ಬೆಂಗಳೂರು(www.thenewzmirror.com): ಬಿಜೆಪಿಯ ಸ್ಥಾಪನಾ ದಿನವಾದ ಏಪ್ರಿಲ್ 6ರಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾವಿರಾರು ಜನರನ್ನು ಸೇರಿಸಿ ಬಿಜೆಪಿ ಧ್ವಜ ಹಾರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರು, ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು ಸೇರಿ ಎಲ್ಲರೂ ಬರಲಿದ್ದಾರೆ. ಏ.6ರಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಾರ್ಯಕರ್ತರ ಸಮಾವೇಶ ಮಾಡಿ ಬಿಜೆಪಿ ಸ್ಥಾಪನಾ ದಿನವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಇಡೀ ರಾಜ್ಯಾದ್ಯಂತ ರಾಜ್ಯದ ಎಲ್ಲ ಜಿಲ್ಲಾ ಕಚೇರಿಗಳು, ಎಲ್ಲ ಮಂಡಲ ಕಚೇರಿಗಳಲ್ಲಿ ಕಾರ್ಯಕ್ರಮ ಇದೆ. ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಲಿದ್ದೇವೆ. ರಾಜ್ಯದಲ್ಲಿ ಸುಮಾರು 58 ಸಾವಿರ ಬೂತ್‍ಗಳಿದ್ದು, ಕನಿಷ್ಠ 50 ಸಾವಿರ ಬೂತ್‍ಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಏ.7ರಿಂದ 12ರವರೆಗೆ ರಾಜ್ಯಾದ್ಯಂತ ದೇವಸ್ಥಾನಗಳ ಸ್ವಚ್ಛತೆ, ಸ್ಲಂಗಳ ಸ್ವಚ್ಛತೆ, ಕೆರೆಗಳ ಸ್ವಚ್ಛತೆ, ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ವಿತರಣೆ ನಡೆಸಲಾಗುವುದು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸುತ್ತೇವೆ ಎಂದು ತಿಳಿಸಿದರು.
ಇದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ವರ್ಷ. ಈ ಹಿನ್ನೆಲೆಯಲ್ಲಿ ಈ ವರ್ಷ ವಿಜೃಂಭಣೆಯಿಂದ ಬಿಜೆಪಿಯ ಸ್ಥಾಪನಾ ದಿನವನ್ನು ರಾಜ್ಯಾದ್ಯಂತ ಮಾಡುತ್ತೇವೆ. ಇದಕ್ಕಾಗಿ ಒಂದು ಸಮಿತಿ ರಚಿಸಿದ್ದು, ಅದರ ಸಂಚಾಲಕರಾಗಿ ನಾನು, ರವಿಕುಮಾರ್, ಸಹ ಸಂಚಾಲಕರಾಗಿ ಭಾರತಿ ಶೆಟ್ಟಿ, ಎಂಎಲ್‍ಸಿ ಅರುಣ್, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಅವರು ಇರುತ್ತಾರೆ ಎಂದು ವಿವರಿಸಿದರು. ಬಿಜೆಪಿ ಸ್ಥಾಪನಾ ದಿನದ ಕಾರ್ಯಕ್ರಮ ಯಶಸ್ವಿಗೆ ಮನವಿ ಮಾಡಿದರು.