ಬೆಂಗಳೂರು, (www.thenewzmirror.com);
ಪ್ರತಿ ವರ್ಷ ಡಿಸೆಂಬರ್ 26ರಂದು ನಡೆಯುವ ಟೆಸ್ಟ್ ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ (Boxing Day) ಪಂದ್ಯಗಳೆಂದೇ ಕರೆಯುವುದೇಕೆ? ಕ್ರಿಕೆಟ್ ಗೂ ಬಾಕ್ಸಿಂಗ್ ಗೂ ಏನಾದರೂ ಸಂಬಂಧವಿದ್ಯಾ..? ಅಂತೆಲ್ಲಾ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುತ್ತಿದೆ. ಈ ಎಲ್ಲಾ ಪ್ರಶ್ನಗಳಿಗೆ ಉತ್ತರ ನಿಮ್ಮ ನ್ಯೂಝ್ ಮಿರರ್ ನೀಡುತ್ತಿದೆ.
ಬಾಕ್ಸಿಂಗ್ ಗೂ ಕ್ರಿಕೆಟ್ಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಬಾಕ್ಸಿಂಗ್ ಡೇ ಟೆಸ್ಟ್ ಎಂಬುದು ಕ್ರಿಸ್‌ಮಸ್‌ನ ಮರುದಿನ ಅಂದರೆ ಡಿಸೆಂಬರ್ 26 ರಂದು ನಡೆಯುವ ಟೆಸ್ಟ್ ಪಂದ್ಯ. ಸಾಮಾನ್ಯವಾಗಿ ಡಿ. 25 ರ ಕ್ರಿಸ್ಮಸ್ ದಿನದಂದು ರಜೆಯಿಲ್ಲದೆ ಕೆಲಸ ಮಾಡಿವರಿಗೆ ಮಾರನೇ ದಿನವನ್ನ ಅರ್ಪಿಸಲಾಗುತ್ತದೆ. ಕ್ರಿಸ್ಮಸ್ ದಿನದಂದು ಕೆಲಸ ಮಾಡಿದವರಿಗೆ ಕೃತಜ್ಞತೆ ತಿಳಿಸಲು ಉಡುಗೊರೆ ನೀಡುತ್ತಾರೆ. ಈ ಉಡುಗೊರೆಗಳನ್ನು ಕ್ರಿಸ್ಮಸ್ ಮರುದಿನ ಓಪನ್ ಮಾಡುವ ಕಾರಣ ಬಾಕ್ಸಿಂಗ್ ಡೇ ಎನ್ನುತ್ತಾರೆ. ಹಾಗಾಗಿ ಡಿಸೆಂಬರ್ 26ರಂದು ನಡೆಯುವ ಪಂದ್ಯಗಳಿಗೆ ಬಾಕ್ಸಿಂಗ್ ಡೇ ಎಂದೇ ಕರೆಯುತ್ತಾರೆ.
ಹಾಗೆನೇ ಇನ್ನೊಂದು ಇತಿಹಾಸದ ಪ್ರಕಾರ 1800ರ ದಶಕದಲ್ಲಿ ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ಕೆಳಮಟ್ಟದ ಬ್ರಿಟಿಷ್ ಸಮಾಜದ ಸೇವಕರು ಕ್ರಿಸ್ಮಸ್ ವೇಳೆ ತಮ್ಮ ಯಜಮಾನರ ಕೈಯಿಂದ ಆಯ್ಕೆ ಮಾಡಿದ ಉಡುಗೊರೆಗಳನ್ನು ಬಹುಮಾನವಾಗಿ ಪಡೆದರು ಎನ್ನಲಾಗುತ್ತದೆ. ಕೊಟ್ಟ ಉಡುಗೊರೆಗಳನ್ನು ‘ಕ್ರಿಸ್ಮಸ್ ಬಾಕ್ಸ್’ ಎನ್ನಲಾಯಿತು. ಅದರ ಮರುದಿನ ತೆರೆಯಲಾದ ಬಾಕ್ಸ್ಗಳನ್ನು ಬಡವರಿಗೆ ನೀಡಲಾಗಿತ್ತು. ಆ ದಿನವನ್ನು ‘ಬಾಕ್ಸಿಂಗ್ ಡೇ’ ಎಂದು ಕರೆದರು.
