ಬೆಂಗಳೂರು, (www.thenewzmirror.com);
ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಊಟದಲ್ಲಿ ಹುಳು ಕಂಡು ಬಂದಿದೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಬೆಂಗಳೂರು ವಿವಿ ಸ್ಪಷ್ಟನೆ ಕೊಟ್ಟಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿದ್ದರೂ, ಹಾಸ್ಟೆಲ್ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಡುತ್ತದೆ. ವಿದ್ಯಾರ್ಥಿ ನಿಲಯದ ಉಟೋಪಚಾರ ಅಲ್ಲಿನ ವ್ಯವಸ್ಥೆ ಹಾಗೂ ನಿರ್ವಹಣೆಯನ್ನೂ ಇಲಾಖೆಯೇ ಮಾಡುತ್ತಿದೆ ಎಂದು ವಿವಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಹಾಸ್ಟೆಲ್ ನಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಅವ್ಯವಸ್ಥೆ ಎಂದು ಸುದ್ದಿ ಬಿತ್ತರಿಸಿರುವುದು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಉಂಟಾಗುವ ವಿಷಯವಾಗಿದೆ. ಬೆಂಗಳೂರು ವಿವಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಪಷ್ಟೀಕರಣ ನೀಡುತ್ತಿರುವುದಾಗಿ ವಿವಿ ತಿಳಿಸಿದೆ.