ಬೆಂಗಳೂರು, (www.thenewzmirror.com) ;
ಸಾರಿಗೆ ನೌಕರರಿಗೆ ಅಫಘಾತ ಪರಿಹಾರ ವಿಮಾ ಯೋಜನೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಜಾರಿ ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ನೌಕರರಿಗೆ ಅಫಘಾತ ವಿಮೆ ನೀಡುವ ಯೋಜನೆ ಈಗಾಗಲೇ KSRTC ಹಾಗೂ KKRTC ಯಲ್ಲಿ ಜಾರಿ ಮಾಡಲಾಗಿತ್ತು. ಉಳಿದಂತೆ BMTC ಯಲ್ಲಿ ಇಂದು ಈ ಯೋಜನೆ ಮಾಡಿದ್ದು, ಉಳಿದ NWKRTCಯಲ್ಲಿ ಯಾವಾಗ ಅಂತ ನೌಕರರು ಪ್ರಶ್ನೆ ಮಾಡ್ತಿದ್ದಾರೆ.
ಸಾರಿಗೆ ನಿಗಮ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ 1.5 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ ಒಡಂಬಡಿಕೆಗೆ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹಿ ಮಾಡಿದ್ರು. ಅಫಘಾತ ಪರಿಹಾರ ವಿಮೆ ಜತೆಗೆ ಸೇವೆಯಲ್ಲಿರುವಾಗಲೇ ಅಪಘಾತದಲ್ಲಿ ಮೃತಪಟ್ಟಿರುವ ಸಿಬ್ಬಂದಿಯ ನಾಮನಿರ್ದೇಶಿತರಿಗೆ 1 ಕೋಟಿ ಅಪಘಾತ ವಿಮಾ ಪರಿಹಾರ ಮೊತ್ತದ ಚೆಕ್ ಅನ್ನೂ ಇದೇ ವೇಳೆ ವಿತರಿಸಿದ್ರು.
ಸ್ವಾಭಾವಿಕವಾಗಿ ಮೃತಪಟ್ಟಿರುವ ಸಿಬ್ಬಂದಿಗಳ ನಾಮನಿರ್ದೇಶಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯ ರೂ. 10 ಲಕ್ಷಗಳ ಚೆಕ್ ಅನ್ನು ಸಚಿವರು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ವಿತರಣೆ ಮಾಡಿದ್ರು.



ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ, ಕೆನರಾ ಬ್ಯಾಂಕ್ ನೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಈ ಒಡಂಬಡಿಕೆಯನ್ವಯ ಬ್ಯಾಂಕ್ ನಲ್ಲಿ ವೇತನ ಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತ (ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ, ಅವರ ನಾಮನಿರ್ದೇಶಿತರಿಗೆ ರೂ.1.00 ಕೋಟಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಸಂಸ್ಥೆಯು 50 ಲಕ್ಷ ರೂಪಾಯಿಗಳನ್ನು ಸಹ ನೀಡುತ್ತಿದ್ದು, ಒಟ್ಟು 1.50 ಲಕ್ಷ ರೂಪಾಯಿಗಳನ್ನು ಮೃತ ಸಿಬ್ಬಂದಿಗಳ ಕುಟುಂಬಕ್ಕೆ ನೀಡಲಾಗುವುದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಯಲ್ಲಿದ್ದ ಗುಂಪು ವಿಮಾ ಯೋಜನೆಯನ್ನು ಪರಿಷ್ಕರಿಸಿ, ಅಧಿಕಾರಿ/ನೌಕರರ ವಂತಿಗೆ ರೂ.350 ಮತ್ತು ಸಂಸ್ಥೆಯ ವಂತಿಗೆ ರೂ.150 ಒಟ್ಟು ರೂ.500 ಗಳ ವಂತಿಗೆಯೊಂದಿಗೆ ಅಪಘಾತದಿಂದ (ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ ರೂ.50.00 ಲಕ್ಷ ಮತ್ತು ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟಲ್ಲಿ, ರೂ.10.00 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವ ಯೋಜನೆಯನ್ನು 2024 ರ ಫೆಬ್ರವರಿ 19 ರಿಂದ ಜಾರಿಗೆ ತರಲಾಗಿರುತ್ತದೆ. ಅಂದಿನಿಂದ ಜನವರಿ 2025 ರ ವರೆಗೂ 86 ನೌಕರರುಗಳು ಮೃತಪಟ್ಟಿದ್ದು, ಅದರಲ್ಲಿ ಸ್ವಾಭಾವಿಕ ಹಾಗೂ ಇನ್ನಿತರೆ ಕಾರಣಗಳಿಂದ ಒಟ್ಟು 77 ನೌಕರರು ಮೃತಪಟ್ಟಿದ್ದು, ಅದರಲ್ಲಿ 46 ಮೃತ ನೌಕರರುಗಳ ನಾಮನಿರ್ದೇಶಿತರಿಗೆ ಸಂಸ್ಥೆಯ ಗುಂಪು ವಿಮಾ ಯೋಜನೆಯಡಿಯಲ್ಲಿ ತಲಾ ರೂ.10.00 ಲಕ್ಷದಂತೆ ಒಟ್ಟು ರೂ.4,60,00,000/- ಗಳನ್ನು ಪಾವತಿಸಲಾಗಿರುತ್ತದೆ.
09 ನೌಕರರು ಅಪಘಾತದಿಂದ ಮೃತಪಟ್ಟಿದ್ದು, ಅದರಲ್ಲಿ 04 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ ರೂ.50 ಲಕ್ಷದಂತೆ ರೂ. 2 ಕೋಟಿಗಳ ವಿಮಾ ಪರಿಹಾರ ಮೊತ್ತವನ್ನು ಪಾವತಿಸಲಾಯ್ತು.
ಬಿಎಂಟಿಸಿ ಎಂಡಿ ರಾಮಚಂದ್ರನ್.ಆರ್, ಭಾ.ಆ.ಸೇ, ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕಿ ಶಿಲ್ಪಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ರು.