ಬೆಂಗಳೂರು, (www.thenewzmirror.com) :
ವಿವಾದಗಳಿಂದಲೇ ಇರುತ್ತಿದ್ದ ಶಿಕ್ಷಣ ಇಲಾಖೆ ಪೋಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. 1 ರಿಂದ 12 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ಮೂಲ ಸೌಲಭ್ಯಗಳನ್ನು ಒಳಗೊಂಡ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದಿನ ವರ್ಷದ ವೇಳೆಗೆ ರಾಜ್ಯಾದ್ಯಂತ ಪ್ರಾರಂಭ ಮಾಡಲು ಸಿದ್ಧತೆ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವುದು ಸರಕಾರದ ಜವಾಬ್ದಾರಿ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಶ್ರಮಿಸುತ್ತಿದ್ದು, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 20 ಶಾಲೆಗಳ ಪೈಕಿ 2 ಶಾಲೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಹಾಗೂ 2 ಶಾಲೆಗಳನ್ನು ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ನಡೆಸಲ್ಪಡುತ್ತಿರುವ 16 ಸರ್ಕಾರಿ ಶಾಲೆಗಳನ್ನು ಮೇರ್ಲ್ದಜೆಗೆ ತರುವ ಯೋಜನೆ ರೂಪುಗೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಎರಡು ಗ್ರಾಮಗಳಿಗೆ ಒಂದರಂತೆ ಎರಡು ಸಾವಿರ ಕೆಪಿಎಸ್ ಶಾಲೆಗಳನ್ನು ನಿರ್ಮಿಸುವ ಗುರಿ ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ 2 ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ, ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ನೀಡಲಾಗುವುದು. ಸದರಿ ಶಾಲೆಗಳ ಮೂಲಭೂತ ಸೌಕರ್ಯಗಳಾದ ಕೊಠಡಿಗಳ ನಿರ್ಮಾಣ ಮತ್ತು ನವೀಕರಣ, ಶೌಚಾಲಯ ಸಿದ್ಧತೆ, ಕಾಂಪೌಂಡ್ ಗಳ ನಿರ್ಮಾಣ, ಕುಡಿಯುವ ನೀರಿ ವ್ಯವಸ್ಥೆ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಹಾಗೂ ಆಟದ ಮೈದಾನ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.