ಬೆಂಗಳೂರು, (www.thenewzmirror.com) ;
ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಸಮಿತಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ರಾಜ್ಯದಲ್ಲಿ ಡ್ರಗ್ಸ್ ಹಾವಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದರು. ಇದರ ಜತೆಗೆ ರಾಜ್ಯದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ದುನಿಯಾ ವಿಜಯ್ ನಟನೆಯ ಭೀಮಾ ಸಿನೆಮಾದಲ್ಲಿ ಡ್ರಗ್ಸ್ ಹಾವಳಿಗೆ ಯುವ ಪೀಳಿಗೆ ಬಲಿಯಾಗುತ್ತಿರುವ ಕುರಿತಂತೆ ಎಳೆ ಎಳೆಯಾಗಿ ತೋರಿಸಿದ್ದರು. ಇದರ ಜತೆಗೆ ಡ್ರಗ್ಸ್ ಹಾವಳಿಗೆ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬರುತ್ತಿತ್ತು. ಇದರ ಭಾಗವಾಗಿ ಡ್ರಗ್ಸ್ ಹಾವಳಿ ತಡೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ 7 ಸದಸ್ಯರ ಸಮಿತಿಯನ್ನ ರಚಿಸಿ ಆದೇಶ ಹೊರಡಿಸಿದ್ದಾರೆ.
ಇದೇ ವರ್ಷ ಜನವರಿ 16 ರಂದು ಶಾಸಕ ದಿನೇಶ ಗೂಳಿಗೌಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ರಾಜ್ಯದಲ್ಲಿ ಮಾದಕ ದ್ರವ್ಯದ ಹಾವಳಿ ಹೆಚ್ಚುತ್ತಿದೆ. ಕಾಲೇಜ್‌ಗಳ ಸುತ್ತಲಿನ ಪ್ರದೇಶದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಭವಿಷ್ಯದ ಭಾರತದ ಕನಸುಗಳಾದ ಯುವ ಜನರು ದಾರಿ ತಪ್ಪುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಕ್ರಮ ವಹಿಸಬೇಕು. ಜಾಗೃತಿ ಕಾಯಕ್ರಮಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದ್ದರು.
ದಿನೇಶ್ ಗೂಳಿಗೌಡ ಪತ್ರದ ಆಧಾರದ ಮೇಲೆ ಗೆ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದರು.
ಇದರ ಮುಂದುವರೆದ ಭಾಗವಾಗಿ ವಿಧಾನ ಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಮಾದಕ ದ್ರವ್ಯ ಹಾವಳಿ ತಡೆಯಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಮಾತ್ರವಲ್ಲದೇ, ಕ್ರಮ ವಹಿಸಲು ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ಸಿಎಂ ಗೆ ಅಭಿನಂದನೆ ತಿಳಿಸಿದ ದಿನೇಶ್ ಗೂಳಿಗೌಡ
ರಾಜ್ಯದ ಜನತೆಯ ಬಗ್ಗೆ ಕಾಳಜಿಯಿಂದ ಡ್ರಗ್ಸ್ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಿದ್ದಕ್ಕೆ ಶಾಸಕ ದಿನೇಶ್ ಗೂಳಿಗೌಡ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಸಮಿತಿಯಲ್ಲಿ ಯಾರ್ಯಾರು ಇದ್ದಾರೆ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸದಸ್ಯ
ಕಂದಾಯ ಸಚಿವ ಕೃಷ್ಣ ಬೈರೇಗೌಡ ಸದಸ್ಯ
ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಸದಸ್ಯ
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸದಸ್ಯ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸದಸ್ಯ
ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಸದಸ್ಯ