ಬೆಂಗಳೂರು, (www.thenewzmirror.com) ;
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು ಇದರ ಬೆನ್ನಲ್ಲೇ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಗೂ ಮುಂದಾಗಿದೆ.
ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಮಾಡಿದೆ.

ಈ ಹೊಸ ವಿದೇಯಕದಿಂದ ಖಾಸಗಿ ಕಂಪೆನಿಗಳು ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ 50% , ನಾನ್ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ 75% ಹಾಗೂ ಸಿ & ಡಿ ದರ್ಜೆಯ ಹುದ್ದೆಗಳಲ್ಲಿ 100% ಮೀಸಲಾತಿಯನ್ನು ಕನ್ನಡಿಗರಿಗೆ ಮೀಸಲಿರಿಸಬೇಕಿದೆ.

ಇನ್ನು ಸರ್ಕಾರದ ನಡೆಯನ್ನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತ ಮಾಡಿದೆ. ನಮ್ಮ ಹಲವು ವರ್ಷಗಳ ಬೇಡಿಕೆ ಈಡೇರಿದೆ ಅಂತ ಅಭಿಪ್ರಾಯಪಟ್ಟಿದೆ. ಆದರೆ ಸರ್ಕಾರದ ನಡೆಯನ್ನ ಉದ್ಯಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಇದನ್ನ ಮರುಪರಿಶೀಲಿಸಬೇಕೆಂದು ಮನವಿ ಮಾಡುತ್ತಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ FKCCI ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಎಫ್‌ಕೆಸಿಸಿಐ ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸುವ ಸರ್ಕಾರದ ಗುರಿಯನ್ನು ಸ್ವಾಗತಿಸುತ್ತದೆ ಹಾಗೆನೇ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳ ಸ್ಥಾಪನೆಯಲ್ಲಿ ಕನ್ನಡಿಗರಿಗೆ ಅವರ ಉದ್ಯೋಗಕ್ಕಾಗಿ ಉತ್ತೇಜಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಇದರ ಜತೆಗೆ ಕರಡು ಮಸೂದೆಯಲ್ಲಿ ಕೆಲ ಬದಲಾವಣೆ ಮಾಡುವಂತೆಯೂ ಸಲಹೆ ನೀಡಿದ್ದಾರೆ.
ಕನ್ನಡಿಗರಿಗೆ ಉದ್ದೇಶಿತ ಉದ್ಯೋಗ ಕೋಟಾಗಳನ್ನು ನಿರ್ವಹಣಾ ವರ್ಗಕ್ಕೆ 50% ಮತ್ತು ನಿರ್ವಹಣೇತರ ವರ್ಗಕ್ಕೆ 75% ನೀಡಲು ಮುಂದಾಗಿರುವುದನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದಿದ್ದಾರೆ. ಇದಲ್ಲದೆ, ಗ್ರೂಪ್ ‘ಸಿ’ ಮತ್ತು ‘ಡಿ’ ಗಾಗಿ 100% ಮೀಸಲಾತಿಯು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವಂತಾಗುತ್ತದೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಈ ಮೇಲಿನ ಸಮಸ್ಯೆಗಳನ್ನು ಪರಿಗಣಿಸಿ, ಕನ್ನಡಿಗರಿಗೆ ವಿಶೇಷವಾಗಿ ಮ್ಯಾನೇಜ್‌ಮೆಂಟ್ ವರ್ಗದಲ್ಲಿ ಉದ್ಯೋಗ ಕೋಟಾದ ಮಸೂದೆಯ ಸುಮಾರು 25% ಮೀಸಲಾತಿ ನೀಡಬೇಕೆಂದು ಎಫ್‌ಕೆಸಿಸಿಐ ಸರ್ಕಾರಕ್ಕೆ ಬಲವಾಗಿ ಆಗ್ರಹಿಸಿದೆ.