ಬೆಂಗಳೂರು, (www.thenewzmirror.com) ;
ಶಕ್ತಿ ಯೋಜನೆ ಜಾರಿಯಾಗಿದ್ದರೂ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗಳು ಬಡವಾಗುತ್ತಿವೆಯಾ.? ಅಥವಾ ಶಕ್ತಿ ಯೋಜನೆಯಡಿ ಸಂಸ್ಥೆಗಳಿಗೆ ಬರಬೇಕಾಗಿರುವ ಹಣ ಸಂದಾಯ ಆಗುತ್ತಿಲ್ವಾ.? ಇಂಥದೊಂದು ಪ್ರಶ್ನೆ ಬಿಎಂಟಿಸಿ ಸಿಬ್ಬಂದಿಯನ್ನ ಕಾಡುತ್ತಿದೆ.
ಅಷ್ಟಕ್ಕೂ ಈ ಪ್ರಶ್ನೆ ಕಾಡೋದಕ್ಕೂ ಒಂದು ಕಾರಣವಿದೆ. ಪ್ರತಿ ವರ್ಷ ವಿಶ್ವ ಕಾರ್ಮಿಕರ ದಿನಾಚರಣೆಯಂದು ಸಿಬ್ಬಂದಿಗೆ ಸಿಹಿ ಹಂಚಲಾಗುತ್ತಿತ್ತು. ಆದರೆ ಈ ಬಾರಿ ಸಿಹಿ ಇರಲಿ ಒಂದು ಚಾಕಲೇಟ್ ಕೂಡ ಹಂಚುವ ಕೆಲಸ ಬಿಎಂಟಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಡಿಲ್ಲ. ಇದು ಸಿಬ್ಬಂದಿಯ ಅಸಮಧಾನಕ್ಕೆ ಕಾರಣವಾಗಿದೆ.
ಪ್ರತಿ ವರ್ಷ ಮೇ 1 ನೇ ತಾರೀಖಿನಂದು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತೆ. ಆ ದಿನದಂದು ಸಂಸ್ಥೆಯ ಸಿಬ್ಬಂದಿಗೆ ಆಯಾ ಡಿಪೋಗಳಲ್ಲಿ ಸಿಹಿ ಹಂಚಿ ಸಂಭ್ರಮಿಸುವ ಪ್ರತೀತಿ ನಡೆದುಕೊಂಡು ಬರುತ್ತಿತ್ತು. ಆದರೆ ಈ ಬಾರಿ ಶಕ್ತಿಯೋಜನೆ ಜಾರಿಯಾಗಿದೆ. ನಷ್ಟದಲ್ಲಿದ್ದ ಸಂಸ್ಥೆ ಹತ್ರತ್ರ 100 ಕೋಟಿ ಲಾಭದತ್ತ ಮುಖ ಮಾಡಿದೆ ಎನ್ನುವ ಮಾತುಗಳ ನಡುವೆನೇ ಅಧಿಕಾರಿಗಳ ನಡೆ ಅಸಮಧಾನ ಹಾಗೂ ಅನುಮಾನಕ್ಕೆ ಕಾರಣವಾಗಿದೆ.
ಪ್ರತಿ ಡಿಪೋಗಳಲ್ಲಿ ಇಂಥ ಸಂಧರ್ಭದಲ್ಲಿ ಖರ್ಚು ಮಾಡುವುದಕ್ಕೆ ಅಂತಾನೇ ಇಂತಿಷ್ಟು ಹಣ ನಿಗಮದ ವೆಚ್ಚದಲ್ಲಿ ಉಲ್ಲೇಖವಾಗಿರುತ್ತೆ. ಹೀಗಿದ್ದರೂ ಕಾರ್ಮಿಕ ದಿನದಂದು ಸಿಹಿ ಹಂಚಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಇಷ್ಟು ದಿನ ಕಾಲು ಕೆಜಿನೋ ಅರ್ಧ ಕೆಜಿನೋ ಸ್ವೀಟ್ ಕೊಡ್ತಿದ್ದ ಅಧಿಕಾರಿಗಳು ಈ ಬಾರಿ ಕನಿಷ್ಢ ಒಂದು ಚಾಕಲೇಟು ನೀಡದೆ ಇರೋದು ಬೇಸರ ತರಿಸಿದೆ ಅಂತ ಹೇಳ್ತಾರೆ ಸಿಐಟಿಯು ಜಂಟಿ ಕಾರ್ಯದರ್ಶಿ ಆನಂದ್.