ಬಾಕ್ಸಿಂಗ್ ಡೇ ಟೆಸ್ಟ್‌ಗಳ ಇತಿಹಾಸ
ಬಾಕ್ಸಿಂಗ್ ಡೇ ಕ್ರಿಕೆಟ್ ಟೆಸ್ಟ್ ಮೊದಲು ಆರಂಭವಾಗಿದ್ದು 1892ರಲ್ಲಿ. ಆ ವರ್ಷ ಎಂಸಿಜಿ ಶೆಫೀಲ್ಡ್ ಶೀಲ್ಡ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ಅಂತಾರಾಷ್ಟ್ರೀಯ ಬಾಕ್ಸಿಂಗ್ ಡೇ ಟೆಸ್ಟ್ 1950ರಲ್ಲಿ ಆರಂಭಗೊಂಡಿದ್ದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ. 1980ರಿಂದ ಆಸ್ಟ್ರೇಲಿಯಾ ಪ್ರತಿ ವರ್ಷ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಡಿ 26 ರಿಂದ ಪ್ರಾರಂಭಿಸುತ್ತದೆ. ಕೇವಲ ಮೂರು ಬಾರಿ ಮಾತ್ರ ಕ್ರಿಸ್‌ಮಸ್‌ಗೆ ಮೊದಲು ಟೆಸ್ಟ್ ಪ್ರಾರಂಭವಾಗಿತ್ತು. 1984, 1988 ಮತ್ತು 1994 ರಲ್ಲಿ ಡಿಸೆಂಬರ್ 22ರಂದು ಬಾಕ್ಸಿಂಗ್ ಡೇ ಪಂದ್ಯಗಳು ನಡೆದಿದ್ದವು.
ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಭಾರತದ ಇತಿಹಾಸ
ಭಾರತ ಇದುವರೆಗೂ 14 ಬಾಕ್ಸಿಂಗ್ ಡೇ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಆದರೆ ಗೆದ್ದಿದ್ದು 4 ಮಾತ್ರ. ಹಾಗಾಗಿ ಈ ಬಾರಿಯೂ ಗೆಲ್ಲುತ್ತಾ ಎಂಬ ಕುತೂಹಲ ಹೆಚ್ಚಾಗಿದೆ. ಕೊನೆಯ ಬಾರಿ ಭಾರತ ಬಾಕ್ಸಿಂಗ್ ಡೇ ಟೆಸ್ಟ್ ಗೆಲುವು ಸಾಧಿಸಿದ್ದು ಕೊಹ್ಲಿಯ ನಾಯಕತ್ವದಲ್ಲಿ ಅನ್ನೋದು ಮತ್ತೊಂದು ವಿಶೇಷತೆ.
ದಕ್ಷಿಣ ಆಫ್ರಿಕಾ ವಿರುದ್ಧದ (South Africa vs India) ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಇಂದು ಚಾಲನೆ ಸಿಕ್ಕಿದೆ, ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರಮುಖ ಆಟಗಾರರ ಇತಿಹಾಸ ಯಾವ ರೀತಿ ಇದೆ ಅನ್ನೋದನ್ನ ನೋಡುವುದಾದರೆ..,
= ರೋಹಿತ್ ಶರ್ಮಾ: ಈವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 123 ರನ್ ಗಳಿಸುವಲ್ಲಿ ಯಶಸ್ವಿಯಾದ್ದಾರೆ. ಹರಿಣಗಳ ತವರಲ್ಲಿ ಹಿಟ್‌ಮ್ಯಾನ್ ಬ್ಯಾಟ್ ಅಷ್ಟಾಗಿ ಸದ್ದು ಮಾಡಿಲ್ಲ.
= ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಒಟ್ಟು ಏಳು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಇಲ್ಲಿ ಅವರು ಎರಡು ಶತಕ ಮತ್ತು ಮೂರು ಅರ್ಧಶತಕಗಳ ಸಹಿತ ಬರೋಬ್ಬರಿ 719 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕ್ಲಾಸಿ ಕೊಹ್ಲಿ ಸರಾಸರಿ 51.35
= ಕೆಎಲ್ ರಾಹುಲ್: ದಕ್ಷಿಣ ಆಫ್ರಿಕಾದಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್, ಇದೇ ಸೆಂಚುರಿಯನ್ ಮೈದಾನದಲ್ಲಿ ಒಂದು ಶತಕ ಸಿಡಿಸಿದ್ದಾರೆ. ಅವರ ಒಟ್ಟು ರನ್ ಸಂಗ್ರಹ 256. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ವಿಕೆಟ್ ಕೀಪರ್
= ಆರ್ ಅಶ್ವಿನ್: ದಕ್ಷಿಣ ಆಫ್ರಿಕಾದಲ್ಲಿ ಆರು ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಲ್ಲಿ ಅವರು ಬ್ಯಾಟಿಂಗ್‌ನಲ್ಲಿ 197 ರನ್ ಗಳಿಸುವುದರೊಂದಿಗೆ 10 ವಿಕೆಟ್ ಕಬಳಿಸಿದ್ದಾರೆ.
= ರವೀಂದ್ರ ಜಡೇಜಾ: ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯ ಮಾತ್ರ ಆಡಿದ್ದಾರೆ.
= ಜಸ್ಪ್ರೀತ್ ಬುಮ್ರಾ: ದಕ್ಷಿಣ ಆಫ್ರಿಕಾದಲ್ಲಿ ನಡೆದ ಆರು ಪಂದ್ಯಗಳಲ್ಲಿ ಆಡಿರುವ ಬುಮ್ರಾ ಬ್ಯಾಟಿಂಗ್‌ನಲ್ಲಿ 48 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ.