ಬೆಂಗಳೂರು, (www.thenewzmirror.com) ; ತುಣುಕು ಕ್ರಿಕೆಟ್ ನ ಬಿಸಿ ಜೋರಾಗುತ್ತಿದೆ. ಈಗಾಗಲೇ ಟಿ20 ಟೂರ್ನಿಯ ಪಂದ್ಯಗಳು ಭರ್ಜರಿಯಾಗೇ ಆರಂಭಗೊಂಡಿವೆ. ಈಗಾಗಲೇ ಬಲಿಷ್ಠ ತಂಡಗಳು ಗೆಲುವಿನ ಹಾದಿ ಕಂಡುಕೊಂಡಿದ್ದು, ಇನ್ನೊಂದಿಷ್ಟು ತಂಡಗಳು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಇದೆಲ್ಲದರ ನಡುವೆ ಟೂರ್ನಿಯಲ್ಲಿ ಇನ್ನೂ ಒಂದೂ ಪಂದ್ಯವನ್ನಾಡದ ಪಾಕಿಸ್ತಾನ ತಂಡ ವಿವಾದವನ್ನ ತನ್ನ ಮೇಲೆ ಎಳೆದುಕೊಂಡಿದೆ. ಹಣ ಮಾಡೋಕೆ ಹೋಗಿ ಕ್ರಿಕೆಟ್ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿದೆ.
ಜೂನ್ 6 ರಂದು ಯುಎಸ್ ಎ ವಿರುದ್ಧ ತನ್ನ ಮೊದಲ ಪಂದ್ಯವನ್ನ ಪಾಕಿಸ್ತಾನ ಆಡುತ್ತಿದೆ. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಸಾಮರ್ಥ್ಯ ತೋರಿಸಲಿದೆ. ಇದಕ್ಕೂ ಮೊದಲೂ ಔತಣಕೂಟದ ಹೆಸರಲ್ಲಿ ಹಣ ಮಾಡೋಕೆ ಮುಂದಾಗಿದೆ ಅನ್ನೋ ವರದಿಗಳು ಕೇಳಿ ಬರುತ್ತಿವೆ.
ಪಾಕಿಸ್ತಾನ ಆಟಗಾರರು ತನ್ನ ಮೊದಲ ಪಂದ್ಯಕ್ಕೂ ಮುನ್ನ ಅಮೆರಿಕದಲ್ಲಿ ಖಾಸಗಿ ಔತಣಕೂಟ ಏರ್ಪಡಿಸಿದ್ದರು. ವಿಶೇಷ ಅಂದ್ರೆ ಈ ಔತಣಕೂಟದಲ್ಲಿ ಅಭಿಮಾನಿಗಳು ಪಾಲ್ಗೊಳ್ಳೋಕೆ ಅವಕಾಶವನ್ನೂ ನೀಡಲಾಗಿತ್ತು. ಯಾವ ಅಭಿಮಾನಿ ಔತಣಕೂಟಕ್ಕೆ ಬರ್ತಾರೋ ಅಂಥವ್ರು 25 ಯುಸ್ ಡಾಲರ್ ನೀಡಬೇಕೆಂದು ಹಣ ನಿಗದಿಮಾಡಲಾಗಿತ್ತು. ಇದು ಸಾಕಷ್ಟು ಟೀಕೆ ಹಾಗೂ ವಿವಾದಕ್ಕೆ ಕಾರಣವಾಗುತ್ತಿದೆ.
ಹೀಗೆ ವಿಶ್ವಕಪ್ ಆಡಲು ಪರದೇಶಕ್ಕೆ ಹೋದ ತಂಡವೊಂದು ಔತಣಕೂಟ ಏರ್ಪಡಿಸಿ ಅದಕ್ಕೆ ಬರೋ ಅಭಿಮಾನಿಗಳಿಗೆ ಹಣ ನಿಗದಿಮಾಡಿರೋದು ಹಾಗೆನೇ ಆ ಮೂಲಕ ಹಣಗಳಿಸೋಕೆ ಹೊರಟಿರೋದನ್ನ ಮಾಜಿ ಕ್ರಿಕೆಟ್ ಆಟಗಾರರು ಟೀಕಿಸಿದ್ದಾರೆ. ತಮ್ಮನ್ನು ಭೇಟಿಯಾಗಲು ಪಾಕ್ ಆಟಗಾರರು ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿರೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಅಷ್ಟೇ ಅಲ್ದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧವೂ ಕಿಡಿಕಾರಿದ್ದಾರೆ ಮಾಜಿ ಆಟಗಾರರು. ಕ್ರಿಕೆಟ್ ಆಡಲು ತೆರಳಿದ ತಂಡವೊಂದು ಔತಣಕೂಟ ಏರ್ಪಡಿಸಿದ ಅದರಿಂದ ದುಡ್ಡುಗಳಿಸಲು ಮುಂದಾಗುತ್ತಿರುವ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಪಾಕ್ ಕ್ರಿಕೆಟ್ ಮಂಡಳಿಯ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಆಟಗಾರ ರಶೀದ್ ಲತೀಫ್, ಇಂತಹ ಐಡಿಯಾ ಕೊಟ್ಟದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪ್ರಕಾರ, ನಮ್ಮ ಆಟಗಾರರನ್ನು ಭೇಟಿ ಮಾಡಲು ತಗಲುವ ವೆಚ್ಚ ಕೇವಲ 25 ಯುಎಸ್ ಡಾಲರ್. ಇದು ನಿಜಕ್ಕೂ ನಾಚಿಕೆಗೇಡು. ಪಾಕಿಸ್ತಾನ್ ಕ್ರಿಕೆಟ್ ಹೆಸರಿನಲ್ಲಿ ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಒಟ್ಟಿನಲ್ಲಿ ಟಿ20 ವಿಶ್ವಕಪ್ ಆಡಲು ತೆರಳಿರುವ ಪಾಕಿಸ್ತಾನ ತಂಡದ ಆಟಗಾರರು ಅಭಿಮಾನಿಗಳ ಭೇಟಿಗಾಗಿ ಔತಣಕೂಟದ ಆಫರ್ ನೀಡಿ ಹಣ ಮಾಡಲು ಮುಂದಾಗಿರುವುದು ವಿಪರ್ಯಾಸ.