ಬೆಂಗಳೂರು,(www.thenewzmirror.com) ;
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಇವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕು. ಸಿಎಂ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು, ರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಎಂದು ಆಪ್ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.
ಬೆಳಗಾವಿಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿ, ದೆಹಲಿ, ಜಾರ್ಖಂಡ್ ಮತ್ತಿತರ ರಾಜ್ಯಗಳಲ್ಲಿ ಬಿಜೆಪಿ ಹೂಡಿದ ಕುತಂತ್ರವನ್ನೇ ಕರ್ನಾಟಕದಲ್ಲೂ ಮಾಡಲು ಹೊರಟಿದೆ. ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಖಾಸಗಿ ವ್ಯಕ್ತಿಯ ದೂರನ್ನು ಆಧರಿಸಿ ತಮ್ಮ ಹುದ್ದೆಯ ಗೌರವವನ್ನೂ ಲೆಕ್ಕಿಸದೆ ಬಿಜೆಪಿಗರ ಒತ್ತಡಕ್ಕೆ ರಾಜ್ಯಪಾಲರು ಮಣಿದಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ರು.
ಬಿಜೆಪಿ ಮತ್ತು ಮಿತ್ರಪಕ್ಷದ ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಬಾಕಿ ಉಳಿದಿದ್ದರೂ ರಾಜ್ಯಪಾಲರು ಯಾಕೆ ತಲೆ ಕೆಡಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದರು.
ಎಚ್.ಡಿ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆ, ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆ, ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆ, ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ. ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ನಂತೆ ವರ್ತಿಸಬಾರದು. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಉನ್ನತ ನಾಯಕರನ್ನು ವಿನಾ ಕಾರಣ ಬಂಧನದಲ್ಲಿರಿಸಿ ಕಿರುಕುಳ ನೀಡುವ ಮೂಲಕ ಎಎಪಿ ಪಕ್ಷವನ್ನು ದುರ್ಬಲಗೊಳಿಸಬಹುದು ಎಂದು ಮೋದಿ-ಶಾ ಜೋಡಿ ಗ್ರಹಿಸಿದ್ದರು. ಆದರೆ ಪಕ್ಷವು ಹಿಂದಿಗಿಂತಲೂ ಪ್ರಬಲಗೊಂಡಿದ್ದು, ಸಂಘಟನಾತ್ಮಕವಾಗಿ ಸದೃಡಗೊಂಡಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡುತ್ತ, ಅಂತಿಮವಾಗಿ ಸತ್ಯಕ್ಕೆ ಗೆಲುವಾಗುತ್ತದೆ ಎಂಬುದಕ್ಕೆ ಮನೀಶ್ ಸಿಸೋಡಿಯಾ ಅವರ ಬಿಡುಗಡೆಯೇ ಸಾಕ್ಷಿ. ನಮ್ಮ ಉನ್ನತ ನಾಯಕರೆಲ್ಲರೂ ಒಬ್ಬೊಬ್ಬರಾಗಿ ಬಿಡುಗಡೆಯಾಗುತ್ತಿದ್ದಾರೆ. ಸರ್ವಾಧಿಕಾರಿಯ ಮುಂದೆ ಮಂಡಿಯೂರಿ ಕೂರುವುದಕ್ಕಿಂತ ಜೈಲಿಗೆ ಹೋಗಲು ಆಯ್ಕೆ ಮಾಡಿದ ದೇಶಭಕ್ತ ಮತ್ತು ಕ್ರಾಂತಿಕಾರಿ ನಾಯಕರ ಸೈನಿಕರು ಎಂದು ನಾವು ಹೆಮ್ಮೆಪಡುತ್ತೇವೆ. ಇಂದು ದೇಶದ ಪ್ರಜಾಪ್ರಭುತ್ವವು ಅರವಿಂದ್ ಕೇಜ್ರಿವಾಲ್ ರೂಪದಲ್ಲಿ ಜೈಲಿನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.