ಬೆಂಗಳೂರು,(www.thenewzmirror.com) ;
ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಮೇ.31ರವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಡೆಡ್ ಲೈನ್ ಮೀರಿದ ಮೇಲೂ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ.
ಇಡೀ ದೇಶದಲ್ಲಿ 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ರಾಜ್ಯದಲ್ಲಿ ಸಾರಿಗೆ ಇಲಾಖೆ ಮೂರು ಬಾರಿ ಅವಧಿ ವಿಸ್ತರಣೆ ಮಾಡಿದ್ದು, ಮೂರನೇ ಡೆಡ್ ಲೈನ್ ಇದೇ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ.
ಡೆಡ್ ಲೈನ್ ಮತ್ತೆ ವಿಸ್ತರಣೆ ಮಾಡೋದಿಲ್ಲ ಅಂತ ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಸಿ.ಮಲ್ಲಿಕಾರ್ಜುನ ಈಗಾಗಲೇ ತಿಳಿಸಿದ್ದಾರೆ. ಆದರೆ HSRP ಅಳವಡಿಕೆ ವಿಚಾರದಲ್ಲಿ ಇರುವ ಸಮಸ್ಯೆಗಳನ್ನ ಬಗೆಹರಿಸೋದನ್ನ ಮಾತ್ರ ಮಾಡಿಲ್ಲ.
2019 ಏಪ್ರಿಲ್ 1 ಕ್ಕೂ ಮೊದಲ ರಾಜ್ಯಾದ್ಯಂತ ಸರಿಸುಮಾರು 2 ಕೋಟಿಗೂ ಅಧಿಕವಾಹಗನಗಳಿವೆ. ಮೂಲಗಳ ಪ್ರಕಾರ ಇದೂವರೆಗೂ 80 ಲಕ್ಷಕ್ಕೂ ಅಧಿಕ ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಡೆಡ್ ಲೈನ್ ಒಳಗೆ ಹೊಸ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಜೂ. 1 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ದಂಡ ವಿಧಿಸುವಲ್ಲಿ ಮುತುವರ್ಜಿ ವಹಿಸಿರುವ ಸಾರಿಗೆ(RTO) ಇಲಾಖೆ ಅಧಿಕಾರಿಗಳು HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆ ಮಾತ್ರ ಬರೆಹರಿಸೋಕೆ ಮುಂದಾಗುತ್ತಿಲ್ಲ.
ನಗರ ಪ್ರದೇಶಗಳಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು, ಆದರೆ ಹಳ್ಳಿ ಪ್ರದೇಶಗಳಲ್ಲಿ ನೋಂದಣಿಯೇ ದೊಡ್ಡ ಸಮಸ್ಯೆ ಆಗಿದೆ. ಹರಸಾಹಸ ಪಟ್ಟು ಆನ್ ಲೈನ್ ನೋಂದಣಿ ಮಾಡಿಕೊಂಡರೆ ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಮತ್ತೆ ಸಮಸ್ಯೆ ಎದುರಾಗುತ್ತಿದೆ. ಕಾರಣ ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಶೋರೂಂ ಗೆ ಹೋಗಿ ಅಳವಡಿಕೆ ಮಾಡಿಕೊಳ್ಳುವುದು, ಮತ್ತೊಂದು ಮನೆ ಬಳಿಯೇ ಅಳವಡಿಕೆ ಮಾಡಿಕೊಳ್ಳಿವುದು. ಈ ಎರಡು ಬಗೆಯಲ್ಲಿ ಕೇವಲ ಶೋ ಗೆ ತೆರಳಿ ಅಳವಡಿಕೆ ಮಾಡಿಕೊಳ್ಳೋಕೆ ಹೆಚ್ಚು ಅವಕಾಶ ನೀಡಲಾಗಿದೆ.
ಮನೆಯಲ್ಲಿ ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಆನ್ ಲೈನ್ ರಿಜಿಸ್ಟರ್ ಸಮಯದಲ್ಲಿ ಪಿನ್ ಕೋಡ್ ಎಂಟ್ರಿ ಮಾಡಿದ ತಕ್ಷಣ ನಿಮ ಏರಿಯಾದಲ್ಲಿ ಸೌಲಭ್ಯವಿಲ್ಲ ಎನ್ನುವುದು ತೋರಿಸುತ್ತಿದೆ. ಇದೂ ಕೂಡ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ನಿಗದಿತ ವೇಗ ಪಡೆಯಲು ಅಡ್ಡಿಯಾಗುತ್ತಿದೆ.
ಸಾರ್ವಜನಿಕರು ಹೇಳುವುದು ಏನು?
ಈಗಾಗಲೇ ಅಂತಿಮ ಡೆಡ್ ಲೈನ್ ನೀಡಲಾಗಿದೆ. ಆದರೆ ಅವಿದ್ಯಾವಂತರು ಆನ್ ಲೈನ್ ನಲ್ಲಿ ಹೇಗೆ ನೊಂದಣಿ ಮಾಡುವುದು, ಕೆಲಸ ಕಾರ್ಯ ಬಿಟ್ಟು ಶೋರೂಂ ಗೆ ಹೋಗಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದು ಹೇಗೆ.? ದೂರದ ಹಳ್ಳಿಯಿಂದ ತಾಲೂಕು ಮಟ್ಟದಲ್ಲಿ ಇರುವ ಶೋರೂಂ ಗೆ ಹೋಗಬೇಕು ಅಂದರೆ ಒಂದು ದಿನ ಸಮಯ ವ್ಯರ್ಥ. ವ್ಯವಸ್ಥೆ ಕೊಟ್ಟು ಡೆಡ್ ಲೈನ್ ಕೊಡಲಿ ಅಂತ ಹೇಳುತ್ತಾರೆ ದ್ವಿಚಕ್ರ ವಾಹನ ಮಾಲೀಕ ತಾರಕೇಶ್.