಿ 12,07,651 ಪ್ರಕರಣಗಳಲ್ಲಿ 20,84,56,000 ರೂ. ದಂಡ, 2023ರಲ್ಲಿ 11,30,855 ಪ್ರಕರಣಗಳಿಗೆ ರೂ 37,30,22,000, 2024 (ಜೂನ್ 3ರವರೆಗೆ) 5,21,326 ಪ್ರಕರಣಗಳನ್ನು ದಾಖಲಿಸಿ 5,97,00,200 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಇನ್ಫ್ರಾಸ್ಟ್ರಕ್ಚರ್‌ಗಳಿಗೆ ನಿಯಮಗಳನ್ನು ರೂಪಿಸದಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಬಿಬಿಎಂಪಿ, ಸಾರಿಗೆ ಇಲಾಖೆಯವರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಮನೆಕಟ್ಟುವಾಗ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಇದ್ದರೆ ಮಾತ್ರ ಅನುಮತಿ ನೀಡಬೇಕು. ಇಂತಹ ನಿಯಮಗಳನ್ನು ತರಲು ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಕೆಳಹಂತದ ಸಿಬ್ಬಂದಿಗಳು ಮಾತ್ರವಲ್ಲದೇ ಸಂಚಾರ ವಿಭಾಗದ ಡಿಸಿಪಿ, ಎಸಿಪಿಯವರು ಬೆಳಗ್ಗೆ ಮತ್ತು ಸಂಜೆ ವೇಳೆ ಕನಿಷ್ಟ ಎರಡು ತಾಸು ರಸ್ತೆಗಿಳಿದು ಕೆಲಸ ಮಾಡುವಂತೆ ಈಗಾಗಲೇ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.