ಬೆಂಗಳೂರು, (www.thenewzmirror.com);
ನಮ್ಮ ಮೆಟ್ರೋ ಇನ್ಮುಂದೆ ಚಿತ್ರರಂಗದಲ್ಲಿ ಸದ್ದು ಮಾಡಲಿದೆ. ಬೆಂಗಳೂರು ಪ್ರಯಾಣಿಕರಿಗೆ ಜೀವನಾಡಿಯಾಗಿರುವ ಬಿಎಂಆರ್ ಸಿಎಲ್ (BMRCL) ಇದೀಗ ನಿರ್ಮಾಪಕರ ಪಾಲಿನ ಟೂರಿಸ್ಟ್ ಸ್ಪಾಟ್ ಆಗಲಿದೆ. ಈಗಾಗಲೇ ಚೆನ್ನೈ ಮತ್ತು ದೆಹಲಿಯಂತೆ ಇರುವಂತೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಇನ್ನುಮುಂದೆ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ಸಿಗಲಿದ್ದು ,ಆ ಮೂಲಕ ಮೆಟ್ರೋ ರೈಲಿನಲ್ಲಿಯೂ ಲೈಟ್ಸ್, ಕ್ಯಾಮರಾ, ಆಕ್ಷನ್ ಸೌಂಡ್ ಜೋರಾಗಲಿದೆ.
ಇಷ್ಟು ದಿನ ಪ್ರಯಾಣಿಕರಿಂದ ಓಡಾಡುತ್ತಿದ್ದ ಮೆಟ್ರೋದಲ್ಲಿ ಪ್ರಯಾಣಿಕರ ಜತೆ ಸಿನೆಮಾ, ಧಾರವಾಹಿ ನಟ-ನಟಿಯರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ನಮ್ಮ ಮೆಟ್ರೋದಲ್ಲಿ ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಬೇಕೆಂದು ಕನ್ನಡ ಚಲನಚಿತ್ರೋದ್ಯಮ ಬಾ ವರ್ಷದ ಹಿಂದೆ ಬಿಎಂಆರ್ ಸಿಎಲ್ ಗೆ ಮನವಿ ಮಾಡಿತ್ತು. ಕನ್ನಡ ಚಿತ್ರೋದ್ಯಮದ ಮನವಿಗೆ ಸ್ಪಂದನೆ ಮಾಡಿರುವ ನಮ್ಮ ಮೆಟ್ರೋ ಇದೀಗ ಶೂಟಿಂಗ್ ಗೆ ಅವಕಾಶ ನೀಡಿ ಕೆಲ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.






ಯಾವೆಲ್ಲಾ ಕಂಡೀಷನ್ ಆಧಾರದ ಮೇಲೆ ಸಿನೆಮಾ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದೆ ಎಂದು ನೋಡುವುದಾದರೆ..
– ಚಿತ್ರೀಕರಣದ ಚಟುವಟಿಕೆಗಳು ಪ್ರಯಾಣಿಕರಿಗೆ ತೊಂದರೆಯಾಗಬಾರದು
– ಮೆಟ್ರೋ ರೈಲು ಅಥವಾ ನಿಲ್ದಾಣಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು
– ನಾನ್ ಪೀಕ್ ಅವರ್(ಸಮಯ)ದಲ್ಲಿ ಶೂಟಿಂಗ್ ಗೆ ಅನುಮತಿ
– ಚಿತ್ರೀಕರಣ ಸ್ಕ್ರಿಪ್ಟ್‌ನ ಅವಶ್ಯಕತೆಗಳಿಗೆ ಅನುಗುಣವಾಗಿರಬೇಕು
– ಚಿತ್ರೀಕರಣದ ಸಮಯದಲ್ಲಿ ಚಿತ್ರತಂಡಗಳ ಜತೆ ಪ್ರಯಾಣಿಕರಿಗೂ ಭದ್ರತೆ ಒದಗಿಸಬೇಕು
– ಚಿತ್ರೀಕರಣ ಸಮಯದಲ್ಲಿ ಭದ್ರತೆ ಒದಗಿಸಲು ಹೆಚ್ಚುವರಿ ಪೊಲೀಸರು ಮತ್ತು ಗೃಹರಕ್ಷಕರನ್ನು ನಿಯೋಜಿಸಬೇಕು
– ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಚಿತ್ರೀಕರಣಕ್ಕಾಗಿ ದಿನಕ್ಕೆ 6 ಲಕ್ಷ ರೂಪಾಯಿಗಳ ಶುಲ್ಕ
– ಕನ್ನಡ ಚಲನಚಿತ್ರಗಳಿಗೆ 25% ರಿಯಾಯಿತಿ
– ಕನ್ನಡ ಚಲನಚಿತ್ರಗಳು ಒಂದು ತಿಂಗಳೊಳಗೆ ಚಿತ್ರೀಕರಣದ ಕಾರ್ಯವಿಧಾನಗಳನ್ನ ಪೂರ್ಣಗೊಳಿಸಬೇಕು
– ಕನ್ನಡೇತರ ಭಾಷೆಯ ಚಲನಚಿತ್ರಗಳಿಗೆ 50 ದಿನಗಳ ಅವಧಿ
– ಚಿತ್ರೀಕರಣ ಮಾಡಲು ಆಸಕ್ತಿ ಹೊಂದಿರುವ ಚಲನಚಿತ್ರ ಮತ್ತು ಧಾರಾವಾಹಿ ತಂಡಗಳು ಈಗ BMRCL ಗೆ ಅರ್ಜಿ ಸಲ್ಲಿಸಬಹುದು.