ಬೆಂಗಳೂರು, (www.thenewzmirror.com) ;
ರಾಜ್ಯ ಸಾರಿಗೆ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಿಕೊಳ್ಳಲು ಸೂಚನೆ ನೀಡಿರೋ ಬೆನ್ನಲ್ಲೇ ಡಿಜಿಟಲೀಕರಣಕ್ಕೆ ಒತ್ತು ನೀಡಲು ಹೊರಟಿದೆ.
ಸಾರಿಗೆ ಇಲಾಖೆಯು ಕ್ಯೂಆರ್ ಕೋಡ್‌ಗಳು ಮತ್ತು ಮೈಕ್ರೋಚಿಪ್‌ಗಳೊಂದಿಗೆ ಎಂಬೆಡೆಡ್ ಸ್ಮಾರ್ಟ್ ಕಾರ್ಡ್‌ಗಳನ್ನು ಪರಿಚಯಿಸುವ ಮೂಲಕ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತು ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ) ನೀಡಲು ಮುಂದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ದೇಶಾದ್ಯಂತ DL ಮತ್ತು RC ಸ್ವರೂಪವನ್ನೇ ಇದು ಹೊಂದಲಿದೆ. ಹೊಸ ಮಾದರಿಯ ಡಿಎಲ್ ಹಾಗೂ ಆರ್ ಸಿ ಕಾರ್ಡ್ ನೀಡುವ ನಿಟ್ಟಿನಲ್ಲಿ ಹೊಸ ಟೆಂಡರ್ ಕರೆದಿದ್ದು, ಶೀಘ್ರದಲ್ಲೇ ಹೊಸ ಕಂಪನಿ ಇದರ ಜವಾಬ್ದಾರಿ ಹೊರಲಿದೆ.
ಟೆಂಡರ್ ಪಡೆದ ಸಂಸ್ಥೆ ನೀಡುವ ಹೊಸ ಮಾದರಿಯ ಡಿಎಲ್ ಹಾಗೂ ಆರ್ ಸಿ ಕಾರ್ಡ್ ಗಳಲ್ಲಿ ಚಿಪ್ ಹಾಗೂ ಕ್ಯೂ ಆರ್ ಕೋಡ್ ಇರಲಿದೆ. ಹಾಲಿ ನೀಡುತ್ತಿರುವ ಕಾರ್ಡ್ ಗಳಿಗೆ ಚಿಪ್ ಅಳವಡಿಕೆ ಮಾಡಲಾಗುವುದು ಎಂದು ಆರ್ ಟಿಓ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಗುತ್ತಿಗೆ ಪಡೆದಿರೋ ಕಂಪನಿಯ ಅವಧಿ ಈಗಾಗಲೇ ಮುಕ್ತಾಯವಾಗಿದೆ. ಹೊಸ ಟೆಂಡರ್ ಅಂತಿಮವಾಗುವವರೆಗೂ ಹಳೆ ಸಂಸ್ಥೆನೇ ಆರ್ ಸಿ ಹಾಗೂ ಡಿಎಲ್ ಕಾರ್ಡ್ ವಿತರಣೆ ಮಾಡಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಯೋಗೇಶ್ ಎ.ಎಂ. ಮಾಹಿತಿ ನೀಡಿದ್ದಾರೆ.
ಹೇಗಿರಲಿದೆ ಕ್ಯೂಆರ್ ಕೋಡ್ ಇರುವ ಡಿಎಲ್ ಹಾಗೂ ಆರ್ ಸಿ ಕಾರ್ಡ್..?
ಹೊಸ ರೂಪದಲ್ಲಿ ಪರಿಚಯಿಸಲಾಗುತ್ತಿರುವ ಕ್ಯೂ ಆರ್ ಕೋಡ್ ಡಿಎಲ್ ಹಾಗೂ ಆರ್ ಸಿ ಕಾರ್ಡಿನಲ್ಲಿ ಹಲವಾರು ಹೊಸ ವೈಶಿಷ್ಟ್ಯತೆ ಕಾಣಬಹುದಾಗಿದೆ. ಚಾಲಕನ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ರಕ್ತದ ಗುಂಪಿನ ಜೊತೆಗೆ, ಹೊಸ ಡಿಎಲ್ ಈಗ ಹೊಂದಿರುವವರು ಅಂಗಾಂಗ ದಾನಿಯೇ ಎಂದು ಸೂಚಿಸುತ್ತದೆ. ಈ ಎಲ್ಲ ವಿಷಯಗಳನ್ನು ಚಿಪ್‌ನಲ್ಲಿ ಅಳವಡಿಸಿದರೆ, ಕ್ಯೂ ಆರ್ ಕೋಡ್ ಜತೆಯಲ್ಲಿ ತುರ್ತು ಸಂಪರ್ಕ ಸಂಖ್ಯೆಯನ್ನು ಸಹ ಅಳವಡಿಸಲಾಗಿರುತ್ತದೆ.
ಇನ್ನು ಆರ್‌ಸಿ ಕಾರ್ಡ್‌ನ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಕಾರ್ಡ್ ಅಂತ್ಯಗೊಳ್ಳುವ ದಿನಾಂಕ, ಚಾರ್ಸಿ, ಎಂಜಿನ್ ಸಂಖ್ಯೆ ಇರಲಿದೆ. ಕಾರ್ಡ್ ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಆಸನ ಸಾಮರ್ಥ್ಯದ ಮಾಹಿತಿಯನ್ನು ನಮೂದು ಮಾಡಲಾಗಿರುತ್ತದೆ.
ಪ್ರಸ್ತುತ, DL ಮತ್ತು RC ಒಂದು ಬದಿಯಲ್ಲಿ ಎಲ್ಲಾ ವಿವರಗಳನ್ನು ಪ್ರದರ್ಶಿಸುತ್ತದೆ, ಹಿಮ್ಮುಖದಲ್ಲಿ ಮೈಕ್ರೋಚಿಪ್ ಇದೆ. ನವೀಕರಿಸಿದ DL ಮತ್ತು RC ಎರಡೂ ಬದಿಗಳಲ್ಲಿ ಮಾಹಿತಿಯನ್ನು ಮುದ್ರಿಸುತ್ತದೆ ಮತ್ತು ಲೇಸರ್ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತದೆ.