ಬೆಂಗಳೂರು,(www.thenewzmirror.com);
ಎಡಚರರ ಗೋಳು ಹೇಳುವ ’ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡ್ತಿದೆ. ದಿಗಂತ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದ ಟೀಸರ್ ನೋಡಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಸಖತ್ ಆಗಿದೆ ಎಂದು ಶಿವಣ್ಣ ಟ್ವೀಟ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಎಡಗೈ ಬಳಸುವ ಜನರ ಕಥೆಯನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಮಾಡಲಾಗಿದೆ. ಇದರಲ್ಲಿ ಎಡಗೈ ಬಳಸುವವರ ಜೀವನ ಶೈಲಿ ಕುರಿತು ಹೇಳಲಾಗುವುದು. ನಟ ದಿಗಂತ್ ಮಂಚಾಲೆ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಹೊಸ ನಟಿ ಧನು ಹರ್ಷ ಅವರು ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ, ಭಜರಂಗಿ ಲೋಕಿ, ರಾಧಿಕಾ ನಾರಾಯಣ್ ಮುಂತಾದವರು ಅಭಿನಯಿಸಿದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ.
ಸಮರ್ಥ್ ಬಿ. ಕಡಕೊಳ್ ಅವರು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದು. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಈ ಸಿನಿಮಾ ಹೊಂದಿದೆ. ‘ಹೈಫನ್ ಪಿಕ್ಚರ್ಸ್’ ಮತ್ತು ‘ಗುರುದತ್ ಗಾಣಿಗ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ದಿನ ನಿತ್ಯ ಎಲ್ಲ ಕೆಲಸಕ್ಕೆ ಎಡಗೈ ಬಳಕೆ ಮಾಡುವ ಜನರ ಸಮಸ್ಯೆಗಳ ಕುರಿತು ಈ ಸಿನಿಮಾ ಮಾಡಲಾಗಿದೆ. ಪ್ರತಿ ದಿನ ಅವರು ಎದುರಿಸುವ ಸಮಸ್ಯೆಗಳನ್ನು ಆಧರಿಸಿ ಈ ಚಿತ್ರದ ಕಥೆ ಸಿದ್ಧವಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಫೆಬ್ರವರಿಯಲ್ಲಿ ಈ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದೆ. ಈ ಸಿನಿಮಾಗೆ ಅಭಿಮನ್ಯು ಸದಾನಂದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಅವರು ಸಂಭಾಷಣೆ ಬರೆದಿದ್ದಾರೆ.