ಮೇ 1 ವಿಶ್ವ ಕಾರ್ಮಿಕರ ದಿನಾಚರಣೆ. BMTC ಬಸ್ ಡಿಪೋ ಗಳಲ್ಲಿ ಪ್ರತಿ ವರ್ಷ ಕಾರ್ಮಿಕರಿಗೆ ಸಿಹಿ ಹಂಚುತ್ತಾರೆ ಆದರೆ ಈ ವರ್ಷ ಕಾರ್ಮಿಕರಿಗೆ ಸಿಹಿ ತಿನ್ನುವ ಭಾಗ್ಯವಿಲ್ಲ ಅಂದರೆ ಎಷ್ಟು ಬಡವಾಗಿದೆ ದುಡಿಯುವ ಶ್ರಮಿಕ ವರ್ಗದ ಕಾರ್ಮಿಕ ಸಿಬ್ಬಂದಿಗಳಿಗೆ ಒಂದು ಸಿಹಿ ಹಂಚುವ ಯೊಗ್ಯತೆ ಇಲ್ಲದ್ದಂತಾಗಿದೆ ಸ್ವಾಮಿ ಎಂದು ನೋವನ್ನ ತೋಡಿಕೊಳ್ಳುತ್ತಾರೆ ಎಲ್ಲ ಡಿಪೋದ ಚಾಲಕರು.
ಕಾರ್ಮಿಕ ಇಲಾಖೆ ಅಧಿಕಾರಿಗಳೇ ಇದು ಸರಿನಾ.?
ಬಿಎಂಟಿಸಿ ತನ್ನ ಅಯವ್ಯಯದಲ್ಲಿ ಕಾರ್ಮಿಕ ಇಲಾಖೆಗೆ ಅಂತ ಹತ್ತಾರು ಕೋಟಿ ಅನುದಾನ ಮೀಸಲಿಡುತ್ತೆ. ಆಯುಧ ಪೂಜೆಯಲ್ಲಿ ಹಣ ನೀಡದೆ, ಕಾರ್ಮಿಕ ದಿನಾಚರಣೆ ದಿನ ಸಿಹಿ ಹಂಚದೆ ಇರೋದು ಸರಿನಾ ಎನ್ನುವ ಪ್ರಶ್ನೆ ಶ್ರಮಿಕ ವರ್ಗ ಬಿಎಂಟಿಸಿ ಕಾರ್ಮಿಕ ಇಲಾಖೆಗೆ ಮಾಡುತ್ತಿದೆ. ಹಬ್ಬ, ಹರಿದಿನಗಳಲ್ಲಿ ಖರ್ಚು ಮಾಡಲಿ ಅಂತಾನೇ ಮೀಸಲಿಟ್ಟ ಹಣವನ್ನ ಸಿಬ್ಬಂದಿಗೆ ಖರ್ಚು ಮಾಡದೆ ಪುಸ್ತಕದಲ್ಲಿ ಖರ್ಚು ಮಾಡಿದ್ದೀವಿ ಅಂತ ಲೆಕ್ಕ ತೋರಿಸಿ ಆ ಹಣವನ್ನ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನವನ್ನ ಕೆಲ ಕಾರ್ಮಿಕ ಮುಖಂಡರು ಮಾಡುತ್ತಿದ್ದಾರೆ.
ಶಕ್ತಿ ಯೋಜನೆ ಹಣ ಎಲ್ಲಿ ಹೋಯ್ತು.?
ಶಕ್ತಿ ಯೋಜನೆ ಜಾರಿಯಾದ ಬಳಿಕ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗಳು ಲಾಭದತ್ತ ಮುಖ ಮಾಡುತ್ತಿವೆ. ಒಂದು ಕಡೆ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿರೋದಾಗಿ ಹೇಳುತ್ತಿದೆ. ಹಾಗಿದ್ದರೆ ಸರ್ಕಾರದಿಂದ ಬಿಡುಗಡೆಯಾದ ಹಣ ಎಲ್ಲಿ ಹೋಯ್ತು. ನಷ್ಟದಿಂದ ಲಾಭದತ್ತ ಮುಖ ಮಾಡುತ್ತಿದ್ದರೂ ಸಂಸ್ಥೆಗಳಿಗಡ ಬರುತ್ತಿರೋ ಆದಾಯ ಯಾರ ಖಜಾನೆ ಸೇರುತ್ತಿದೆ ಎನ್ನುವ ಪ್ರಶ್ನೆಗೆ ನಿಗಮದ ಎಂಡಿ ಉತ್ತರ ಕೊಡಬೇಕಿದೆ. ಈ ಬಗ್ಗೆ ಬಿಎಂಟಿಸಿ ಎಂಡಿ ಅವರನ್ನ ಸಂಪರ್ಕಿಸಲು ಅವರ ಆಪ್ತ ಶಾಖೆಯನ್ನ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.