ಬೆಂಗಳೂರು, (www.thenewzmirror.com) :
ಲೋಕಸಭೆ ಚುನಾವಣಾ ಕಾವು ರಂಗೇರುತ್ತಿದೆ. ಮತ್ತೊಂಡ್ಕಡೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗುವ ಹಂತದಲ್ಲಿದೆ. ಕೆಲ ಸರ್ವೆ ಪ್ರಕಾರ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನೇರಿ ಹ್ಯಾಟ್ರಿಕ್ ಬಾರಿಸುತ್ತಾರೆ ಅನ್ನೋ ವರದಿನೂ ಬರುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ 3.0 ಸರ್ಕಾರ ರಚನೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
ಕರ್ನಾಟಕದ ಲೋಕಸಮರದ ರಣಕಣವೂ ರಂಗೇರುತ್ತಿದೆ. ಈಗಾಗಲೇ ಕಾಂಗ್ರೆಸ್ ಎರಡು, ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ನಡುವೆ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಅನ್ನೋ ಕುತೂಹಲ ತೀವ್ರವಾಗಿದೆ. ಕಳೆದ 2 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ್ ಸಿಂಹರಿಗೆ ಈ ಬಾರಿ ಟಿಕೆಟ್ ಮಿಸ್ ಆಗಲಿದೆ ಅಂತಾ ಹೇಳಲಾಗುತ್ತಿದೆ.
ಇದಕ್ಕಾಗಿ ದೆಹಲಿಗೆ ತೆರಳಿ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನ ಭೇಟಿ ಮಾಡಿ ಬಂದಿದ್ದಾರೆ ಪ್ರತಾಪ್ ಸಿಂಹ. ಪ್ರತಾಪ್ ಸಿಂಹ ಬದಲು ಈ ಬಾರಿ ಯಧುವಂಶದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಇವರನ್ನ ಬಿಟ್ಟು ಅವರನ್ನ ಬಿಟ್ಟು ಇನ್ನೋಬ್ಬರು ಎನ್ನುವ ಹಾಗೆ ಮೈಸೂರು ಬಿಜೆಪಿ ಟಿಕೆಟ್ ರೇಸ್ ನಲ್ಲಿ 3ನೇ ಹೆಸರು ಕೇಳಿಬರುತ್ತಿದೆ. ಅದುವೇ ಶಿಲ್ಪಿ ಅರುಣ್ ಯೋಗಿರಾಜ್.
ಈ ಬಾರಿ ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ದೇವರು ರಾಮನ ಬಾಲ ರೂಪವಾದ ರಾಮ ಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ.
ಶ್ರೀರಾಮನ ಸುಂದರ ಮೂರ್ತಿ ಕೆತ್ತನೆಯ ಮೂಲಕ ಪ್ರಸಿದ್ಧಿ ಹೊಂದಿದ ಯೋಗಿರಾಜ್‌ಗೆ ಪ್ರಧಾನಿ ಮೋದಿ ಸೇರಿದಂತೆ ದೇಶ-ವಿದೇಶಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ಈ ಬಾರಿ ಅವರಿಗೆ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಶೀಘ್ರವೇ ಬಿಜೆಪಿ ತನ್ನ 2ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಅನ್ನೋದು ತಿಳಿದುಬರಲಿದೆ.