ಬೆಂಗಳೂರು, (www.thenewzmirror.com) ;
ಮತದಾನ ಮಾಡಲು ಅರ್ಹರಾಗಿದ್ದರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ವಾ.? ಹಾಗಿದ್ರೆ ಇಲ್ಲಿದೆ ಒಂದು ಸುವರ್ಣಾವಕಾಶ. ಆಗಸ್ಟ್ 20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 23/2024-ERS (Vol.IV), ಇದರ ಅನ್ವಯ ವಿಶೇಷ ಮತದಾರರ ಪಟ್ಟಿ 2025 ಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಪರಿಷ್ಕರಣೆ ಸಂಧರ್ಭದಲ್ಲಿ ಹೊಸದಾಗಿ ಸೇರ್ಪಡೆಗೆ ಹಾಗೂ ಪಟ್ಟಿಯಲ್ಲಿ ಹೆಸರಿಲ್ಲದಿದ್ರೂ ಅಥವಾ ವಿಳಾಸ ಬದಲಾವಣೆಯಾಗಿದ್ದರೆ ಅದನ್ನ ಸರಿಪಡಿಸಲೂ ಅವಕಾಶ ನೀಡಲಾಗಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ವೇಳಾಪಟ್ಟಿಯ ವಿವರ
20ನೇ ಆಗಸ್ಟ್ 2024 (ಮಂಗಳವಾರ) ರಿಂದ 18ನೇ ಅಕ್ಟೋಬರ್ 2024 (ಶುಕ್ರವಾರ) ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಪಟ್ಟಿಯಲ್ಲಿ ಸೇರ್ಪಡೆ ಅಥವಾ ರದ್ದು ಮಾಡಿಸಲು ಅವಕಾಶ ಇರಲಿದೆ. ಹಾಗೆನೇ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನ ನೀಡಲೂ ಅವಕಾಶ ಕಲ್ಪಿಸಲಾಗಿದೆ.
19ನೇ ಅಕ್ಟೋಬರ್ 2024 (ಶನಿವಾರ) ರಿಂದ 28ನೇ ಅಕ್ಟೋಬರ್ 2024 (ಸೋಮವಾರ) ರ ವರೆಗೆ ನಮೂನೆ 1 ರಿಂದ 8 ರ ತಯಾರಿ ಹಾಗೂ ಅರ್ಹತಾ ದಿನಾಂಕ 01.01.2025 ರಂತೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
29ನೇ ಅಕ್ಟೋಬರ್ 2024 ರಂದು (ಮಂಗಳವಾರ) ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುತ್ತದೆ.
ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗಿ 29ನೇ ಅಕ್ಟೋಬರ್ 2024 (ಮಂಗಳವಾರ) ರಿಂದ 28ನೇ ನವೆಂಬರ್ 2024 (ಗುರುವಾರ) ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರಲಿದೆ.
01ನೇ ಜನವರಿ 2025 ರೊಳಗೆ (ಬುಧವಾರ) ಮತದಾರರ ಪಟ್ಟಿಗಳ ಗುಣಮಟ್ಟ ಪರಿಶೀಲನೆ ನಡೆಸಿ ಅಂತಿಮ ಪಟ್ಟಿಯನ್ನ ಆನ್ ಲೈನ್ ಗೆ ಅಪ್ ಲೋಡ್ ಮಾಡುವ ಕೆಲಸ ನಡೆಯಲಿದೆ.
06ನೇ ಜನವರಿ 2025 ರಂದು (ಸೋಮವಾರ) ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುತ್ತೆ ಅಂತ ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.