ಬೆಂಗಳೂರು,(www.thenewzmirror.com) :
ಇದು ಬಿಬಿಎಂಪಿ ಇತಿಹಾಸದಲ್ಲೇ ನಡೆದಿರುವ ಬಹುದೊಡ್ಡ ಹಗರಣ.., ಹಿಂದೆಂದೂ ನೋಡಿರದ ಹಗರಣಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಶಾಕ್ ಆಗಿದ್ದಾರೆ. ಬಿಬಿಎಂಪಿಯಲ್ಲೀ ಹೀಗೂ ಮಾಡಬಹುದಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ ಪಾಲಿಕೆ ಕೆಲ ಅಧಿಕಾರಿಗಳ ಅಕ್ರಮ.
ರಾಜರಾಜೇಶ್ವರಿ ನಗರ ವಲಯದ ವಾರ್ಡ್ ಒಂದರಲ್ಲೇ ಬರೋಬ್ಬರಿ 808 ಸ್ವತ್ತುಗಳಿಗೆ ನಕಲಿ ಎ ಖಾತಾ ಮಾಡಿಕೊಡಲಾಗಿದೆ. ಬಿಬಿಎಂಪಿ ಇತಿಹಾಸಲ್ಲಿ ನಡೆದಿರುವ ಈ ಬೃಹತ್ ಹಗರಣವನ್ನ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಿದ್ದಾರೆ.
ಒಂದೇ ವಾರ್ಡಿನಲ್ಲಿ ಇಷ್ಟು ಬೃಹತ್ ಪ್ರಮಾಣದಲ್ಲಿ ನಕಲಿ ಎ ಖಾತಾಗಳನ್ನ ನೀಡಿರುವುದು ಇದೇ ಮೊದಲ ಬಾರಿಗೆ. ರಾಜರಾಜೇಶ್ವರಿ ನಗರದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಈ ಅಕ್ರಮ ನಡೆದಿದ್ದು, ಕಚೇರಿಯ ಕೆಲಸದ ಅವಧಿಯಲ್ಲಿ ಬ್ರೋಕರ್ ( ಮಧ್ಯವರ್ತಿ) ಗಳಿಗೆ ಬಿಬಿಎಂಪಿ ಅಧಿಕಾರಿಗಳೂ ಸಾಥ್ ನೀಡಿದ್ದಾರೆ.
ವಾರ್ಡ್ ನಂಬರ್ 160 ರ ವ್ಯಾಪ್ತಿಯ ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಭಾಗದಲ್ಲಿ ನಡೆದಿರುವ ಹಗರಣ ಇದಾಗಿದ್ದು, ನಕಲಿ ಭೂ ಪರಿವರ್ತನಾ ಆದೇಶ ಪತ್ರಗಳನ್ನು ಲಗತ್ತಿಸಿ `ಎ’ ಖಾತಾಗಳನ್ನು ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ. ಹೀಗೆ ನಕಲಿ ಎ ಖಾತಾ ಮಾಡಿಕೊಟ್ಟಿದ್ದರಿಂದ ಸುಮಾರು ಇಪ್ಪತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ಪಾಲಿಕೆಗೆ ನಷ್ಟ ಉಂಟು ಮಾಡಿದ್ದಾರೆ ಎಂದಿರುವ ರಮೇಶ್, ರಾಜರಾಜೇಶ್ವರಿ ನಗರದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ದಾಖಲೆಗಳನ್ನ ವೀಕ್ಷಣೆ ಮಾಡುತ್ತಿರುವ ಮಧ್ಯವರ್ತಿಗಳ ಫೋಟೋ ಸಮೇತ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ.
ಮಧ್ಯವರ್ತಿ (Broker) ಗಳಾದ ಯಶವಂತ್ ಕುಮಾರ್, ವಿಜಯ್ ಕುಮಾರ್, ಮುತ್ತುರಾಜ್ ಇಂತಹವರು ಪಾಲಿಕೆಯ ಅಧಿಕಾರಿಗಳ ಆಸನಗಳಲ್ಲಿ ಕುಳಿತು ಪಾಲಿಕೆಯ ಕಡತಗಳನ್ನು ಪರಿಶೀಲಿಸುವ ಮತ್ತು ತಿದ್ದುವ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿರೋದು ಯಾಕೆ ಎಂದೂ ಪ್ರಶ್ನೆ ಮಾಡಿದ್ದಾರೆ. ಮಧ್ಯವರ್ತಿಗಳಿಗೆ ARO ಅರುಣ್ ಕುಮಾರ್, RI ಗಣೇಶ್, FDA ಓಂಕಾರಮೂರ್ತಿ, ವಾಟರ್ ಮ್ಯಾನ್ ಮೂರ್ತಿ ಅಲಿಯಾಸ್ ಕೆಂಚೇನಹಳ್ಳಿ ಮೂರ್ತಿ ಮತ್ತು RR ನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್ FDA ಓಂಕಾರಮೂರ್ತಿ ಸಾಥ್ ಕೊಟ್ಟಿದ್ದಾರೆ ಎಂದು ದೂರಿದ್ದಾರೆ ರಮೇಶ್.
ಪ್ರಭಾವಿ ಬಿಲ್ಡರ್ ಹಾಗೂ ಲ್ಯಾಂಡ್ ಡೆವಲಪ್ಪರ್ಸ್ ಜತೆ ಶಾಮೀಲಾಗಿ ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದರ ಕುರಿತಂತೆ ಈ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರಿಗೂ ದೂರು ನೀಡಲಾಗಿತ್ತು. ಆದರೆ ಅವ್ರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ದಾಖಲೆ ಸಮೇತ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳು ದಾಖಲು.ಆರೋಪದ ಮೇಲೆ ದೂರು ಸಲ್ಲಿಕೆಯಾಗಿದೆ.
ಸದ್ಯ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.