ಬೆಂಗಳೂರು, (www.thenewzmirror.com) ;
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಒಂದು ವೋಟ್ ಲೀಡ್ ಪಡೆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಆ ಮೂಲಕ ಲೋಕ ಫಲಿತಾಂಶಕ್ಕಾಗಿ ತಮ್ಮ ಸ್ಥಾನವನ್ನೇ ಶಾಸಕ ಪ್ರದೀಪ್ ಈಶ್ವರ್ ಪಣಕ್ಕಿಟ್ಟಿದ್ದರು. ಚುನಾವಣೆಗೂ ಮೊದಲು ಈ ಹೇಳಿಕೆ ಕೊಟ್ಟಿದ್ದ ಪ್ರದೀಪ್ ಈಶ್ವರ್, ಅಂದುಕೊಂಡಂತೆ ನಡೆದುಕೊಳ್ತಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು. ನಿರೀಕ್ಷೆಯಂತೆಯೇ ಮಾಜಿ ಸಚಿವ ಡಾ. ಕೆ. ಸುಧಾಕರ್, ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ವಿರುದ್ದ 1,62,099 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಮತಗಳ ಲೀಡ್ ಪಡೆದಿದ್ದಾರೆ ಡಾ. ಕೆ. ಸುಧಾಕರ್. ಯಾವಾಗ ಫಲಿತಾಂಶ ಹೊರಬಂತೋ ಬಿಜೆಪಿ ಮುಖಂಡರಾದಿಯಾಗಿ ಎಲ್ಲರೂ ಪ್ರದೀಪ್ ಈಶ್ವರ್ ಯಾವಾಗಪ್ಪ ರಾಜೀನಾಮೆ ಕೊಡ್ತೀರಾ ಎನ್ನುವ ಪ್ರಶ್ನೆಯನ್ನ ಮಾಡುತಿದ್ರು. ಇದೆಲ್ಲ ಬೆಳವಣಿಗೆಳ ನಡುವೆ ಶಾಸಕ ಪ್ರದೀಪ್ ಈಶ್ವರ್ ಅವರ ಲೆಟರ್ ಹೆಡ್ ನಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಎಂಬ ಪತ್ರ ಭಾರೀ ವೈರಲ್ ಆಗ್ತಿದೆ.
ಅಷ್ಟಕ್ಕೂ ಪ್ರದೀಪ್ ಈಶ್ವರ್ ಈ ರೀತಿ ಹೇಳೋದಿಕ್ಕೆ ಒಂದು ಕಾರಣವಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವರಾಗಿದ್ದ ಸುಧಾಕರ್ ಅವ್ರನ್ನ ಸೋಲಿಸಿದ್ರು. ಅದೇ ಉತ್ಸಾಹದಲ್ಲಿ ಲೋಕಸಭಾ ಚುನಾವಣೆಯಲ್ಲೂ ಸುಧಾಕರ್ ಅವರನ್ನು ಸೋಲಿಸುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಧಾಕರ್ ಒಂದು ವೋಟ್ ಲೀಡ್ ಪಡೆದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆಯನ್ನ ಕೊಟ್ಟಿದ್ರು.
ಹಾಗಿದ್ರೆ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಲೀಡ್ ಸಿಕ್ಕಿದೆ ಅನ್ನೋದನ್ನ ನೋಡೋದಾದ್ರೆ.., ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 20,941 ಮತಗಳು ಲೀಡ್ ಬಂದಿವೆ. ಉಳಿದಂತೆ ಅತಿ ಹೆಚ್ಚು ಲೀಡ್ 33,255 ಮತಗಳು ನೆಲಮಂಗಲ ಕ್ಷೇತ್ರದಿಂದ ಬಂದಿದೆ. ದೇವನಹಳ್ಳಿಯಲ್ಲಿ ಬಿಜೆಪಿಗೆ 5231 ಹಾಗೂ ಗೌರಿಬಿದನೂರು ಕ್ಷೇತ್ರದಲ್ಲಿ 483 ಮತಗಳ ಲೀಡ್ ಬಿಜೆಪಿಗೆ ಸಿಕ್ಕಿದೆ. ಆ ಮೂಲಕ ಕಾಂಗ್ರೆಸ್ ಶಾಸಕರಿದ್ದೂ ಬಿಜೆಪಿ ಬಂಪರ್ ಅಂತರದ ಗೆಲುವು ದಾಖಲಿಸಿ ದಾಖಲೆ ಬರೆದಿದೆ.
ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದೇನು..?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್, ಕಾಂಗ್ರೆಸ್ಗಿಂತ 1 ಮತಕ್ಕಿಂತ ಹೆಚ್ಚು ಪಡೆದುಕೊಂಡರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಅಲ್ಲದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು.
ಡಾ. ಕೆ.ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ವಿರುದ್ದ 1,62,099 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಫಲಿತಾಂಶದ ಬಳಿಕ ರಾಜೀನಾಮೆಗೆ ಒತ್ತಡಗಳು ಕೇಳಿ ಬರುತ್ತಿದ್ದಂತೆ ಪ್ರದೀಪ್ ಈಶ್ವರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಕಾರಣ ಅವರ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಕುರಿತಂತೆ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಅವ್ರೇ ಸ್ಪಷ್ಟಪಡಿಸ್ಬೇಕಿದೆ.